ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಚಳ್ಳೂರ್ ರಸ್ತೆಯು ಪೂರ್ತಿ ಹದೆಗಟ್ಟಿದ್ದು, ರಸ್ತೆ ದುರಸ್ತಿ ಕಾಣದೆ ವರ್ಷಗಳೇ ಕಳೆದಿದೆ. ರಸ್ತೆಯಲ್ಲಿ ಗುಂಡಿಯೋ ಅಥವಾ ಗುಂಡಿಯಲ್ಲಿ ರಸ್ತೆಯೋ ಎನ್ನುವಂತಿದ್ದು, ವಾಹನ ಸವಾರರು ಭೀತಿಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಕಾರಟಗಿ ತಾಲೂಕು ಕೇಂದ್ರದಿಂದ ಚಳ್ಳೂರ್ ಗ್ರಾಮಕ್ಕೆ ಸುಮಾರು 7 ಕಿಲೋ ಮೀಟರ್ ಅಂತರವಿದೆ. ಚಳ್ಳುರ್ ಗ್ರಾಮದ ರಸ್ತೆಯು ತಾಲೂಕಿಗೆ ಹೋಗುವ ಮುಖ್ಯ ರಸ್ತೆಯಾಗಿದ್ದು, ಸುಮಾರು ಹಳ್ಳಿಗಳಿವೆ. ಈ ಗ್ರಾಮದ ಮುಖ್ಯರಸ್ತೆಯಲ್ಲಿ ರಸ್ತೆಗುಂಡಿಗಳು ಬಿದ್ದಿರುವುದರಿಂದ ತಾಲೂಕಿಗೆ ತೆರಳಬೇಕಾದ ವಾಹನ ಸವಾರರು ಪರದಾಡಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಸ್ಥಳೀಯರು ರಸ್ತೆಯ ದುರಸ್ತಿಗೆ ಒತ್ತಾಯಿಸಿದ್ದರೂ ಕೂಡ, ಸಂಬಂಧಿಸಿದವರು ಕ್ರಮ ವಹಿಸಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ.
ಅನಾರೋಗ್ಯ ಸೇರಿದಂತೆ ತುರ್ತು ಸಂದರ್ಭದಲ್ಲಿ ಗ್ರಾಮದಿಂದ ತಾಲೂಕಿಗೆ ತೆರಳಬೇಕಾದರೆ ಪರದಾಡಬೇಕಿದೆ. ರಸ್ತೆ ದುರಸ್ತಿ ಇರುವ ಕಾರಣದಿಂದಾಗಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದ್ದರಿಂದ ಮಾರ್ಗ ಮಧ್ಯದಲ್ಲೇ ಎಷ್ಟೋ ಸಾವು ನೋವುಗಳಾಗಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸ್ಥಳೀಯ ನಿವಾಸಿ, ಕಾನೂನು ಪದವಿ ವಿದ್ಯಾರ್ಥಿನಿಯಾಗಿರುವ ಯಮನಮ್ಮ ಮಾತನಾಡಿ, “ರಸ್ತೆ ಹದಗೆಟ್ಟಿರುವುದರಿಂದ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೆ ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ. ರಸ್ತೆ ಪೂರ್ತಿ ಹದೆಗಟ್ಟಿರುವುದರಿಂದ ಗ್ರಾಮಕ್ಕೆ ಕಾರಣಕ್ಕೆ ಸಾರಿಗೆ ಬಸ್‌ಗಳೂ ಕೂಡ ಬರಲು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ಹಲವು ಮಕ್ಕಳಿಗೆ ತೊಂದರೆಗಳಾಗುತ್ತಿವೆ” ಎಂದು ತಿಳಿಸಿದರು.
“ರಸ್ತೆ ಮೂಲಕ ನಡೆದುಕೊಂಡು ಶಾಲಾ ಕಾಲೇಜಿಗೆ ತೆರಳುವ ವೇಳೆ ವಾಹನಗಳಿಂದಾಗಿ ಕೆಸರು ಮೆತ್ತಿಸಿಕೊಂಡ ಘಟನೆಗಳು ಕೂಡ ನಡೆದಿದೆ. ಮಳೆ ಬಂದಾಗ ಗುಂಡಿಯಲ್ಲಿ ನೀರು ನಿಂತು ಅಪಘಾತಗಳು ಸಂಭವಿಸಿವೆ. ರಸ್ತೆ ಹದಗೆಟ್ಟಿರುವ ಕಾರಣಕ್ಕೆ ಬಸ್ ಓಡಾಡುವುದಕ್ಕೆ ಆಗುತ್ತಿಲ್ಲ, ಬಸ್ ಗಳು ಕೆಟ್ಟು ಹೋಗುತ್ತಿವೆ. ಹಾಗಾಗಿ ಗ್ರಾಮಕ್ಕೆ ಸಾರಿಗೆ ಬಸ್‌ಗಳೂ ಕೂಡ ಬರುತ್ತಿಲ್ಲ” ಎಂದು ಹೇಳಿದರು.
