- ಪಕ್ಷದ ಕಚೇರಿಯಲ್ಲಿ ಬಿಜೆಪಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ
- ‘ಅಧಿಕಾರಕ್ಕೆ ಬಿಜೆಪಿ ಏನೂ ಬೇಕಾದರೂ ಮಾಡುತ್ತದೆ’
ನೀಟ್ ಪರೀಕ್ಷಾ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಪರೀಕ್ಷಾರ್ಥಿಗಳ ಭವಿಷ್ಯಕ್ಕಾಗಿ ರೋಡ್ ಶೋ ಮುಂದೂಡುವಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಜೆ ಪಿ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ಧೇಶಿಸಿ ಮಾತನಾಡಿರುವ ಕುಮಾರಸ್ವಾಮಿ, “ಮೇ 7ರಂದು ಬೆಂಗಳೂರಿನಲ್ಲಿ ಮೋದಿ ಚುನಾವಣಾ ರೋಡ್ ಶೋ ಹಮ್ಮಿಕೊಂಡಿದ್ದಾರೆ. ಇದರಿಂದ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಮೋದಿ ತಮ್ಮ ವೇಳಾಪಟ್ಟಿ ಬದಲಿಸಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
“ಭಾನುವಾರ ನೀಟ್ ಪರೀಕ್ಷೆಯ ನಡುವೆಯೂ ಪ್ರಧಾನಿ ಮೋದಿ ರೋಡ್ ಶೋ ವಿಚಾರದ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರಿಂದ ಬರುತ್ತಿರುವ ಟೀಕೆಗಳ ಬಗ್ಗೆ ನನಗೆ ಮಾಹಿತಿ ಇದೆ. ರೋಡ್ ಶೋಗಳಿಂದ ಮಕ್ಕಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು” ಎಂದಿದ್ದಾರೆ.
“ಬಿಜೆಪಿಗೆ ನಾಡಿನ ಜನರ ಸಮಸ್ಯೆಗಳಿಗಿಂತ ಅವರಿಗೆ ಅಧಿಕಾರ ಹಿಡಿಯೋದೆ ಮುಖ್ಯವಾಗಿದೆ. ಅಧಿಕಾರಕ್ಕೋಸ್ಕರ ಅವರು ಏನು ಬೇಕಾದರೂ ಮಾಡ್ತಾರೆ. ಜನಸಾಮಾನ್ಯರ ಬದುಕಿನ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ” ಎಂದು ಹರಿಹಾಯ್ದಿದ್ದಾರೆ.
ಏನಾದರೂ ಮಾಡಿ ಅಧಿಕಾರ ಹಿಡಿಯಬೇಕು ಎಂಬ ಅಜೆಂಡಾ ಇಟ್ಟುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮತಕ್ಕಾಗಿ ಧರ್ಮ – ದೇವರ ದುರ್ಬಳಕೆ : ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
“ಸಾರ್ವಜನಿಕ ವಲಯದಲ್ಲಿ ಇದು ಸರಿನಾ, ತಪ್ಪಾ ಚರ್ಚೆ ನಡೆದರೂ ಅದನ್ನು ಬಿಜೆಪಿಯವರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ದೇಶದ ಪ್ರಧಾನಿಯಾಗಿ ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟ ಆಡೋದು ಸರಿಯಲ್ಲ” ಎಂದಿದ್ದಾರೆ.
“ನೀಟ್ ಪರೀಕ್ಷೆಗೆ ತೊಂದರೆ ಕೊಡಬಾರದು. ಮಕ್ಕಳ ಭವಿಷ್ಯದ ಬಗ್ಗೆ ಅವರಿಗೆ ಏನಾದರೂ ಕಿಂಚಿತ್ ಕಾಳಜಿ ಇದ್ದರೆ ರೋಡ್ ಶೋ ಮುಂದಕ್ಕೆ ಹಾಕುವುದು ಒಳ್ಳೆಯದು” ಎಂದು ಹೇಳಿದ್ದಾರೆ.