- ರ‍್ಯಾಲಿಯನ್ನು ವೀಕ್ಷಿಸಲು ನಿಗದಿ ಮಾಡಿದ ಸ್ಥಳಕ್ಕೆ ಬನ್ನಿ
- ಬೆಂಗಳೂರಿನಲ್ಲಿ ಒಟ್ಟು 36 ಕಿ.ಮೀ ದೂರದ ರೋಡ್ ಶೋ
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಡಿ ರಾಜ್ಯದ ತುಂಬಾ ಅಬ್ಬರದ ಪ್ರಚಾರ ನಡೆಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು 36 ಕಿ.ಮೀ ದೂರದ ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ ಪ್ರಧಾನಿಗಳ ಭದ್ರತೆ ದೃಷ್ಟಿಯಿಂದ ನಗರದ ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ಕೆಲವು ಸೂಚನೆಗಳನ್ನು ಜಾರಿಗೆ ತಂದಿದ್ದಾರೆ.
ಮೇ 6 ಮತ್ತು 7ರಂದು ರೋಡ್ ಶೋ ನಡೆಯಲಿದೆ. ಈ ವೇಳೆ, ಸುರಕ್ಷತಾ ಮತ್ತು ಶಿಷ್ಟಾಚಾರ ಪಾಲನೆಗಾಗಿ ಮೇ 4ರಂದು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಸೂಚನೆಗಳನ್ನು ಬಿಡುಗಡೆ ಮಾಡಿದ್ದು, ಅವು ಇಂತಿವೆ.
- ಪ್ರಧಾನಿ ಮೋದಿ ರೋಡ್ ಶೋ ನಡೆಯುವ ವೇಳೆ ಮನೆಯ ಬಾಲ್ಕನಿ/ಟೆರೇಸ್ ಮೇಲೆ ನಿಂತು ರ‍್ಯಾಲಿಯನ್ನು ವೀಕ್ಷಿಸುವುದು ನಿಷೇಧಿಸಲಾಗಿದೆ.
- ಮೋದಿ ರೋಡ್ ಶೋ ಪೂರ್ಣಗೊಳ್ಳುವವರೆಗೂ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಹಾಗಾಗಿ ಪರ್ಯಾಯ ಮಾರ್ಗ ಬಳಸಲು ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ವಿನಂತಿಸಿದೆ.
- ಕಟ್ಟಡದ ಪ್ರವೇಶ ಮತ್ತು ನಿರ್ಗಮನಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಕಟ್ಟಡದ ಆವರಣದಲ್ಲಿ ಅನಧಿಕೃತ ವ್ಯಕ್ತಿಗಳನ್ನು ಅನುಮತಿಸಬಾರದು.
- ರ‍್ಯಾಲಿಯನ್ನು ವೀಕ್ಷಿಸಲು ಬಯಸುವವರು ಗೊತ್ತು ಮಾಡಿದ ನಿಗದಿತ ಸ್ಥಳಕ್ಕೆ ಬರಬೇಕು.
- ಯಾವುದೇ ಹೆಚ್ಚಿನ ಸೂಚನೆಗಳಿಗಾಗಿ ಪೊಲೀಸ್/ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.
“ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆ, ಸುರಕ್ಷತಾ ಕ್ರಮ ಕೈಗೊಂಡಿದ್ದೇವೆ. ಮೇ 6ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಧಾನಿ ಅವರು ಬರಲಿದ್ದಾರೆ. ಅವರ ಭದ್ರತೆ ದೃಷ್ಟಿಯಿಂದ ಕೆಲವು ಸೂಚನೆಗಳನ್ನು ಬಿಡುಗಡೆ ಮಾಡಿದ್ದೇವೆ” ಎಂದು ಈ ದಿನ.ಕಾಮ್‌ಗೆ ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ತಿಳಿಸಿದರು.