ತನ್ನ ಪತಿ ಮತ್ತೊಬ್ಬ ಮಹಿಳೆಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾನೆಂದು ಕಂಡುಕೊಂಡ ಪತ್ನಿ, ಆತನಿಂದ ವಿಚ್ಛೇದನ ಕೇಳಿದ್ದು, ಆಕೆಯ ಮೇಲೆ ವಿಕೃತ ಪತಿ ಆ್ಯಸಿಡ್ ಎರಚಿ ವಿಕೃತಿ ಮೆರೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ.
27 ವರ್ಷದ ಸಂತ್ರಸ್ತ ಮಹಿಳೆ ಮತ್ತು ಆಕೆಯ ವಿಕೃತ ಪತಿ 2019ರಲ್ಲಿ ಪ್ರೇಮವಿವಾಹವಾಗಿದ್ದರು. ಇತ್ತೀಚೆಗೆ, ಆತ ಮತ್ತೊಂಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾನೆಂಬುದು ಆಕೆಗೆ ಗೊತ್ತಾಗಿತ್ತು. ತನ್ನ ಪತಿಯ ನಡೆಯಿಂದ ನೊಂದ ಪತ್ನಿ, ಗಂಡನನ್ನು ತೊರೆದು ಮಲಾಡ್‌ನಲ್ಲಿರುವ ತನ್ನ ತಾಯಿ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಮಾದಕ ವ್ಯಸನಿಯೂ ಆಗಿದ್ದ ಆರೋಪಿ ಪತಿ, ಬುಧವಾರ ಆಕೆಯ ಮನೆಗೆ ನುಗ್ಗಿ, ಮಹಿಳೆಯ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ. ಆಕೆಯ ಮುಖ ಮತ್ತು ದೇಹದ ಇತರ ಭಾಗಗಳಿಗೆ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ?: ವೃದ್ದಾಪ್ಯ ವೇತನಕ್ಕಾಗಿ 2 ಕಿ.ಮೀ ತೆವಳಿಕೊಂಡೇ ಕಚೇರಿಗೆ ಬಂದ ವೃದ್ಧ ಮಹಿಳೆ; ಮನಕಲಕುವ ವಿಡಿಯೋ ವೈರಲ್
ಆರೋಪಿ, ವಿಕೃತ ಪತಿಯ ವಿರುದ್ದ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 124 (2), 311, 333 ಹಾಗೂ 352ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.