ಸತೀಶ್ ಜಾರಕಿಹೊಳಿ ಟ್ರಸ್ಟ್ ಮತ್ತು ಮಾನವ ಬಂಧುತ್ವ ವೇದಿಕೆಯ ವತಿಯಿಂದ ದಾವಣಗೆರೆಯಲ್ಲಿ ಇಂದು ಸಾಮಾಜಿಕ ಸಂದೇಶ ಸಾರುವ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಸೆಪ್ಟೆಂಬರ್ 27ರಂದು(ಶುಕ್ರವಾರ) ಸಂಜೆ 6ಕ್ಕೆ ದಾವಣಗೆರೆಯ ಜೆ.ಜೆ.ಎಂ. ಮೆಡಿಕಲ್ ಕಾಲೇಜ್‌ನ ಆವರಣದಲ್ಲಿರುವ ಬಾಪೂಜಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
‘ಗುರುತು’ ಅನ್ನುವುದು ಕೆಲವರಿಗೆ ಹೆಮ್ಮೆಯಾದರೆ, ಕೆಲವರಿಗದು ಅಸಹ್ಯ, ಹಿಂಸೆ, ಜೀವನದ್ದುದ್ದಕ್ಕೂ ಹೊತ್ತು ತಿರುಗಬೇಕಾದ ಹೆಣಭಾರದ ಚಾಕರಿ. ಹಲವು ಬಾರಿ ಉಳಿವಿಗಾಗಿ ಗುರುತುಗಳನ್ನು ಮುಚ್ಚಿಡುತ್ತಾ ಸಾಗುವುದೇ ಬದುಕು ಅನ್ನಿಸಿಕೊಂಡು ಹರಿಯುತ್ತಾ ಹಗುರಾಗುವುದು ಸಾಗದ ದಾರಿಯಾಗಿ ಕಂಡು ದಣಿವಾಗುತ್ತದೆ.

ದಣಿವಾಗುತ್ತದೆ ಎಂಬ ಕಾರಣಕ್ಕೆ ಹಾರಾಡುವ ಬಯಕೆಯನ್ನು ಬಿಡುವಂತೆಯೂ ಇರುವುದಿಲ್ಲ. ಕತ್ತಲ ದಾರಿಯಲ್ಲಿ ಮಿಂಚುಹುಳುಗಳಿಗಾಗಿ ಜೀವ ಕಾಯುತ್ತಾ ಆತುಕೊಳ್ಳಬೇಕಾಗುತ್ತದೆ. ಆಗ ಕತ್ತಲೊಂದು ರೀತಿಯ ಸಂಭ್ರಮ, ಬೆಳಕೊಂದು ರೀತಿಯ ಸಂಭ್ರಮ. ಹೀಗೆ ಗುರುತಿನ ಸುತ್ತ ಇರುವ ಹಲವು ಸಂಕೀರ್ಣ ವಿರೋಧಾಭಾಸಗಳನ್ನು ಎದುರುಗೊಳ್ಳುವ ಕಥನಗಳ ಗೊಂಚಲೇ “ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ” ನಾಟಕದ ಕಥಾಹಂದರ.
ಇಲ್ಲಿ. ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರ ‘Waiting for a Visa’ ಒಂದು ರೂಪಕವಾಗಿ ಕಂಡು, ಅವರು ನಿಜಕ್ಕೂ ಪ್ರವೇಶ ಕೇಳುತ್ತಿರುವುದು ಎಲ್ಲಿಗೆ? ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್‌ಮೇಲ್: ಮಹಿಳೆ ವಿರುದ್ಧ ಎಸ್‌ಡಿಪಿಐ ಮುಖಂಡನಿಂದ ದೂರು
ನಾಟಕದ ಪಠ್ಯ ಆಕರವನ್ನು ಕೆ.ಎನ್.ಹನುಮಂತಯ್ಯ, ಕೆ.ಚಂದ್ರಶೇಖರ್ ಮಾಡಿದ್ದರೆ, ಕೆ.ಪಿ.ಲಕ್ಷ್ಮಣ್ ನಾಟಕದ ರಚನೆ, ನಿರ್ದೇಶನ, ವಿನ್ಯಾಸ ಮಾಡಿದ್ದಾರೆ. ವಿ.ಎಲ್. ನರಸಿಂಹಮೂರ್ತಿ ಡ್ರಮ್ ಬರ್ಗ್ ನಿರ್ವಹಣೆ ಇರಲಿದೆ. ಮರಿಯಮ್ಮ ಚೂಡಿ, ಚಂದ್ರಶೇಖರ್ ಕೆ, ಶ್ವೇತಾರಾಣಿ ಹೆಚ್ ಕೆ, ಭರತ್ ಡಿಂಗ್ರಿ ನಟಿಸಲಿದ್ದಾರೆ. ಮಂಜು ನಾರಾಯಣ್ ಅವರು ‘ಬೆಳಕು’ ನೀಡಲಿದ್ದಾರೆ.
ಎಲ್ಲರಿಗೂ ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಆಗಮಿಸಿ ನಾಟಕ ವೀಕ್ಷಿಸಿ ಯಶಸ್ವಿಗೊಳಿಸಲು ಹಾಗೂ ಸಾಮಾಜಿಕ ಸಂದೇಶ ಸಾರಲು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ಪ್ರೊ.ರಾಮಚಂದ್ರಪ್ಪ ಮತ್ತು ವೇದಿಕೆಯ ಕಾರ್ಯಕರ್ತರು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

