ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಟಗಾರ ಡ್ವೇನ್ ಬ್ರಾವೊ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಕೆರೀಬಿಯನ್ ಸೂಪರ್ ಲೀಗ್‌ನಲ್ಲಿ ಆಡುತ್ತಿದ್ದ ಅವರಿಗೆ ಗಾಯಗಳಾಗಿದ್ದು, ಲೀಗ್‌ನಿಂದ ಹೊಪರಬಂದಿದ್ದರು. ಇದೀಗ, ಅವರು ಕ್ರಿಕೆಟ್ ವೃತ್ತಿಗೆ ನಿವೃತ್ತಿ ಘೋಷಿಸಿದ್ದಾರೆ.
“ನನಗೆ ಎಲ್ಲವನ್ನೂ ಕೊಟ್ಟ ಆಟಕ್ಕೆ ವಿದಾಯ ಹೇಳುತ್ತಿದ್ದೇನೆ” ಎಂದು ಬ್ರಾವೊ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ರಾವೊ ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದಲ್ಲಿ ಆಡುತ್ತಿದ್ದರು. ಇದೀಗ, ಅವರು ನಿವೃತ್ತಿ ಘೋಷಿಸಿದ್ದು, ಐಪಿಎಲ್‌ನಿಂದಲೂ ಹೊರಗುಳಿಯಲಿದ್ದಾರೆ. ಅದಾಗ್ಯೂ, ಐಪಿಎಲ್ ಜೊತೆಗೆ ಮುಂದುವರೆಯಲಿದ್ದು, ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಮೆಂಟರ್ ಆಗಿ ಸೇರಿಲಿದ್ದಾರೆ.
2021ರಲ್ಲಿ ಬ್ರಾವೊ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಲ್ಲದೆ, ಕಳೆದ ವರ್ಷ ನಡೆದ ಐಪಿಎಲ್ ಟೂರ್ನಿಯಲ್ಲಿ ಆಡಿದ್ದು, ಅವರು ಟೂರ್ನಿ ಮುಗಿದ ಬಳಿಕ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದರು.
ಇನ್ನು, ಬ್ರಾವೊ ಅವರು ಕೆಕೆಆರ್ ತಂಡದ ಮೆಂಟರ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೆಕೆಆರ್ ಗ್ರೂಪ್ ಸಿಇಒ ವೆಂಕಿ ಮೈಸೂರ್, “ಬ್ರಾವೊ ಅವರು ತಂಡಕ್ಕೆ ಸೇರುತ್ತಿರುವುದು ಸಂತಸ ತಂದಿದೆ. ಗೆಲ್ಲಬೇಕೆಂಬ ಅವರ ತುಡಿತ, ಕ್ರಿಕೆಟ್ ವೃತ್ತಿಯಲ್ಲಿ ಅವರ ಅನುಭವ ಮತ್ತು ಜ್ಞಾನವು ನಮ್ಮ ಫ್ರಾಂಚೈಸಿ ಮತ್ತು ಆಟಗಾರರಿಗೆ ನೆರವಾಗಲಿದೆ” ಎಂದು ಹೇಳಿದ್ದಾರೆ.