ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ಮೇಲೆ ಸೆಕ್ಷನ್ 218 ರಡಿಯಲ್ಲಿ ಪ್ರಾಸಿಕ್ಯೂಶನ್ ಮತ್ತು 17ಎ ಅಡಿಯಲ್ಲಿ ತನಿಖೆ ನಡೆಸಲು ಅನುಮತಿ ನೀಡಿದ್ದನ್ನು ರದ್ದುಪಡಿಸುವಂತೆ ಸಿಎಂ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಸೆಕ್ಷನ್ 218ರ ಅಡಿ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ರಾಜ್ಯಪಾಲರ ಆದೇಶದಲ್ಲಿನ ಸೆಕ್ಷನ್ 17ಎಗೆ ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿ, ತನಿಖೆ ನಡೆಸುವುದನ್ನು ಊರ್ಜಿತಗೊಳಿಸಿ ಘನ ನ್ಯಾಯಾಲಯ ಆದೇಶ ಪ್ರಕಟ ಮಾಡಿದೆ” ಎಂದರು.
“ಲೋಕಾಯುಕ್ತ ತನಿಖೆಗೆ ಆದೇಶವಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ಸಿದ್ದತೆ ನಡೆಯುತ್ತಿದೆ.
ಕಾಂಗ್ರೆಸ್ ಪಕ್ಷದ ಮೇಲೆ ಒಂದು ನೀತಿಯಾದರೆ, ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಮೇಲೆ ಮಮಕಾರದ ನೀತಿಯಾಗಿದೆ. ರಾಜ್ಯಪಾಲರು ಸಂವಿಧಾನಾತ್ಮಕ ನಡೆ ಅನುಸರಿಸದೆ ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಇನ್ನೊಂದು ಎನ್ನುವ ಇಬ್ಬಂದಿತನ ತೋರಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯವರು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಮಾಡುವ ದುರುದ್ದೇಶದಿಂದ ಷಡ್ಯಂತ್ರ ರೂಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಾಗಿ ರಾಜ್ಯದ ಜನತೆ ಬಹುಮತ ನೀಡಿ ಆಯ್ಕೆ ಮಾಡಿರುವ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
“ಸಿದ್ದರಾಮಯ್ಯನವರ ರಾಜಿನಾಮೆ ಕೇಳುವ ಬಿಜೆಪಿಗರು, ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ವಿರುದ್ದ ತನಿಖೆ ನಡೆದ ಸಂಧರ್ಭದಲ್ಲಿ ರಾಜಿನಾಮೆ ನೀಡಿದ್ದರೆ” ಎಂದು ಪ್ರಶ್ನಿಸಿದರು.
“2002ರ ಫೆಬ್ರವರಿ 28ರಂದು ಗುಜರಾತಿನ ಅಹಮದಾಬಾದ್‌ನಲ್ಲಿನ ಚಮನ್‌ಪುರ್ ಪ್ರದೇಶದ ಗುಲ್ಬರ್ಗ್ ಸೊಸೈಟಿಯಲ್ಲಿ ಮಾಜಿ ಸಂಸದ ಈಶಾನ್ ಜಾಪ್ರಿ ಸೇರಿದಂತೆ 69 ಜನರ ಹತ್ಯೆಯಾದಾಗ, ಅಂದಿನ ಗುಜರಾತಿನ ಮುಖ್ಯಮಂತ್ರಿ ಮೋದಿಯವರು ಸೇರಿದಂತೆ ಒಟ್ಟು 62 ಮಂದಿ ಹತ್ಯಾಕಾಂಡಕ್ಕೆ ಕಾರಣರೆಂದು ನರಮೇಧಕ್ಕೆ ಬಲಿಯಾದ ಕುಟುಂಬದ ಸದಸ್ಯರು ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಳ್ಳಲು ಪೊಲೀಸ್ ಇಲಾಖೆ ನಿರಾಕರಿಸಿದ ಹಿನ್ನೆಲೆಯಲ್ಲಿ ದೂರುದಾರರು ಸುಪ್ರೀಂ ಕೋರ್ಟ್ ಮೊರೆಹೋಗಿ, 2008 ಮಾರ್ಚ್ 26ರಂದು ಸುಪ್ರೀಂ ಕೋರ್ಟ್ ಪೀಠ ದೂರುದಾರರ ಅರ್ಜಿಯನ್ನು ಪುರಸ್ಕರಿಸಿ ಸಿಬಿಐ ಮಾಜಿ ಮುಖ್ಯಸ್ಥ ಆರ್ ಕೆ ರಾಘವನ್ ನೇತೃತ್ವದಲ್ಲಿ ವಿಶೇಷ ತನಿಖಾ ಸಂಸ್ಥೆಯನ್ನು ರಚಿಸಿ ಎಸ್‌ಐಟಿ ತನಿಖೆ ಮಾಡುವಂತೆ ಗುಜರಾತ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ, ಅದರ ಅನುಸಾರ ತನಿಖೆ ನಡೆದು ಮುಖ್ಯಮಂತ್ರಿ ಮೋದಿಯವರಿಗೂ ಸಮನ್ಸ್ ನೀಡಿ 2010 ಮಾರ್ಚ್ 27ರಂದು ಅವರ ಹೇಳಿಕೆಯನ್ನು ದಾಖಲಿಸಲಾಗಿತ್ತು” ಎಂದು ಹೇಳಿದರು.
