ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ವತಿಯಿಂದ ಕಳೆದ 21 ದಿನಗಳಿಂದ ಗಣೇಶ ಮೂರ್ತಿಯನ್ನು ಕೂರಿಸಲಾಗಿತ್ತು. ಅದರ ವಿಸರ್ಜನೆ ಕಾರ್ಯ ಸೆ.27ರ ಶುಕ್ರವಾರ ಜರುಗಿತು.
ಈ ವೇಳೆ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರಾದ ಮಹೇಂದ್ರ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಚಿನ್ ಶಿವಪೂಜಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕಾವ್ಯಶ್ರೀ, ವಕೀಲರ ಸಂಘದ ಅಧ್ಯಕ್ಷರಾದ ಡಿ ಎಂ ಸುಂದರ್, ಕಾರ್ಯದರ್ಶಿ ನಟೇಶ್, ವಕೀಲರಾದ ಮಲ್ಲಪ್ಪ, ಎಂ ಮುತ್ತುರಾಜು, ರಾಣಿ, ಜಗದೀಶ್, ಶ್ರೀನಿವಾಸ್ ಕುಮಾರ್, ನಾರಾಯಣಮೂರ್ತಿ, ಹೇಮಂತ್, ನಾಗರತ್ನ, ನಾಗರಾಜ್ ಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.
ಶುಕ್ರವಾರ ಮಧ್ಯಾಹ್ನದ ನಂತರ ವಕೀಲರು ನ್ಯಾಯಾಲಯದ ಕಲಾಪದ ಹೊರಗುಳಿದು ಗಣೇಶ ಮೂರ್ತಿಯನ್ನು ಪೂಜಿಸಿ ವಿಸರ್ಜಿಸಿದರು. ಹೀಗೆ ಗಣೇಶ ಮೂರ್ತಿ ಕೂರಿಸಲು ನ್ಯಾಯಾಧೀಶರ ಒಪ್ಪಿಗೆಯಿತ್ತ? ಕಳೆದ ಕೆಲವು ವರ್ಷಗಳಿಂದ ಮಾತ್ರ ಈ ರೂಢಿ ಶುರುವಾಗಿದೆ ಎನ್ನಲಾಗಿದೆ. ಈ ಮೊದಲು ಈ ಆಚರಣೆ ಇರಲಿಲ್ಲ ಎಂಬ ಮಾತು ಸಾರ್ವಜನಿಕರ ನಡುವೆಯೇ ಕೇಳಿ ಬಂದಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ಕೆಲವು ಪ್ರಗತಿಪರ ವಕೀಲರು ಸೇರಿದಂತೆ ಸಾರ್ವಜನಿಕರ ಪ್ರಶ್ನೆಯಾಗಿದೆ.

ಭಾರತ ಸಂವಿಧಾನವು ಭಾರತವನ್ನು ಒಂದು ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿದೆ. ಅಂದರೆ ನಮ್ಮ ದೇಶದಲ್ಲಿ ಯಾವುದೇ ಧರ್ಮವನ್ನು ರಾಷ್ಟ್ರ ಧರ್ಮ ಎಂದು ಘೋಷಿಸದೆ ಎಲ್ಲ ಧರ್ಮಗಳಿಗೂ ಸಮಾನ ಅವಕಾಶ ನೀಡಲಾಗಿದೆ. ಹೀಗಿದ್ದರೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಒಂದು ಮೂಲಭೂತ ಹಕ್ಕಾಗಿ ಅಳವಡಿಸಿರುವುದು ನಮ್ಮ ಸಂವಿಧಾನದ ವಿಶೇಷ ಲಕ್ಷಣವಾಗಿದೆ.
ಸಂವಿಧಾನದ ಮೂರನೇ ಭಾಗದಲ್ಲಿರುವ 25 ರಿಂದ 28ರ ವರೆಗಿನ ವಿಧಿಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಉಲ್ಲೇಖವಿದೆ. ಈ ವಿಧಿಗಳಲ್ಲಿ ಪ್ರತಿಯೊಬ್ಬ ಭಾರತೀಯ ಪೌರನು ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಯಾವುದೇ ಧರ್ಮವನ್ನು ಸ್ವೀಕರಿಸುವ, ಪಾಲಿಸುವ ಹಾಗೂ ಪ್ರಚಾರ ಮಾಡುವ ಸ್ವಾತಂತ್ರ್ಯವಿದೆ. ಪ್ರತಿಯೊಂದು ಧರ್ಮವು ಧಾರ್ಮಿಕ ಹಾಗೂ ದಾನ, ದತ್ತಿ ಉದ್ದೇಶಗಳಿಗಾಗಿ ತನ್ನದೇ ಆದ ಸಂಸ್ಥೆಗಳನ್ನು ಸ್ಥಾಪಿಸುವ, ಚರಸ್ಥಿ ಮತ್ತು ಸ್ಥಿರಾಸ್ತಿಯನ್ನು ಹೊಂದುವ ಅವಕಾಶವಿದೆ. ಯಾವುದೇ ಧರ್ಮದ ರಕ್ಷಣೆ, ಪೋಷಣೆ ಇಲ್ಲವೇ ಪ್ರಚಾರದ ಸಲುವಾಗಿ ಯಾವುದೇ ವ್ಯಕ್ತಿಯನ್ನು ತೆರಿಗೆ ಇಲ್ಲವೇ ವಂತಿಗೆ ಕೊಡಬೇಕೆಂದು ಬಲವಂತ ಪಡಿಸುವಂತಿಲ್ಲ. ಆದರೆ ಗಣೇಶ ಮೂರ್ತಿ ಕೂರಿಸಲು, ವಲ್ಲದ ವಕೀಲರ ಬಳಿಯೂ ವಂತಿಗೆ ಕೇಳಲಾಗಿತ್ತು ಎಂದು ಕೆಲವು ವಕೀಲರು ಮಾಹಿತಿ ನೀಡಿದ್ದಾರೆ.

