ಸಾಲ ತೀರಿಸುವಂತೆ ಬ್ಯಾಂಕ್ ಅಧಿಕಾರಿಗಳು ವಕೀಲರ ಮೂಲಕ ಮನೆಗೆ ಕಳುಹಿಸಿದ ನೋಟಿಸ್‌ಗೆ ಹೆದರಿದ ರೈತರೊಬ್ಬರು ಮೈಮೇಲೆ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೊತಂಗಲ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಗ್ರಾಮದ ಪಾಂಡಪ್ಪ ತಿಪ್ಪಣ್ಣ (45) ಆತ್ಮಹತ್ಯೆ ಮಾಡಿಕೊಂಡ ರೈತ. ಪಾಂಡಪ್ಪ ಮೂರು ಎಕರೆ ಜಮೀನು ಹೊಂದಿದ್ದು, ತಾಲೂಕಿನ ನಿಡಗುಂದಾ ಶಾಖೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ (ಕೆಜಿಬಿ) ನಲ್ಲಿ 1 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳು ವಕೀಲರ ಮೂಲಕ ಎರಡು ಬಾರಿ ನೋಟಿಸ್ ನೀಡಿದ್ದರು.
ಬ್ಯಾಂಕ್ ಅಧಿಕಾರಿಗಳ ನೋಟಿಸ್‌ಗೆ ಹೆದುರಿ ಎರಡು ಎತ್ತುಗಳನ್ನು ಮಾರಾಟ ಮಾಡಿ ಸಾಲ ತೀರಿಸಲು ಮುಂದಾಗಿದ್ದರು. ಆದರೆ, ಪತ್ನಿ ವಿರೋಧಿಸಿದ್ದರು. ಇದರಿಂದ ದಾರಿ ಕಾಣದೆ ಕಂಗಲಾದ ರೈತ ಪಾಂಡಪ್ಪ ಪೆಟ್ರೊಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್ನಲಾಗಿದೆ.
ಮೈ ಸುಟ್ಟುಕೊಂಡು ತೀವ್ರವಾಗಿ ಗಾಯಗೊಂಡ ಅವರನ್ನು ನಿಡಗುಂದಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳಿಕ ಸೇಡಂ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ತೆರಳುವ ವೇಳೆ ಸೆ.26ರಂದು ಸಂಜೆ ಕೊನೆಯುಸಿರೆಳೆದಿದ್ದಾರೆʼ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪಾರ್ಟಿ ವೇಳೆ ಯುವಕನ ವೇಳೆ ಗುಂಡಿನ ದಾಳಿ
ಈ ಕುರಿತು ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.