ಗದಗ ಜಿಲ್ಲೆಯ ಚಿಕ್ಕನರಗುಂದ ಗ್ರಾಮ ಪಂಚಾಯಿತಿ ಪಿಡಿಒ ಎಚ್ ಕೆ ಅರಳಿಕಟ್ಟಿ ಅಮಾನತಿಗೆ ಆಗ್ರಹಿಸಿ ಮನರೇಗಾ ಕೂಲಿ ಕಾರ್ಮಿಕರು ಗ್ರಾ ಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
“ಗದಗ ಜಿಲ್ಲೆಯ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯಿತಿಯಲ್ಲಿ ಮನರೇಗಾ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿ ಕೆಲಸ ಮಾಡಿರುವ ಕೂಲಿ ಕಾರ್ಮಿಕರಿಗೆ ಕಳೆದ ನಾಲ್ಕೈದು ತಿಂಗಳಿಂದ ಕೂಲಿ ಮೊತ್ತ ಪಾವತಿಸದೆ ಪಿಡಿಒ ಎಚ್ ಕೆ ಅರಳಿಕಟ್ಟಿ ಹಾಗೂ ಜನಪ್ರತಿನಿಧಿಳು ಸತಾಯಿಸುತ್ತಿದ್ದಾರೆ” ಎಂದು ಆರೋಪಿಸಿ ಹಿಡಿಶಾಪ ಹಾಕಿದರು.
“ನಾಲ್ಕೈದು ತಿಂಗಳಿಂದ ಪ್ರತಿದಿನ ಪಂಚಾಯಿತಿ ಕಾರ್ಯಾಲಯಕ್ಕೆ ಎಡತಾಕುತ್ತಿದ್ದು, ಪಿಡಿಒ ಅರಳಿಕಟ್ಟಿಯವರು ದಿನಕ್ಕೊಂದು ಸುಳ್ಳು ಹೇಳುವ ಮೂಲಕ ಬೇಜವಾಬ್ದಾರಿ ಮೆರೆಯುತ್ತಿದ್ದಾರೆ. ಅವರ ನಿರ್ಲಕ್ಷ್ಯದಿಂದಾಗಿ ಕೂಲಿ ವೇತನ ಸಿಕ್ಕಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದೆ” ಎಂದು ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂತೋಷ ಪಾಟೀಲ ಬಳಿ ಅವಲತ್ತುಕೊಂಡರು.
“ಕೂಲಿ ಕೆಲಸ ಮಾಡಿಯಾದರೂ ಬದುಕು ಸಾಗಿಸಬೇಕೆಂಬ ಕೂಲಿ ಕಾರ್ಮಿಕರ ಆಸೆಗೆ ಚಿಕ್ಕನರಗುಂದ ಪಂಚಾಯಿತಿಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ತಣ್ಣೀರು ಎರಚಿದ್ದಾರೆ. ನಾಲ್ಕು ದಿನದೊಳಗಾಗಿ ಕೆಲಸ ಮಾಡಿದ ಕೂಲಿ ಮೊತ್ತ ಪಾವತಿ ಮಾಡಬೇಕು. ಪಿಡಿಒ ಅರಳಿಕಟ್ಟಿ ಮೇಲೆ ಕ್ರಮ ಜರುಗಿಸಿ ಅಮಾನತು ಮಾಡಬೇಕು. ಇಲ್ಲದಿದ್ದರೆ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ರಾಹುಲ್ ಗಾಂಧಿ ಮೀಸಲಾತಿ ವಿರೋಧಿಯೆಂದು ಬಿಂಬಿಸುತ್ತಿರುವ ಬಿಜೆಪಿ, ಜೆಡಿಎಸ್ ನಡೆ ಖಂಡನೀಯ; ದಸಂಸ ಪ್ರತಿಭಟನೆ
ಶಿವಪ್ಪ ಸಾತಣ್ಣವರ, ಶಿವಾನಂದ ಬುಳ್ಳನ್ನವರ, ಮೈಲಾರಿ ಚನ್ನಪ್ಪಗೌಡ್ರ, ಶ್ರೀಕಾಂತ್ ಕೋಣನ್ನವರ, ಮಂಜುನಾಥ ಹೊಸಗಾಣಿಗೇರ, ಕಲ್ಲಪ್ಪ ಹಾದಿಮನಿ, ಅಪ್ಪಣ್ಣ ಕುರಿ, ಸಂಗಮೇಶ ತೊರಗಲ್, ಮಲ್ಲಪ್ಪ ಚಲವಾದಿ, ದೇವಪ್ಪ ಚಲವಾದಿ ಸೇರಿದಂತೆ ಬಹುತೇಕರು ಇದ್ದರು.