ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಅವರ 117ನೇ ಜನ್ಮದಿನಾಚರಣೆ ಅಂಗವಾಗಿ ಎಐಡಿಎಸ್‌ಒ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಕುಕ್ಕರಹಳ್ಳಿ ಪಾರ್ಕ್, ಮಹಾರಾಣಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಭಗತ್ ಸಿಂಗ್ ವಿಚಾರ ತಿಳಿಸುವುದರ ಮೂಲಕ ಜನ್ಮದಿನಾಚರಣೆ ಮಾಡಿದರು.
“ಭಗತ್ ಸಿಂಗ್ ಕ್ರಾಂತಿ ಮತ್ತು ಸ್ವಾತಂತ್ರ್ಯದ ಬಗೆಗಿನ ತಮ್ಮ ವಿಚಾರವನ್ನು ಎಷ್ಟು ಪ್ರಖರವಾಗಿ ಹರಡಿದ್ದರೆಂದರೆ ಸಾವಿರಾರು ಜನ ವಿಚಾರಗಳನ್ನು ಈಡೇರಿಸಲು ಪ್ರಾಣತ್ಯಾಗಕ್ಕೆ ಸಿದ್ಧರಾಗಿ ಬೀದಿಗಿಳಿದರು. ಭಗತ್ ಸಿಂಗ್ ಅವರ ಪ್ರಕಾರ ಸ್ವಾತಂತ್ರ್ಯದ ಪರಿಕಲ್ಪನೆ ಹೀಗಿತ್ತು “ಕೇವಲ ಸ್ವಾತಂತ್ರ್ಯ ಪಡೆಯುವುದು ನಮ್ಮ ಉದ್ದೇಶವಲ್ಲ, ಬ್ರಿಟೀಷರಿಂದ ಪಡೆದ ಸ್ವಾತಂತ್ರ್ಯ ನಮ್ಮ ದೇಶದ ಕೆಲವೇ ಕೆಲವು ಶ್ರೀಮಂತ ವರ್ಗಕ್ಕೆ ವರ್ಗಾವಣೆಯಾದರೆ, ಅದು ನಿಜವಾದ ಸ್ವಾತಂತ್ರ್ಯವಾದೀತೆ? ಹೀಗೆ ಸಿಗುವ ಸ್ವಾತಂತ್ರ್ಯ ನಮ್ಮ ದೇಶದ ಸಾಮಾನ್ಯ ಜನರ ಬದುಕಿನಲ್ಲಿ ಏನಾದರೂ ಬದಲಾವಣೆಯನ್ನು ತರಲು ಸಾಧ್ಯವೇ? ದೇಶದ ರೈತರ, ಬಡ ಕೂಲಿ-ಕಾರ್ಮಿಕರ ಜೀವನ ಉತ್ತಮವಾಗುವುದೇ? ಎಂದು ಭಗತ್ ಸಿಂಗ್ ಪ್ರಶ್ನಿಸುತ್ತಿದ್ದರು” ಎಂದು ಸಾರ್ವಜನಿಕರಿಗೆ ತಿಳಿಸಿದರು.
“ಭಗತ್ ಸಿಂಗ್ ಅವರು, ʼಸ್ವಾತಂತ್ರ್ಯ ಪಡೆಯುವುದು ಮಾತ್ರವೇ ನಮ್ಮ ಉದ್ದೇಶವಲ್ಲ, ಅದು ಮೊದಲ ಹೆಜ್ಜೆ ಮಾತ್ರ! ನಮ್ಮ ಗುರಿಯಿರುವುದು ಒಂದು ಉನ್ನತವಾದ ರಾಷ್ಟ್ರವನ್ನು ನಿರ್ಮಾಣ ಮಾಡುವುದು. ಯಾವ ರಾಷ್ಟ್ರ ತನ್ನೆಲ್ಲ ಜನರಿಗೆ ಸಮಾನವಾಗಿ ಬದುಕುವ ಹಕ್ಕನ್ನು ನೀಡುತ್ತದೆಯೋ, ಯಾವ ರಾಷ್ಟ್ರ ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವುದಿಲ್ಲವೋ, ಯಾವ ರಾಷ್ಟ್ರ ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವುದೋ ಅಂತಹ ರಾಷ್ಟ್ರ ಸ್ವಾತಂತ್ರ್ಯ ರಾಷ್ಟ್ರʼವೆಂದು ಹೇಳುತ್ತಿದ್ದರು” ಎಂದರು.
