ಶಾಲೆಗಾಗಿ ಬಲಿಕೊಟ್ಟರೆ, ತಮ್ಮ ಶಾಲೆ ಏಳಿಗೆ ಹೊಂದುತ್ತದೆ ಎಂಬ ಭ್ರಮೆ, ಮೌಢ್ಯದಿಂದ 11 ವರ್ಷದ ಬಾಲಕನ್ನು ‘ಬಲಿ’ ಹೆಸರಿನಲ್ಲಿ ಕೊಂದಿರುವ ದುರ್ಘಟನೆ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದಿದೆ. ಬಾಲಕನನ್ನು ಕೊಂದ ಖಾಸಗಿ ಶಾಲೆ ಮಾಲೀಕ, ಪ್ರಾಂಶುಪಾಲ, ನಿರ್ದೇಶಕ ಹಾಗೂ ಇಬ್ಬರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಶಾಲೆ ‘ಡಿಎಲ್ ಪಬ್ಲಿಕ್ ಸ್ಕೂಲ್’ನಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಡುತ್ತಿದ್ದ ವಿದ್ಯಾರ್ಥಿ ಕೃತಾರ್ಥ್ ಎಂಬಾತನನ್ನು ಶಾಲೆಯ ಆಡಳಿತ ಮಂಡಳಿ ಬಲಿಕೊಟ್ಟಿದೆ. ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ, ಆತನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ದೃಢಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶಾಲೆಯ ಮಾಲೀಕ ಜಸೋಧನ್ ಸಿಂಗ್, ‘ಮೌಢ್ಯಾಚರಣೆ’ಯಲ್ಲಿ ಭಾರೀ ನಂಬಿಕೆ ಇಟ್ಟಿದ್ದಾರೆ. ಅವರಿಗೆ ಶಾಲೆ ಮತ್ತು ಕುಟುಂಬದ ಏಳಿಗೆಗಾಗಿ ಮಗುವನ್ನು ಬಲಿಕೊಡಬೇಕೆಂದು ಶಾಲೆಯ ನಿರ್ದೇಶಕ ದಿನೇಶ್ ಬಾಘೇಲ್ ತಿಳಿಸಿದ್ದಾರೆ. ಅದನ್ನು ನಂಬಿದ ಮಾಲೀಕ ಜಸೋಧನ್ ಸಿಂಗ್, ಶಾಲೆಯ ವಿದ್ಯಾರ್ಥಿಯನ್ನು ಬಲಿಕೊಡಲು ನಿರ್ಧರಿಸಿದ್ದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣದಲ್ಲಿ ಶಾಲೆಯ ಮಾಲೀಕ ಜಸೋಧನ್ ಸಿಂಗ್, ನಿರ್ದೇಶಕ ದಿನೇಶ್ ಬಾಘೇಲ್ ಜೊತೆಗೆ, ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್ ಮತ್ತು ಇಬ್ಬರು ಶಿಕ್ಷಕರಾದ ರಾಮಪ್ರಕಾಶ್ ಸೋಲಂಕಿ ಮತ್ತು ವೀರಪಾಲ್ ಸಿಂಗ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.
ಐವರ ವಿರುದ್ಧವೂ ಭಾರತೀಯ ನ್ಯಾಯ ಸಂಹಿತಾ 2023ರ ಸೆಕ್ಷನ್ 103 (1)ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
“ಸೆಪ್ಟೆಂಬರ್ 23 ರಂದು, ಶಿಕ್ಷಕ ರಾಮಪ್ರಕಾಶ್ ಸೋಲಂಕಿ, ದಿನೇಶ್ ಬಾಘೇಲ್ ಮತ್ತು ಶಾಲೆಯ ಮಾಲೀಕ ಜಸೋಧನ್ ಸಿಂಗ್ ಅವರು ಶಾಲೆಯ ಹಾಸ್ಟೆಲ್ನಿಂದ ವಿದ್ಯಾರ್ಥಿಯನ್ನು ಅಪಹರಿಸಿದ್ದರು. ಬಳಿಕ, ಆತನನ್ನು ಕೊಲೆ ಮಾಡಿದ್ದಾರೆ” ಎಂದು ಹತ್ರಾಸ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅಶೋಕ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
“ಕೃತಾರ್ಥ್ಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಅತನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿಲ್ಲ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬಾಲಕನ ಪೋಷಕರಿಗೆ ಆರೋಪಿಗಳು ಕರೆ ಮಾಡಿ ತಿಳಿಸಿದ್ದಾರೆ. ಆದರೆ, ಮಗುವಿನ ಕುಟುಂಬಸ್ಥರು ತಮ್ಮ ಮಗ ಕೃತಾರ್ಥ್ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.