ಸಾಮಾಜಿಕ, ಆರ್ಥಿಕ ಸಮಾನತೆ ಬಾರದ ಹೊರತು ಅಂಬೇಡ್ಕರ್ ಭಾರತದ ಮೂಲನಿವಾಸಿ ದಲಿತ, ಶೋಷಿತ, ದಮನಿತರ ಬದುಕಿಗೆ ಆಸರೆಯಾಗುತ್ತದೆ ಎಂಬ ಕಾರಣಕ್ಕಾಗಿ ಸಂವಿಧಾನದತ್ತವಾಗಿ ನೀಡಲಾಗಿರುವ ರಾಜಕೀಯ ಮೀಸಲಾಯಿಂದ 78 ವರ್ಷಗಳಲ್ಲಿ ಹೇಳಿಕೊಳ್ಳುವ ರೀತಿಯಲ್ಲಿ ಸುಧಾರಣೆಯೇನೂ ಆಗಿಲ್ಲ ಎಂದು ಸಿಪಿಐಎಂ ಕೇಂದ್ರ ಸಮಿತಿ ಸದಸ್ಯ ಕೆ.ಪ್ರಕಾಶ್ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಕೆಇಬಿ ಸಮುದಾಯ ಭವನದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಜಿಲ್ಲಾ ಶಾಖೆ ಆಯೋಜಿಸಿದ್ದ 16ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರಾಜಕೀಯ ಸಮಾನತೆ ಮುಂದಿಟ್ಟುಕೊಂಡು ಸಾಮಾಜಿಕ ಆರ್ಥಿಕ ಸಮಾನತೆ ಸಾಧಿಸಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಇವತ್ತಿನ ಸಂದರ್ಭದಲ್ಲಿ ಇದನ್ನು ಮಾಡಲು ಆಗುತ್ತದೆಯಾ? ಯುವಜನತೆ ಈ ಬಗ್ಗೆ ಯೋಚನೆ ಮಾಡಬೇಕಿದೆ. ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಕೂಡ ಇಂದು ದಲಿತ, ಹಿಂದುಳಿದ ಬಡವರು ದುಬಾರಿ ಶಿಕ್ಷಣದಿಂದ ಬೇಸತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆಗಾಗಿ ಗೋಗೆರೆಯುತ್ತಿದ್ದಾರೆ. ಉದ್ಯೋಗ ಭದ್ರತೆಗಾಗಿ ಯುವಜನತೆ ಬೀದಿಗಿಳಿಯುವ ಪರಿಸ್ಥಿತಿ ಎದುರಾಗಿದೆ. ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಎನ್ನುವಂತಾಗಿದೆ. ಮೂಲಭೂತ ಸೌಕರ್ಯಗಳಿಗಾಗಿ ಸರ್ಕಾರವನ್ನು ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಶೇ.10ರಷ್ಟಿರುವ ಶ್ರೀಮಂತರ ಕೈಯಲ್ಲಿ ದೇಶದ ಸಂಪತ್ತು ಕ್ರೋಢೀಕರಣಗೊಂಡಿರುವುದು ಕಾರಣ” ಎಂದರು.

ನಮಗಿಂತ 2 ವರ್ಷ ತಡವಾಗಿ ಕ್ರಾಂತಿಗೆ ಒಳಗಾದ ಚೀನಾ ದೇಶವು ಇಂದು ಜಗತ್ತಿನ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಿದೆ. ಕಾರಣ ಅಲ್ಲಿನ ಜನರ ತೆರಿಗೆಯ ಪಾಲು ನೇರವಾಗಿ ಸರಕಾರದ ಖಜಾನೆಗೆ ಸೇರುತ್ತಿದೆ. ನಮ್ಮಲ್ಲಿ ಖಾಸಗಿ ರಂಗ ಬೆಳೆದಂತೆ ಸರಕಾರಿ ರಂಗ ಬೆಳೆಯಲಿಲ್ಲ. ಏರ್‌ಟೆಲ್, ಜಿಯೋ ಬೆಳೆದಂತೆ ಬಿಎಸ್‌ಎನ್‌ಎಲ್ ಬೆಳೆದಿಲ್ಲ. ಬದಲಾಗಿ ಮುಚ್ಚುವ ಹಂತ ತಲುಪಿದೆ. ಅದೇ ರೀತಿ ಅಸಮಾನತೆ, ಬಡತನ, ನಿರುದ್ಯೋಗ, ಪ್ರತಿಯೊಂದಕ್ಕೂ ಸರಕಾರದ ಅವಲಂಬನೆ ಹೆಚ್ಚಾಗುವಂತೆ ಆಗಿದೆ. ಇಂತಹ ಸೂಕ್ಷ್ಮತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗೊತ್ತಾಗಬೇಕು ಎಂದು ಕೆ.