ಒಕ್ಕೂಟ ಇಲ್ಲವೇ ನಾಡ ಸರ್ಕಾರದ ಅನುದಾನಕ್ಕೆ ಒಳಪಟ್ಟ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಆದರೂ ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳ ಬಗ್ಗೆ ಕಾನೂನು ಮಾಡುವ ಅಧಿಕಾರ ರಾಜ್ಯಕ್ಕಿದೆ. ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಅನಿವಾರ್ಯ ಸಂದರ್ಭಗಳಲ್ಲಿ ರಾಜ್ಯ ಮಧ್ಯ ಪ್ರವೇಶಿಸಬಹುದು. ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ಆರ್ಥಿಕ, ರಾಜಕೀಯ, ಜಾತ್ಯತೀತ ಚಟುವಟಿಕೆಗಳ ಮೇಲೆ ರಾಜ್ಯ ಕಾನೂನು ಮಾಡಬಲ್ಲದು. ಕಾನೂನು ಪರಿಪಾಲಿಸದವರ ಮೇಲೆ ದಂಡನೆ ವಿಧಿಸುವವರು ಯಾರು ಎಂದು ಸಾರ್ವಜನಿಕರಿಗೆ ಕಾಡುತ್ತಿರುವ ಪ್ರಶ್ನೆ.
ಇದನ್ನು ಓದಿದ್ದೀರಾ? ಲೋಕಾಯುಕ್ತ ವಿಚಾರಣೆ | ‘ಸುಳ್ಳು’ ಹೇಳುತ್ತಲೇ ‘ಸತ್ಯ’ ಬಹಿರಂಗಪಡಿಸಿದ ಎಚ್ ಡಿ ಕುಮಾರಸ್ವಾಮಿ!
ವೈಯಕ್ತಿಕವಾಗಿ ಧಾರ್ಮಿಕ ಆಚರಣೆಗೆ ಸ್ವಾತಂತ್ರ್ಯವಿದೆ. ಹಾಗಂತ, ನ್ಯಾಯಾಲಯದಲ್ಲಿ ಈ ರೀತಿಯ ಆಚರಣೆಗೆ ಅವಕಾಶ ಇದೆಯೇ? ಇಲ್ಲಿ ಗಣೇಶ ಮೂರ್ತಿಯನ್ನು ಕೂರಿಸಲು ಯಾವ ಇಲಾಖೆಯಿಂದ ಒಪ್ಪಿಗೆ ಪಡೆಯಲಾಗಿತ್ತು? ಕಲಾಪದಿಂದ ಹೊರಗುಳಿದು, ಕ್ಲೈಂಟುಗಳಿಗೆ ತೊಂದರೆ ಮಾಡಿ, ಈ ರೀತಿಯ ಧಾರ್ಮಿಕ ಆಚರಣೆಗೆ ಕಾನೂನಿನಲ್ಲಿ ಅವಕಾಶ ಇದೆಯೇ? ಕಾನೂನು ತಿಳಿದ ವಕೀಲರ ಈ ವರ್ತನೆ ಎಷ್ಟು ಸರಿ ಎಂಬುದು ಸಾರ್ವಜನಿಕರ ಆಕ್ಷೇಪವಾಗಿತ್ತು.


Send your nber jagdish sir
Please ask madarasa run schools fully aided by government