ಜಿಲ್ಲಾ ಕಾರ್ಯದರ್ಶಿ ನಿತಿನ್ ಮಾತನಾಡಿ, “ಭಗತ್ ಸಿಂಗ್ ಅವರು ಮಾನವನ ಜೀವನವನ್ನು ಪ್ರೀತಿಸಿದರು ಮತ್ತು ಮಾನವನ ಘನತೆಯನ್ನು ಎತ್ತಿಹಿಡಿದರು. ಹೇಗೆ ಜಾತಿ ಪದ್ಧತಿಯು ಜನಗಳನ್ನು ಕತ್ತಲೆಯಲ್ಲಿಟ್ಟು ಶೋಷಕರನ್ನು ಪ್ರಶ್ನಿಸದಂತೆ ಹೆಣೆದಿರುವ ನೀಚ ಷಡ್ಯಂತ್ರ. ಶತಮಾನಗಳಿಂದ ಈ ಕೊಳಕು ಅಮಾನವೀಯ ಆಚರಣೆಗಳು ಪ್ರಶ್ನಾತೀತವಾಗಿ ಮುಂದುವರೆದುಕೊಂಡು ಬಂದಿವೆ” ಎಂದು ಟೀಕಿಸಿದರು.
ಉಪಾಧ್ಯಕ್ಷೆ ಸ್ವಾತಿ ಮಾತನಾಡಿ, “ಕ್ರಾಂತಿಯೆಂದರೆ ಪ್ರಸಕ್ತ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಿತ್ತೊಗೆದು ಸಮಾಜವಾದಿ ವ್ಯವಸ್ಥೆ ಸ್ಥಾಪನೆ ಮಾಡುವುದು ಕೋಮುವಾದಿಗಳ ಆರ್ಥಿಕ ಪರಿಸ್ಥಿತಿಯೊಂದಿಗೆ ಸಂಬಂಧ ಹೊಂದಿದೆ ಎಂಬುದನ್ನು ಭಗತ್ ಸಿಂಗ್ ಗಮನಿಸಿದರು ಮತ್ತು ಧರ್ಮವನ್ನು ರಾಜಕೀಯದಿಂದ ಹೊರಗಿಡಬೇಕೆಂದು ಹೇಳುತ್ತಿದ್ದರು” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹೊನ್ನಟಗಿ ಗ್ರಾಮವು ಹೆಸರಿಗೆ ಮಾತ್ರ ಆದರ್ಶ ಗ್ರಾಮ; ಅಭಿವೃದ್ಧಿ ಮರೀಚಿಕೆ
ಅಭಿಷೇಕ್ ಮಾತನಾಡಿ, “ಶಿಕ್ಷಣದ ವ್ಯಾಪಾರಿಕರಣ, ನಿರುದ್ಯೋಗ, ಹಸಿವು, ಬಡತನ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮುಂತಾದ ಸಮಸ್ಯೆಗಳ ವಿರುದ್ಧ ಹೋರಾಡಲು ಹಾಗೂ ಶಿಕ್ಷಣ, ಮಾನವತೆ ಸಂಸ್ಕೃತಿ ಉಳಿಸಲು ಭಗತ್ ಸಿಂಗ್ ಅವರ ವಿಚಾರಗಳಿಂದ ಸ್ಫೂರ್ತಿಪಡೆದು ಹೋರಾಟಕ್ಕೆ ಮುಂದೆ ಬರಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಪದಾಧಿಕಾರಿಗಳಾದ ಹೇಮಾ, ಚಂದ್ರಿಕಾ, ಅಂಜಲಿ, ದಿಶಾ, ಬೀರಪ್ಪ, ಮುತ್ತು, ನಂದೀಶ್, ಅಭಿಷೇಕ್ ಬಿಪಿನ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.