ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಬೇಕು ಎನ್ನುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ರಾಯಚೂರು ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಆನಂತರ ಈ ಕುರಿತು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಂಯೋಜನೆ, ಇ-ಆಫೀಸ್ ಸೇರಿದಂತೆ ಒಟ್ಟು 21 ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿವನ್ನು ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿಯ ವ್ಯವಸ್ಥೆ ಮಾಡಬೇಕು. ಉತ್ತಮ ಗುಣಮಟ್ಟದ ಟೇಬಲ್, ಕುರ್ಚಿ ಹಾಗೂ ಅಲ್ಮರಾ ನೀಡಬೇಕು. ಉತ್ತಮ ಗುಣಮಟ್ಟದ ಮೊಬೈಲ್ ಪೋನ್, ಸಿಯಿಜಿ ಸಿಮ್ ಮತ್ತು ಡಾಟಾ, ಗೀಗಲ್ ಕ್ರೋಮ ಬುಕ್, ಲ್ಯಾಪ್ಟಾಪ್ , ಪ್ರಿಂಟರ್ ಹಾಗೂ ಸ್ಕ್ಯಾನರ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಮೊಬೈಲ್ ತಂತ್ರಾಂಶಗಳ ಕರ್ತವ್ಯದ ವಿಚಾರವಾಗಿ ಇಲ್ಲಿಯವರೆಗೆ ಅಮಾನತುಗಳನ್ನು ರದ್ದುಪಡಿಸಬೇಕು. ಕೆಸಿಎಸ್ಆರ್ ನಿಯಮಾವಳಿಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೊ ಹಾಕದಿರಲು ಹಾಗೂ ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಎಲ್ಲ ಪ್ರಥಮ ದರ್ಜೆ ಸಹಾಯಕ ಹಾಗೂ ಕಂದಾಯ ನಿರೀಕ್ಷಕರಿಗೆ ಖಾಲಿ ಇರುವ ಹುದ್ದೆಗಳಿಗೆ ಬಡ್ತಿ ನೀಡಬೇಕು, ಅಂತರ ಜಿಲ್ಲಾ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆಯ ಚಾಲನೆ ನೀಡಬೇಕು ಹಾಗೂ ಅಂತಿಮ ಆದೇಶಕ್ಕಾಗಿ ಬಾಕಿ ಇರುವ ಪ್ರಕರಣಗಳ ವರ್ಗಾವಣೆ ಆದೇಶ ನೀಡಬೇಕು. ಶಿಷ್ಟಾಚಾರ ಕರ್ತವ್ಯದಿಂದ ಗ್ರಾಮದಿಂದ ಅಧಿಕಾರಿಗಳಿಗೆ ಕೈಬಿಡಬೇಕು. ಕೆಲಸ ಅವಧಿಯ ಮುನ್ನ ಹಾಗೂ ನಂತರ ನಡೆಸಲಾಗುವ ಎಲ್ಲ ಬಗೆಯ ವರ್ಚ್ಯೂಲ್ ಸಭೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಅ.3ರಂದು ರಾಯಚೂರು ಬಂದ್: ಅಂಬಣ್ಣ ಅರೋಲಿಕರ್
ಪ್ರತಿಭಟನೆಯಲ್ಲಿ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುರೇಂದ್ರ ಪಾಟೀಲ, ಪದಾಧಿಕಾರಿಗಳಾದ ಮಂಜುನಾಥ, ರಾಜಶೇಖರ, ಮನ್ಸೂರ್ ಅಲ್ ಹಸನ್, ಸಚಿನಕುಮಾರ, ಗಂಗಪ್ಪ, ಮಹಾಂತೇಶ ರಾಥೋಡ್, ಕಬೀರ ಹುಸೇನ್, ಶಿವಕುಮಾರ ರಾಥೋಡ್, ಯಂಕಮ್ಮ, ದೀಪಾ, ತಸ್ಲೀಮ್, ಶ್ವೇತಾನಾಯಕ, ಆಫ್ರೀನ್ ಬೇಗಂ, ಸುನೀತಾ, ಶಾಂತಮ್ಮ ಉಪಸ್ಥಿತರಿದ್ದರು.
