ನಿರ್ಮಾಪಕಿ ಆರಾಧನಾ ಕುಲಕರ್ಣಿ ಹಾಗೂ ದಿಲೀಪ ಶರ್ಮಾ ನಿರ್ದೇಶಕದಲ್ಲಿ ಬಿಡುಗಡೆಯಾದ ಸಿನಿಮಾದಲ್ಲಿ ಶರಣರ ಬಗ್ಗೆ ತಪ್ಪು ಸಂದೇಶಗಳನ್ನು ಬಿಂಬಿಸಲಾಗಿದ್ದು, ಕೂಡಲೇ ʼಶರಣರ ಶಕ್ತಿʼ ಚಿತ್ರ ಪ್ರದರ್ಶನ ತಡೆ ಹಿಡಿಯಬೇಕು ಎಂದು ಬೆಳಗಾವಿ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಆಗ್ರಹಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಶರಣರ ಶಕ್ತಿʼ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಅದರಲ್ಲಿ ಶರಣರ ಬಗ್ಗೆ ಸತ್ಯ ಸಂಗತಿಗೆ ವಿರುದ್ಧವಾದ ಸನ್ನಿವೇಶಗಳಿವೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಅದರಲ್ಲಿ ಶರಣರ ಬಗ್ಗೆ ಅವಹೇಳನಕಾರಿಯಾದ ಮತ್ತು ಸತ್ಯಸಂಗತಿಗೆ ವಿರುದ್ಧವಾದ ಸನ್ನಿವೇಶಗಳಿವೆ. ಬಸವಣ್ಣ ಅವರನ್ನು ಖಡ್ಗದಿಂದ ಸಂಹಾರ ಮಾಡುವ ಸನ್ನಿವೇಶವಿದೆ. ಅಕ್ಕನಾಗಮ್ಮನವರ ವೈವಾಹಿಕ ಜೀವನ ಚರಿತ್ರೆ ತಿರುಚಲಾಗಿದೆ ಹಾಗೂ ಜಂಗಮರನ್ನು ‘ಪುಂಡಜಂಗಮ’ ಎಂದು ಜರಿಯಲಾಗಿದೆʼ ಎಂದು ಕಿಡಿಕಾರಿದರು.
ʼ30-35 ಸೆಕೆಂಡುಗಳ ಟ್ರೇಲರಿನಲ್ಲಿನಲ್ಲಿಯೇ ಇಷ್ಟೊಂದು ತಪ್ಪುಗಳಿರಬೇಕಾದರೆ ಚಿತ್ರದುದ್ದಕ್ಕೂ ಇನ್ನೆನು ಗಂಡಾಂತರಕಾರಿಯಾದ ಸನ್ನಿವೇಶ, ಸಂಭಾಷಣೆಗಳಿರಬಹುದೆಂಬ ಆತಂಕ ಲಿಂಗಾಯತರಲ್ಲಿ ಹುಟ್ಟುಹಾಕಿದೆ. ಇದು ಲಿಂಗಾಯತರ ಭಾವನೆಗಳಿಗೆ ದಕ್ಕೆ ತರುತ್ತವೆ. ಒಂದು ಧರ್ಮವನ್ನು ಅವಹೇಳನ ಮಾಡುವುದು ಕಾನೂನು ಬಾಹಿರ ಮಾತ್ರವಲ್ಲದೇ, ಭಾರತ ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗುತ್ತದೆʼ ಎಂದರು.
ಇದನ್ನೂ ಓದಿ ಬೆಳಗಾವಿ | ಬೆಳ್ಳುಳ್ಳಿ ಬೆಳೆಗೆ ಉತ್ತಮ ಬೆಲೆ; ರೈತರ ಮುಖದಲ್ಲಿ ಮಂದಹಾಸ
ಕರ್ನಾಟಕ ಸರಕಾರ ವಿಶ್ವ ಗುರುಬಸವಣ್ಣನವರನ್ನು ʼಸಾಂಸ್ಕೃತಿಕ ನಾಯಕʼ ನೆಂದು ಘೋಷಿಸಿ ತನ್ನನ್ನು ತಾನೇ ಗೌರವಿಸಿಕೊಂಡಿದೆ. ಅವರ ಆದರ್ಶವನ್ನು ಕೊಂಡಾಡಬೇಕಾದ ದಿನಗಳಲ್ಲಿ ಶರಣರ ಬಗ್ಗೆ ತಪ್ಪು ಸಂದೇಶ ನೀಡುವುದು ಅಕ್ಷಮ್ಯವಾಗಿದೆʼ ಎಂದು ಹೇಳಿದರು.