“ನಂತರ 2012ರ ಏಪ್ರಿಲ್‌ನಲ್ಲಿ ನರೇಂದ್ರ ಮೋದಿಯವರನ್ನು ಆರೋಪ ಮುಕ್ತಗೊಳಿಸಿ, 24 ಮಂದಿ ಮೇಲಿನ ತನಿಖಾ ಆರೋಪಪಟ್ಟಿ ವರದಿಯನ್ನು ಎಸ್‌ಐಟಿ ಒಪ್ಪಿಸಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿ ತನಿಖೆ ನಡೆದ ನಾಲ್ಕು ವರ್ಷಗಳ ಕಾಲ ಮೋದಿಯವರು ಮುಖ್ಯಮಂತ್ರಿಗಳಾಗಿಯೇ ಇದ್ದರು. ರಾಜಿನಾಮೆ ನೀಡಿರಲಿಲ್ಲ. ಈಗ ಸಿದ್ದರಾಮಯ್ಯನವರ ವಿರುದ್ದ ತನಿಖೆ ನಡೆದರೆ ಬಿಜೆಪಿ ಯಾವ ನೈತಿಕತೆಯಲ್ಲಿ ರಾಜೀನಾಮೆಗೆ ಒತ್ತಾಯಿಸುತ್ತದೆ” ಎಂದು ತೆನ್ನಿರಾ ಮೈನಾ ಕಟುವಾಗಿ ಪ್ರಶ್ನೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಮನವಿ
“ಬಿಜೆಪಿಯವರಿಗೆ ನೈತಿಕತೆ ಇದ್ದರೆ ಕರ್ನಾಟಕ ರಾಜ್ಯವನ್ನೇ ತಲೆ ತಗ್ಗಿಸುವಂತೆ ಕೃತ್ಯ ಎಸಗಿರುವ ಬಿಜೆಪಿ ಶಾಸಕ ಮುನಿರತ್ನನ ವಿರುದ್ದ ಪ್ರತಿಭಟನೆ ಮಾಡಲಿ” ಎಂದು ಕುಟುಕಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವಕ್ತಾರ ಪಿ ಎಲ್ ಸುರೇಶ್ ಮಾತನಾಡಿ, “ಸಿದ್ದರಾಮಯ್ಯನವರ ಜನಪರ ಆಡಳಿತವನ್ನು ಸಹಿಸದೆ ಬಿಜೆಪಿ ಮತ್ತು ಜೆಡಿಎಸ್ ಕುತಂತ್ರ ನಡೆಸುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಡಾ ಅಧ್ಯಕ್ಷ ಅಪ್ಪನೆರವಂಡ ಚುಮ್ಮಿದೇವಯ್ಯ, ನಗರಸಭೆ ಸದಸ್ಯ ಮಂಡಿರ ಸದಾ ಮುದ್ದಪ್ಪ, ಮುಡಾ ಸದಸ್ಯ ಕಾನೆಹಿತ್ಲು ಮೊಣ್ಣಪ್ಪ, ಗ್ಯಾರೆಂಟಿ ಅನುಷ್ಠಾನ ಜಿಲ್ಲಾ ಸಮಿತಿಯ ಸದಸ್ಯ ಕೋಚನ ಹರಿಪ್ರಸಾದ್ ಇದ್ದರು.