ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗ್ರಾಮಕ್ಕೆ ಭೇಟಿ ನೀಡಿ, ದಲಿತರ ಜಮೀನುಗಳಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಜಿ ಶಾಸಕ ಸಿ ಎಸ್ ನಿರಂಜನ್ ಕುಮಾರ್ ಮತ್ತು ಮಾಜಿ ಸಚಿವ ಎನ್ ಮಹೇಶ್ ಜತೆಗೆ ಸ್ಥಳಕ್ಕೆ ಭೇಟಿ ನೀಡಿದ ಅವರು, ಸಂತ್ರಸ್ತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.
“ಹಲವಾರು ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ತಾಲೂಕಿನ ಹಿರೀಕಾಟಿ, ದೊಡ್ಡಹುಂಡಿ ಗ್ರಾಮದ ಬಡ ದಲಿತರ ಜಮೀನಲ್ಲಿ ಬಂಡಿದಾರಿ ನೆಪವೂಡ್ಡಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುವ ಮೂಲಕ ಪ್ರಭಾವಿಗಳು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ತಹಶೀಲ್ದಾರ್ ಹಾಗೂ ಬೇಗೂರು ಪೋಲಿಸರು ಆವರ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ” ಎಂದು ಸಂತ್ರಸ್ತರು ದೂರಿದ್ದರು.
ತಹಶೀಲ್ದಾರ್ ಅವರಿಂದ ಮಾಹಿತಿ ಪಡೆದು, “ಬಂಡಿದಾರಿ ನಿರ್ಮಾಣಕ್ಕೂ ನೀವು ಮಾಡಿರುವ ರಸ್ತೆಗೂ ಸೌಮ್ಯತೆಯಿದೆ. ಎಂಟು ಅಡಿಗಳಷ್ಟು ಇರುವ ದಾರಿಯನ್ನು ಅಧಿಕಾರಿಗಳು 40 ಅಡಿಗಳಷ್ಟು ವಿಸ್ತರಣೆ ಮಾಡಲು ಅಧಿಕಾರ ಕೊಟ್ಟಿದ್ದು ಯಾರು?” ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
“ದಲಿತರನ್ನು ಹೆದರಿಸಿ ರಾತ್ರೋರಾತ್ರಿ ರಸ್ತೆ ನಿರ್ಮಾಣ ಮಾಡುವ ಪ್ರಮೇಯವಾದರು ಏನಿತ್ತು? ನಕಾಶೆಯಲ್ಲಿ ದಾರಿ ಇರುವುದೇ ಖಾತ್ರಿಯಾಗಿದ್ದರೆ, ರೈತರಿಗೆ ನೋಟಿಸ್ ನೀಡದೆ ರಸ್ತೆ ನಿರ್ಮಾಣ ಮಾಡಿದ್ದಾದರೂ ಯಾಕೆ!? ಎಂದು ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಆರೋಪ ; ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ
“ನಾವು ರಾಜಕಾರಣಿಗಳು ತಾತ್ಕಾಲಿಕ. ನೀವು ಅಧಿಕಾರಿಗಳು ಶಾಶ್ವತ ಅಧಿಕಾರದಲ್ಲಿರುತ್ತೀರಿ, ಅಂಥದರಲ್ಲಿ ಯಾರನ್ನೋ ಓಲೈಸಲು ಅದಿಕಾರಿಗಳು ಗುತ್ತಿಗೆದಾರಂತೆ ವರ್ತಿಸುವುದು ಸರಿಯಲ್ಲ” ಎಂದು ತಾಕೀತು ಮಾಡಿದರು.
“ಈಗಲೇ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು, ದಲಿತರ ಮೇಲೆ ಅಧಿಕಾರ ದುರ್ಬಳಕೆ ಮಾಡಿಕೊಂಡು ದರ್ಪ ತೋರಿಸಲು ಮುಂದಾದರೆ ತುಂಬಾ ತೂಂದರೆ ಎದುರಿಸಬೇಕಾಗುತ್ತದೆ” ಎಂದು ತಹಶೀಲ್ದಾರ್ ಟಿ ರಮೇಶ್ ಬಾಬು, ವೃತ್ತ ನಿರೀಕ್ಷಕ ವನರಾಜ ಹಾಗೂ ಪಿಎಸ್ಐ ಚರಣ್ ಗೌಡ ಅವರಿಗೆ ಎಚ್ಚರಿಕೆ ನೀಡಿದರು.