ಪ್ರಕಾಶ್ ತಿಳಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ.ಅನಿಲ್ ಆವುಲಪ್ಪ ಮಾತನಾಡಿ, “ಎಸ್‌ಎಫ್‌ಐ ಸದಾ ಕಾಲಕ್ಕೂ ಶೋಷಿತರ ಬಡವರ ದಲಿತ ಪರವಾಗಿ ಚಿಂತಿಸುವ ಸಂಘಟನೆಯಾಗಿದೆ. ಮನುಷ್ಯಕುಲದ ಉನ್ನತಿಯನ್ನು ತನ್ನ ಧ್ಯೇಯವಾಗಿರಿಸಿಕೊಂಡಿದೆ. ಸಮಾಜವಾದದ ಉದ್ದೇಶ ಹೊಂದಿರುವ ನಾವು ಸಮಾನತೆಯನ್ನು ಸಾಧಿಸಲು ವರ್ಗರಹಿತ ಸಮಾಜವನ್ನು ನಿರ್ಮಿಸಬೇಕಿದೆ. ಜಾತಿ-ಧರ್ಮ-ಕುಲ-ಗೋತ್ರಗಳ ಜಂಜಾಟದಲ್ಲಿ ಮುಳುಗಿರುವ ಭಾರತದಲ್ಲಿ, ವರ್ಗ ಸಂಘರ್ಷ ಆಗದ ಹೊರತು ಸಮಾನತೆ ಕಾಣಲು ಸಾಧ್ಯವಿಲ್ಲ ಎಂಬುದನ್ನು ಸಂಘಟನೆ ಬಲವಾಗಿ ನಂಬಿದೆ ಎಂದರು.
“ವಿದ್ಯಾರ್ಥಿಗಳು ಸಂಘಟಿತ ಹೋರಾಟದಿಂದ ಸಮಾಜದಲ್ಲಿ ಏನೆಲ್ಲಾ ಬದಲಾವಣೆ ತರುವಂತೆ ಮಾಡುವ ಶಕ್ತಿ ಹೊಂದಿದ್ದಾರೆ ಎಂಬುದಕ್ಕೆ ರಷ್ಯಾ, ಚೀನಾ, ಫ್ರಾನ್ಸ್, ಕ್ಯೂಬಾ, ವಿಯೆಟ್ನಾಂ ಕ್ರಾಂತಿಗಳೇ ಸಾಕ್ಷಿ” ಎಂದರು.
ಇದನ್ನು ಓದಿದ್ದೀರಾ? ಬಹಿರಂಗ ಪತ್ರ | ಅತ್ಯಾಚಾರ ಸಂತ್ರಸ್ತರು ಮುಖ ಮುಚ್ಚಿಕೊಳ್ಳದೇ ಟಿ ವಿ ಮುಂದೆ ಬರಬೇಕಾ? ಕುಮಾರಸ್ವಾಮಿಯವರೇ?!
16ನೇ ರಾಜ್ಯ ಸಮ್ಮೇಳನದಲ್ಲಿ 10 ನಿರ್ಣಯಗಳನ್ನು ಕೈಗೊಳ್ಳಲಾಯಿತು. ನಿರ್ಣಯಗಳ ಅನುಷ್ಠಾನಕ್ಕೆ ಆಳುವ ಸರಕಾರಗಳ ಮೇಲೆ ಒತ್ತಡ ತರುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಎಸ್‌ಎಫ್‌ಐ ಕಾರ್ಯಕರ್ತರಲ್ಲಿ ಇದೇ ವೇಳೆ ಮನವಿ ಮಾಡಲಾಯಿತು.
ಎಸ್‌ಎಫ್‌ಐ ರಾಜ್ಯಾಧ್ಯಕ್ಷರಾಗಿ ಕೋಲಾರದ ಶಿವಕುಮಾರ್ ಆಯ್ಕೆ
ರಾಜ್ಯ ಸಮ್ಮೇಳನದಲ್ಲಿ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಿದ್ದು, ಎಸ್‌ಎಫ್‌ಐ ರಾಜ್ಯಾಧ್ಯಕ್ಷರಾಗಿ ಕೋಲಾರದ ಶಿವಕುಮಾರ್ ಆಯ್ಕೆಯಾಗಿದ್ದಾರೆ. ರಾಜ್ಯ ಸಮಿತಿ ಸದಸ್ಯರಾಗಿ ವಿಜಯಕುಮಾರ್, ಸಂಗನಗೌಡ ಮೈಸೂರು ಇವರನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಎಸ್‌ಎಫ್‌ಐ ಮುಖಂಡರು ಕಾರ್ಯಕರ್ತರು, ಸಿಪಿಐಎಂ ಮುಖಂಡರು ಕಾರ್ಯಕರ್ತರು ಇದ್ದರು.
