ಅಕ್ರಮ ಡಿನೋಟಿಫಿಕೇಷನ್ ಹಗರಣದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಲೋಕಾಯುಕ್ತ ವಿಚಾರಣೆಗೆ ಶುಕ್ರವಾರ ಹಾಜರಾಗಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, “ನನಗೆ ಯಾವ ನೋಟಿಸ್ ಕೂಡ ಬಂದಿಲ್ಲ, ನಾನು ಸ್ವಇಚ್ಛೆಯಿಂದ ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾಗಿದ್ದೇನೆ” ಎಂದು ತಿಳಿಸಿದ್ದಾರೆ.
“ನಾನು ತಪ್ಪು ಮಾಡಿ ಇಲ್ಲಿಗೆ ಬಂದಿಲ್ಲ. ಸ್ವಯಂಪ್ರೇರಿತವಾಗಿ ನಾನು ಬಂದೆ. ನಾಳೆ (ಶನಿವಾರ) ಬೆಳಗ್ಗೆ 11 ಗಂಟೆಗೆ ದಾಖಲಾತಿಗಳನ್ನು ಬಿಡುಗಡೆ ಮಾಡುತ್ತೇನೆ. ಈ ಸರ್ಕಾರದಲ್ಲಿರುವ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ದರೋಡೆಕೋರರು ಆಗಿದ್ದಾರೆ. ಆ ದಾಖಲೆಗಳನ್ನು ನೋಡಿದ ಮೇಲೆ ಈ ಸಚಿವರುಗಳು ನನ್ನ ಬಳಿ ಮಾತನಾಡಲಿ” ಎಂದರು.
“ರಾಜಕೀಯ ಒತ್ತಡದಿಂದ ನನ್ನ ಮೇಲೆ ಈ ಪ್ರಕರಣವನ್ನು ಮುನ್ನಲೆಗೆ ತರಲಾಗಿದೆ. ನಾನು ಕಾನೂನುಬಾಹಿರವಾಗಿ ಆದೇಶ ನೀಡಿಲ್ಲ. ಡಿನೋಟಿಫಿಕೇಶನ್ ಮಾಡಬೇಕೆಂದಿದ್ದರೆ ನಾನೇ ಮಾಡಿಕೊಳ್ಳುತ್ತಿದ್ದೆ. ನನ್ನನ್ನು ಟೀಕಿಸುವವರಿಗೆ ಆ ಸಾಮಾನ್ಯ ಜ್ಞಾನವೂ ಕೂಡಾ ಇಲ್ಲ” ಎಂದು ಟೀಕಿಸಿದರು.
ಇದನ್ನು ಓದಿದ್ದೀರಾ? ಬಿಗ್ ಬ್ರೇಕಿಂಗ್ ನ್ಯೂಸ್ | ಅಕ್ರಮ ಡಿನೋಟಿಫಿಕೇಷನ್ ಹಗರಣ: ಲೋಕಾಯುಕ್ತ ಮುಂದೆ ವಿಚಾರಣೆಗೆ ಹಾಜರಾದ ಎಚ್‌ಡಿಕೆ
“ಈ ಪ್ರಕರಣದಲ್ಲಿ ಈಗಾಗಲೇ ಲೋಕಾಯುಕ್ತರು ಹೇಳಿಕೆ ದಾಖಲಿಸಿಕೊಂಡಿದ್ದರು. ಈಗ ಮತ್ತೆ ನಾನೇ ಹೋಗಿ ಹೇಳಿಕೆ ನೀಡಿದ್ದೇನೆ. ನನಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಭಯವಿಲ್ಲ” ಎಂದರು.
“ಈ ಕೇಸ್ ಅನ್ನು 2015ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ ನನ್ನ ಮೇಲೆ ಹಾಕಲಾಗಿದೆ. ಈ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುವ ಅಗತ್ಯ ನನಗಿಲ್ಲ. ಅಂತಹ ಜಾಯಮಾನವೇ ನನ್ನದಲ್ಲ. ನಾನು ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ” ಎಂದು ಹೇಳಿದರು.
ಇನ್ನು ಮಾಧ್ಯಮಗಳಲ್ಲಿ ಕುಮಾರಸ್ವಾಮಿ ಅವರಿಗೆ ರಾಜಕೀಯ ಗಂಡಾಂತರ ಎಂಬ ಬಗ್ಗೆ ಸುದ್ದಿಗಳು ಪ್ರಕಟವಾಗುತ್ತಿರುವ ಬಗ್ಗೆ ಮಾತನಾಡಿದ ಕೇಂದ್ರ ಸಚಿವರು, “ಕುಮಾರಸ್ವಾಮಿ ಅವರಿಗೆ ರಾಜಕೀಯ ಗಂಡಾಂತರ, ಭೂ ಗಂಡಾಂತರ ಎಂಬ ಚರ್ಚೆಗಳಾಗುತ್ತಿದೆ. ಆದರೆ ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಗಂಡಾಂತರವಾಗಿಲ್ಲ. ಅಂತಹ ಕಾರ್ಯವನ್ನೂ ನಾನು ಮಾಡಿಲ್ಲ” ಎಂದು ತಿಳಿಸಿದರು.