ಗ್ರಾಮದ ರೈತ ಸಂಘದ ಮುಖ್ಯಸ್ಥ ಸಿದ್ದರಾಮ ಮಾತನಾಡಿ, “ಸುಮಾರು 25 ವರ್ಷಗಳಿಂದ ರಸ್ತೆಯ ಇದೇ ರೀತಿಯಲ್ಲಿದೆ. ಕಾರಟಗಿ – ಚಳ್ಳೂರ್ ಗ್ರಾಮದ ರಸ್ತೆಯು ಹದೆಗಟ್ಟು ಹಳ್ಳ ಹಿಡಿದಿದೆ. ಇಲ್ಲಿ ಸಂಚಾರ ಮಾಡಬೇಕೆಂದರೆ ಹರಸಾಹಸ ಪಡಬೇಕು. ಹಲವು ವರ್ಷಗಳಿಂದ ಶಾಸಕರಿಗೆ, ಸಂಸದರಿಗೆ, ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡ ಏನೂ ಪ್ರಯೋಜನವಾಗಿಲ್ಲ. ರಸ್ತೆ ಬಗ್ಗೆ ಕೇಳಿದರೆ ಸಂಬಂಧವಿಲ್ಲದಂತೆ ಮಾತನಾಡುತ್ತಾರೆ” ಎಂದು ಕಿಡಿಕಾರಿದರು.
“ಈ ಹಿಂದೆ ಬಸವರಾಜ್ ದಡೇಸೂಗುರು ಶಾಸಕರಾಗಿದ್ದಾಗ ಮನವಿ ಮಾಡಲಾಗಿತ್ತು. ಪ್ರಸ್ತುತ ಚುನಾವಣೆ ಸಮಯದಲ್ಲಿ ಶಿವರಾಜ್ ತಂಗಡಗಿ ಅವರು ಚುನಾವಣೆ ನಿಮಿತ್ತ ಗ್ರಾಮಕ್ಕೆ ಬಂದಾಗ ರಸ್ತೆ ಬಗ್ಗೆ ಮನವಿ ಮಾಡಲಾಗಿತ್ತು. ನನ್ನನ್ನು ಗೆಲ್ಲಿಸಿ, ನಾನು ಖಂಡಿತ ರಸ್ತೆ ದುರಸ್ತಿಗೊಳಿಸುವೆ ಎಂದು ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಗೆದ್ದು, ಶಾಸಕರಾಗಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಆದರೆ ಇಲ್ಲಿಯವರೆಗೂ ಈ ಬಗ್ಗೆ ತಾನು ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ” ಎಂದರು.
ಜೀರಾಳ ಕಲ್ಗುಡಿ ಗ್ರಾಮದಲ್ಲಿ ಪಂಚಾಯತ್ ಸದಸ್ಯ ರಸ್ತೆ ಸೌಲಭ್ಯ ಕಲ್ಪಿಸಿ ಎಂದು ಕೇಳಿದ್ದಕ್ಕೆ ಸಚಿವರ ಮಧ್ಯೆದಲ್ಲಿ ಹಲವರ ನಡುವೆ ಜಟಾಪಟಿ ನಡೆದಿತ್ತು. ಆ ವೇಳೆ ಸಚಿವರು ಬಹಿರಂಗವಾಗಿಯೇ ಅವಾಚ್ಯ ಪದಗಳಿಂದ ನಿಂದಿಸಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಹಾಗಾಗಿ ನಮ್ಮ ಸಮಸ್ಯೆಯೇ ತಿಳಿಸಲು ಹೆದರಿಕೆ ಆಗುತ್ತಿದೆ ಎಂದರು.
ಬಹು ವರ್ಷಗಳಿಂದ ರಸ್ತೆಯು ನೆನೆಗುದಿಗೆ ಬಿದ್ದಿದೆ. ಹಾಳಾಗಿರುವ ಈ ರಸ್ತೆಯ ಬಗ್ಗೆ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದೇವೆ. ಮುಂದಿನ ದಿನಗಳಲ್ಲಿ ರಸ್ತೆಗೆ ಸಸಿ ನೆಟ್ಟು, ಹೋರಾಟ ಮಾಡಲಾಗುವುದು ಎಂದು ರೈತ ಸಂಘದ ಮುಖ್ಯಸ್ಥ ಸಿದ್ದರಾಮ ತಿಳಿಸಿದರು.
ಇದನ್ನು ಓದಿದ್ದೀರಾ? ಧಾರವಾಡ | ದಿವ್ಯ ಪ್ರಭು ಅವರಿಗೆ ‘ಅತ್ಯುತ್ತಮ ಜಿಲ್ಲಾಧಿಕಾರಿ’ ಪ್ರಶಸ್ತಿ
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಶಿವರಾಜ್ ತಂಗಡಗಿ ಅವರಿಗೆ ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ. ಈ ಸಮಸ್ಯೆಯ ಬಗ್ಗೆ ಸಚಿವರು, ಜಿಲ್ಲಾಧಿಕಾರಿಗಳು ಗಮನ ಹರಿಸುತ್ತಾರಾ? ಚಳ್ಳೂರ್ ಗ್ರಾಮದ ರಸ್ತೆಗೆ ಡಾಂಬರೀಕರಣ ಮಾಡಿ ಮುಕ್ತಿ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್