- ತಂಬಾಕು ಜಾಹೀರಾತು ಕಾನೂನು ಉಲ್ಲಂಘನೆ
- ಆಲ್ಕೋಹಾಲ್, ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಮೇಲೆ ತಂಬಾಕು ಜಾಹೀರಾತು ಇದ್ದರೆ ತೆರವುಗೊಳಿಸಬೇಕು. ನಿಮ್ಮ ಬಸ್‌ಗಳು ತಂಬಾಕು ಜಾಹೀರಾತು ರಹಿತವಾಗಿರಬೇಕೆಂದು ಬಸ್ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಕೆಲ ದಿನಗಳ ಹಿಂದೆ, ತಂಬಾಕು ಮುಕ್ತ ಕರ್ನಾಟಕ (ಸಿಎಫ್‌ಟಿಎಫ್‌ಕೆ) ಒಕ್ಕೂಟ, “ಅನಧಿಕೃತವಾಗಿ ಬಸ್‌ಗಳ ಮೇಲೆ ಅಳವಡಿಸುವ ತಂಬಾಕು ಜಾಹೀರಾತುಗಳನ್ನು ತೆರವುಗೊಳಿಸಬೇಕು. ಈ ರೀತಿಯ ಜಾಹೀರಾತುಗಳಿಂದ ಜನರು ಪ್ರಚೋದನೆಗೆ ಒಳಗಾಗಿ, ಅದರ ಬಳಕೆ ಹೆಚ್ಚು ಮಾಡುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಈ ರೀತಿ ಪ್ರಚಾರ ಮಾಡುವುದನ್ನು ತಡೆಯಲು ಸೂಚನೆ ನೀಡಬೇಕು” ಎಂದು ಆರೋಗ್ಯ ಇಲಾಖೆಗೆ ಮನವಿ ಮಾಡಿತ್ತು.
ಭಾರತದಲ್ಲಿ ತಂಬಾಕು ಮತ್ತು ಆಲ್ಕೋಹಾಲ್ ಉತ್ಪನ್ನಗಳ ಜಾಹೀರಾತು ನಿಷೇಧಿಸಲಾಗಿದೆ. ವಿಮಲ್ ಪಾನ್ ಮಸಾಲಾ, ರಜನಿಗಂಧ ಸೇರಿದಂತೆ ಮತ್ತಿತ್ತರ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಗಳಿಗೆ, ಜಾಹೀರಾತು ಅಳವಡಿಸದಿರಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ಈಗಾಗಲೇ ನೋಟಿಸ್ ನೀಡಿದೆ.
ಈ ಸುದ್ದಿ ಓದಿದ್ದೀರಾ?: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹೆಚ್ಚಳ; ರಾಜ್ಯದಲ್ಲಿ ವರ್ಷಕ್ಕೆ 1.4 ಲಕ್ಷ ಪ್ರಕರಣ ದಾಖಲು
ಆದರೂ, ಸೂಚನೆ ಪಾಲಿಸದೆ ತಂಬಾಕು ಮಾರಾಟ ಕಂಪನಿಗಳು ಬಸ್‌ಗಳ ಮೇಲೆ ಜಾಹೀರಾತು ಅಳವಡಿಸಲು ಒಪ್ಪಂದ ಮಾಡಿಕೊಂಡಿವೆ ಎಂದು ಸಿಎಫ್‌ಟಿಎಫ್‌ಕೆ ಆರೋಗ್ಯ ಇಲಾಖೆಗೆ ಹೇಳಿತ್ತು. ಮನವಿಯ ಬೆನ್ನಲೇ ಆರೋಗ್ಯ ಇಲಾಖೆ ಜಾಹೀರಾತು ಅಳವಡಿಕೆಗೆ ಆರೋಗ್ಯ ಇಲಾಖೆ ಕಡಿವಾಣ ಹಾಕಿದೆ.
“ಇತ್ತೀಚೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿಮಲ್, ಕೂಲ್ ಲಿಪ್ ಮತ್ತು ಆರ್‌ಎಮ್‌ಡಿಯಂತಹ ಬ್ರ್ಯಾಂಡ್‌ಗಳ ತಂಬಾಕು ಮತ್ತು ಪಾನ್ ಮಸಾಲಾ ಉತ್ಪನ್ನಗಳ ಜಾಹೀರಾತು ಇರುವುದು ಕಂಡುಬಂದಿದೆ. ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ (ಕೋಟ್ಪಾ) ಸೆಕ್ಷನ್ 5 ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆ ಎಫ್‌ಸಿಟಿಸಿ ಆರ್‍ಟಿಕಲ್ 5.3ರ ಉಲ್ಲಂಘನೆಯಾಗಿದೆ. ಇನ್ನೂ ಬಸ್‌ಗಳ ಮೇಲೆ ಜನತೆಯ ಆರೋಗ್ಯಕ್ಕೆ ಹಾನಿಕಾರಕವಾದ ತಂಬಾಕುವಿನ ಜಾಹೀರಾತು ಇರದಂತೆ ನೋಡಿಕೊಳ್ಳಿ” ಎಂದು ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಮೇ .4ರಂದು ಹೊರಡಿಸಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.