ಸುದ್ಧಿ ಮಾಧ್ಯಮಗಳು ಜನರ ಪರವಾಗಿ ಇರಬೇಕೇ ಹೊರತು ರಾಜಕೀಯ ಪಕ್ಷಗಳ ಪರವಾಗಿ ಇರಬಾರದು. ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸುದ್ದಿಗಳಿರಬೇಕು ಎಂದು ದಿ ಹಿಂದು ಪತ್ರಿಕೆಯ ವರದಿಗಾರ ರಿಷಿಕೇಶ್ ಬಹದ್ದೂರ್ ದೇಸಾಯಿ ಹೇಳಿದರು.
ನಗರದ ಮಾನವ ಬಂಧುತ್ವ ವೇದಿಕೆ ಕಚೇರಿಯಲ್ಲಿ ನಾಗರಿಕ ಪತ್ರಕರ್ತರ ಸಮಾಗಮ ಕಾರ್ಯಕ್ರಮ ನಡೆಯಿತು. ಸ್ಥಳಿಯ ಸಮಸ್ಯೆಗಳ ಹಾಗೂ ಪತ್ರಕೋದ್ಯಮದ ಕುರಿತು ಚರ್ಚೆ ಮತ್ತು ಸಂವಾದ ನಡೆಯಿತು.
ಮಾಧ್ಯಮಗಳು ಜನರ ಪರವಾಗಿ ಇರಬೇಕೇ ಹೊರತು ರಾಜಕೀಯ ಪಕ್ಷಗಳ ಪರವಾಗಿ ಇರಬಾರದು. ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸುದ್ದಿಗಳಿರಬೇಕು. ದೊಡ್ಡ ವೈರಸ್ ನಮ್ಮನ್ನು ಕಾಡುತ್ತಿದ್ದ ಕೋರೋನಾ ಸಮಯದಲ್ಲಿ ನಮಗೆ ಧೈರ್ಯ ಹೇಳಬೇಕಿದ್ದ ಟಿವಿ ಮಾಧ್ಯಮಗಳು ಜನರನ್ನು ಮತ್ತಷ್ಟು ಹೆದರಿಸಿದವು. ಸುದ್ಧಿ ಮಾಧ್ಯಮಗಳು ಯಾರ ಹಂಗಿಲ್ಲದೆ ಸುದ್ಧಿ ಮಾಡುವುದು ಹಾಗೂ ಸುಳ್ಳು ಹೇಳುವುದು ಪತ್ರಕರ್ತರ ಲಕ್ಷಣವಲ್ಲ ಎಂದು ರಿಷಿಕೇಶ್ ಬಹದ್ದೂರ್ ದೇಸಾಯಿ ಮಾತನಾಡಿದರು.
ಭಾರತೀಯ ಕೃಷಿಕ ರೈತ ಸಂಘಟನೆಯ ರಾಜ್ಯಾದ್ಯಕ್ಷ ಸಿದ್ಧಗೌಡ ಮೋದಗಿ ಮಾತನಾಡಿ, ಬಹುತೇಕ ಪತ್ರಕರ್ತರು ಪ್ರಚೋದನಾತ್ಮಕ ಸುದ್ದಿಗಳನ್ನು ಮಾತ್ರ ಮಾಡುತ್ತಿದ್ದಾರೆ. ಆದರೆ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಸುದ್ಧಿ ಮಾಡಬೇಕು. ಆ ಹಿನ್ನೆಲೆಯಲ್ಲಿ ಈದಿನ.ಕಾಮ್ ಕೇವಲ ಎರಡು ವರ್ಷದಲ್ಲಿ ಜನಪರವಾಗಿ ಕಾರ್ಯನಿರ್ವಹಿಸಿ ಬೆಳೆಯುತ್ತಿದೆ. ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡ ಬಸವರಾಜ ರೊಟ್ಟಿ ಮಾತನಾಡಿ, ಪತ್ರಿಕಾರಂಗ ಯಾರ ಹಂಗಿನಲ್ಲಿರದೆ, ಆಳುವ ರಾಜಕೀಯ ಪಕ್ಷಗಳು ಎಡವಿದಾಗ ತಿದ್ದುವ ಕೆಲಸ ಮಾಡಬೇಕು. ತಮಗೆ ಬೇಕಾದ ಸುದ್ದಿಗಳನ್ನು ವೈಭವಿಕರಿಸಿ ಹೇಳುವಲ್ಲಿ ಬಹುತೇಕ ಮಾದ್ಯಮ ವಾಹಿನಿಗಳು ನಿರತವಾಗಿದ್ದಾವೆ. ಇಬ್ಬರು ಮುಖ್ಯಮಂತ್ರಿಗಳ ನೈಜ ಹಗರಣವಾದ ಡೀನೋಟಿಫಿಕೇಷನ್ ಹಗರಣದ ಕುರಿತು ಯಾರೂ ಸೊಲ್ಲೆತ್ತದೆ, ಮುಢಾ ಹಗರಣವನ್ನೇ ಹೆಚ್ಚು ಎಳೆದಾಡಿಕೊಂಡು ಹೊರಟಿರುವ ವಾತವರಣ ಸೃಷ್ಠಿಯಾಗಿದೆ ಎಂದರು.
ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯಾದ್ಯಕ್ಷ ನೂರ್ ಶ್ರೀಧರ ಮಾತನಾಡಿ, ಸಂವಿಧಾನಕ್ಕೆ ಕುತ್ತು ಬಂದಿರುವ ಈ ಸಂದರ್ಭದಲ್ಲಿ 4 ಚಳುವಳಿಗಳು ಹುಟ್ಟಿಕೊಳ್ಳಬೇಕಿದೆ. 1. ಜನ ಚಳುವಳಿ: ಎಲ್ಲ ಜನಪರ, ಮಹಿಳೆಯರನ್ನೂ ಒಳಗೊಳ್ಳುವುದು. 2. ಮಾದ್ಯಮ ಚಳುವಳಿ: ಬಹುತೇಕ ಮಾದ್ಯಮಗಳು ಜನರ ಮೆದುಳಿಗೆ ಬೇಡಿ ಹಾಕಿವೆ. ಇದರ ತದ್ವಿರುದ್ಧವಾಗಿ ಎಲ್ಲ ಜನಪರ ಮಾದ್ಯಮಗಳೊಂದಿಗೆ ಸಹಕಾರ ಬೆಳೆಸಿಕೊಳ್ಳುವುದು. 3. ಸಾಂಸ್ಕೃತಿಕ ಚಳುವಳಿ: 12ನೇ ಶತಮಾನದಲ್ಲಿ ನಡೆದ ಶರಣ ಚಳುವಳಿಗಳಂತೆ ಮತ್ತೆ ಚಳುವಳಿ ಹುಟ್ಟಿಕೊಳ್ಳಬೇಕು. 4. ರಾಜಕೀಯ ಚಳುವಳಿ: ಯಾರೇ ಅಧಿಕಾರಕ್ಕೆ ಬಂದರೂ ಪ್ರಶ್ನಿಸುವ ಗುಣ ಇರುವುದು ಮುಖ್ಯವಾಗುತ್ತದೆ ಎಂದು ತಿಳಿಸಿ ಈದಿನ.ಕಾಮ್ ನಡೆದುಬಂದ ಹಾದಿಯ ಕುರಿತು ವಿವರಿಸಿದರು.
ಇದನ್ನೂ ಓದಿ ಬೆಳಗಾವಿ | ಗಾಂಜಾ ಮಾರಾಟ; ಆರೋಪಿ ಬಂಧನ
ಸಿಐಟಿಯು ನ ಸದಸ್ಯ ಜಿ ವಿ ಕುಲಕರ್ಣಿ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಕಸ್ತೂರಿ, ಭಾರತೀಯ ಮಹಿಳಾ ಸೇವಾ ಸಂಘದ ಸೀಮಾ ಇನಾಮದಾರ್ ವೇದಿಕೆ ಮೇಲೆ ಇದ್ದರು. ವಿವಿಧ ಸಂಘಟನೆಗಳು, ಹೋರಾಟಗಾರರು, ಕಾರ್ಮಿಕರು, ಪತ್ರಕರ್ತರು, ಬರಹಗಾರರು, ಚಿಂತಕರು ಭಾಗವಹಿಸಿದ್ದರು.