ಮುಡಾ ಅಕ್ರಮ ನಿವೇಶನ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ ಅಡಿ ಎಫ್ಐಆರ್ ದಾಖಲಾಗಲಿದೆ.
ಸಿಆರ್‌ಪಿ ಸೆಕ್ಷನ್ 156(3)ರಡಿ ಮುಖ್ಯಮಂತ್ರಿ ಸಿದ್ದರಾಮಯ್ಯ (ಎ 1), ಅವರ ಪತ್ನಿ ಪಾರ್ವತಿ (ಎ 2), ಬಾಮೈದುನ ಮಲ್ಲಿಕಾರ್ಜುನಸ್ವಾಮಿ (ಎ 3), ಜಮೀನು ಮಾಲೀಕ ದೇವರಾಜ್ (ಎ 4) ಹಾಗೂ ಇತರರ ವಿರುದ್ಧ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ ಅವರು ಎಫ್ಐಆರ್ ದಾಖಲಿಸಿದ್ದಾರೆ.
ಯಾವ ಕಾಯ್ದೆಯಡಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ದೂರು ದಾಖಲಿಸಬೇಕೆಂದು ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ ಅವರು ಲೋಕಾಯುಕ್ತ ಎಡಿಜಿಪಿ ಮೌನೀಶ್ ಕರ್ಬಿಕರ್ ಅವರಿಗೆ ಪತ್ರ ಬರೆದು ಸಲಹೆ ಕೇಳಿದ್ದರು. ಹಾಗೆಯೇ ಪ್ರಕರಣದ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಸಹ ಕೇಳಿದ್ದರು.
ಈ ಪತ್ರಕ್ಕೆ ಉತ್ತರಿಸಿರುವ ಎಡಿಜಿಪಿ ಮೌನೀಶ್ ಕರ್ಬಿಕರ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನಿರ್ದೇಶನದಂತೆ ಸಿಆರ್‌ಪಿಸಿ ಸೆಕ್ಷನ್ 156(3) ಅಡಿಯೇ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹಿರಿಯ ಅಧಿಕಾರಿಗಳ ಸೂಚನೆ ಮತ್ತು ಕಾನೂನು ತಜ್ಞರ ಸಲಹೆಯಂತೆ ಮೈಸೂರು ಲೋಕಾಯುಕ್ತ ಎಸ್‌ಪಿ ಅವರು ಪ್ರಕರಣ ದಾಖಲಿಸಿದ್ದಾರೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ಸಿದ್ದರಾಮಯ್ಯ ಪ್ರಕರಣದಲ್ಲಿ ಯಾವ ಕಾಯ್ದೆಯಡಿ ದೂರು ದಾಖಲಿಸಬೇಕು ಎಂಬುದರ ಕುರಿತು ಉಂಟಾಗಿದ್ದ ಗೊಂದಲ ನಿವಾರಣೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಸಿಎಂ ವಿರುದ್ಧ ಎಫ್ಐಆರ್ ಆದರೆ ನಮಗೆ ಯಾವ ಮುಜುಗರ ಇಲ್ಲ: ಡಿಸಿಎಂ ಡಿ ಕೆ ಶಿವಕುಮಾರ್
ಸೆಕ್ಷನ್ 120ಬಿ(ಅಪರಾಧಿಕ ಒಳಸಂಚು), 166-ಯಾವುದೇ ವ್ಯಕ್ತಿಗೆ ಹಾನಿ ಉಂಟು ಮಾಡುವ ಉದ್ದೇಶದಿಂದ ಸಾರ್ವಜನಿಕ ನೌಕರನು ಕಾನೂನುಬದ್ದ ಆದೇಶ ಪಾಲಿಸದಿರುವುದು, 403 ಸ್ವತ್ತಿನ ಅಪ್ರಮಾಣಿಕ ದುರುಪಯೋಗ, 406 ಅಪರಾಧಿಕ ನಂಬಿಕೆದ್ರೋಹ, 420 ವಂಚನೆ ಮಾಡುವುದು ಮತ್ತು ಸ್ವತ್ತನ್ನ ನೀಡಲು ಅಪ್ರಮಾಣಿಕವಾಗಿ ಪ್ರೇರೇಪಿಸುವುದು, 42 ಕೇಡಿನ ಅಪರಾಧಕ್ಕಾಗಿ ದಂಡನೆ, 465 ಖೋಟಾ ತಯಾರಿಕೆಗೆ ದಂಡನೆ, 468 ವಂಚನೆ ಉದ್ದೇಶಕ್ಕಾಗಿ ಖೋಟಾ ತಯಾರಿಕೆ, 340 ಅಕ್ರಮ ಬಂಧನ, 351 ಹಲ್ಲೆ ಕಾನೂನಿನಡಿ ತನಿಖೆ ನಡೆಯಲಿದೆ.
ಪ್ರಕರಣದಲ್ಲಿ ಸಿದ್ದರಾಮಯ್ಯ ಮೊದಲ ಆರೋಪಿಯಾದರೆ ಪಾರ್ವತಿ 2ನೇ ಆರೋಪಿ, ಮಲ್ಲಿಕಾರ್ಜುನಸ್ವಾಮಿ 3ನೇ ಹಾಗೂ ದೇವರಾಜ್ 4ನೇ ಆರೋಪಿಯಾಗಲಿದ್ದಾರೆ. ನ್ಯಾಯಾಲಯವು ಆರೋಪಿಗಳ ವಿರುದ್ಧ ನಿರ್ದಿಷ್ಟ ಸೆಕ್ಷನ್‌ಗಳಡಿ ದಾಖಲಿಸಿ ತನಿಖೆ ನಡೆಸಬೇಕೆಂದು ನಿರ್ದೇಶನ ನೀಡಿರುವುದರಿಂದ ಲೋಕಾಯುಕ್ತ ಪೊಲೀಸರು ಅದರ ಪ್ರಕಾರವೇ ತನಿಖೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ.