ಬೆಂಗಳೂರು ನಗರದ ತಾಜ್ ವೆಸ್ಟ್ ಎಂಡ್ ಐಷಾರಾಮಿ ಹೋಟೆಲ್‌ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು ಇದು ಹುಸಿ ಬಾಂಬ್ ಬೆದರಿಕೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಶನಿವಾರ ಬೆಳಿಗ್ಗೆ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಸಂದೇಶವನ್ನು ಐಷಾರಾಮಿ ಹೋಟೆಲ್‌ನ ಇಮೇಲ್ ವಿಳಾಸಕ್ಕೆ ಇಮೇಲ್ ಕಳುಹಿಸಲಾಗಿದೆ.
ಇದನ್ನು ಓದಿದ್ದೀರಾ? ಹರಿಯಾಣ | ಗುರುಗ್ರಾಮದ ಎಲ್ಲಾ ಮಾಲ್‌ಗಳಿಗೆ ಬಾಂಬ್ ಬೆದರಿಕೆ!
ತಾಜ್ ವೆಸ್ಟ್ ಎಂಡ್ ಐಷಾರಾಮಿ ಹೋಟೆಲ್ ಆಗಿದ್ದು, ಪ್ರಮುಖ ರಾಜಕೀಯ ನಾಯಕರು, ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳು ಇಲ್ಲಿಗೆ ಆಗಾಗ್ಗೆ ಬರುತ್ತಾರೆ.
ಬಾಂಬ್ ಬೆದರಿಕೆ ಬಗ್ಗೆ ಸಿಬ್ಬಂದಿಗಳು ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು ಬಳಿಕ ಪೊಲೀಸರಿಗೆ ತಿಳಿಸಲಾಗಿದೆ. ಕೂಡಲೇ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ತಂಡವು ಸ್ಥಳಕ್ಕೆ ಧಾವಿಸಿದೆ. ಬಾಂಬ್ ಸ್ಕ್ವಾಡ್ ಕೂಡಾ ಸ್ಥಳಕ್ಕೆ ಆಗಮಿಸಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಉಪ ಪೊಲೀಸ್ ಆಯುಕ್ತ (ಕೇಂದ್ರ) ಶೇಖರ್ ಎಚ್ ತೆಕ್ಕಣ್ಣವರ್, “ಇಂದು ಬೆಳಗ್ಗೆ ಹೈಗ್ರೌಂಡ್ಸ್ ವ್ಯಾಪ್ತಿಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವುದಾಗಿ ಕರೆ ಬಂದಿದೆ. ನಮ್ಮ ಬಿಡಿಡಿಎಸ್ ಮತ್ತು ಎಎಸ್‌ಸಿ ತಂಡವು ಆವರಣವನ್ನು ಪರಿಶೀಲಿಸಿದಾಗ ಅದು ಹುಸಿ ಬೆದರಿಕೆ ಇಮೇಲ್ ಎಂಬುದು ತಿಳಿದುಬಂದಿದೆ. ನಾವು ದೂರು ದಾಖಲಿಸಿಕೊಂಡು, ತನಿಖೆ ಮಾಡುತ್ತೇವೆ” ಎಂದು ಹೇಳಿದ್ದಾರೆ.
