ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ನಗದು ಕೊರತೆ ಕಾರಣ ಆಡಳಿತಾತ್ಮಕ ವೆಚ್ಚಗಳನ್ನು ಕಡಿಮೆ ಮಾಡಲೆಂದು ಪಾಕಿಸ್ತಾನ ಸರ್ಕಾರವು ಐಎಂಎಫ್‌ನೊಂದಿಗೆ ಮಾಡಿಕೊಂಡಿರುವ 7 ಶತಕೋಟಿ ಯುಎಸ್ ಡಾಲರ್ ಸಾಲದ ಒಪ್ಪಂದದ ಭಾಗವಾಗಿ ಸುಮಾರು 150,000 ಸರ್ಕಾರಿ ಹುದ್ದೆಗಳನ್ನು ಕಡಿತಗೊಳಿಸಿದೆ, ಆರು ಸಚಿವಾಲಯಗಳನ್ನು ವಿಸರ್ಜನೆ ಮಾಡಿದೆ ಮತ್ತು ಇನ್ನೆರಡು ಸಚಿವಾಲಯಗಳನ್ನು ವಿಲೀನಗೊಳಿಸಲಾಗಿದೆ ಎಂದು ಭಾನುವಾರ ಘೋಷಿಸಿದೆ.
ಸೆಪ್ಟೆಂಬರ್ 26ರಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂತಿಮವಾಗಿ ಸಹಾಯ ಮಾಡಲು ಒಪ್ಪಿಕೊಂಡಿದೆ. ಪಾಕಿಸ್ತಾನವು ವೆಚ್ಚಗಳನ್ನು ಕಡಿತಗೊಳಿಸಲು, ತೆರಿಗೆ-ಜಿಡಿಪಿ ಅನುಪಾತವನ್ನು ಹೆಚ್ಚಿಸಲು, ಕೃಷಿ ಮತ್ತು ರಿಯಲ್ ಎಸ್ಟೇಟ್‌ನಂತಹ ಸಾಂಪ್ರದಾಯಿಕವಲ್ಲದ ವಲಯಗಳಿಗೆ ತೆರಿಗೆ ವಿಧಿಸಲು ಒಪ್ಪಿಕೊಂಡ ನಂತರ ಮೊದಲ ಕಂತಾಗಿ ಐಎಂಎಫ್ 1 ಶತಕೋಟಿ ಯುಎಸ್ ಡಾಲರ್ ಬಿಡುಗಡೆ ಮಾಡಿದೆ.
ಇದನ್ನು ಓದಿದ್ದೀರಾ? ಪಾಕಿಸ್ತಾನ | ಗುರುತಿನ ಚೀಟಿ ಪರಿಶೀಲಿಸಿದ ಬಳಿಕ 23 ಪ್ರಯಾಣಿಕರಿಗೆ ಗುಂಡಿಕ್ಕಿ ಕೊಲೆ
ಅಮೆರಿಕದಿಂದ ಹಿಂದಿರುಗಿದ ನಂತರ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್, “ಐಎಂಎಫ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಕೊನೆಯ ಒಪ್ಪಂದವಾಗಿದೆ. ಇದು ಕೊನೆಯ ಕಾರ್ಯಕ್ರಮ ಎಂದು ಸಾಬೀತುಪಡಿಸಲು ನಾವು ನಮ್ಮ ನೀತಿಗಳನ್ನು ಕಾರ್ಯಗತಗೊಳಿಸಬೇಕಾಗಿದೆ” ಎಂದು ಹೇಳಿದರು.
“ಆರು ಸಚಿವಾಲಯಗಳನ್ನು ಮುಚ್ಚುವ ನಿರ್ಧಾರ ಮಾಡಲಾಗಿದೆ. ಎರಡು ಸಚಿವಾಲಯಗಳನ್ನು ವಿಲೀನಗೊಳಿಸಲಾಗುವುದು. ಹೆಚ್ಚುವರಿಯಾಗಿ, ವಿವಿಧ ಸಚಿವಾಲಯಗಳಲ್ಲಿ 150,000 ಹುದ್ದೆಗಳನ್ನು ತೆಗೆದುಹಾಕಲಾಗುವುದು” ಎಂದು ಔರಂಗಜೇ ತಿಳಿಸಿದರು.
ಇದನ್ನು ಓದಿದ್ದೀರಾ? ಮುಸ್ಲಿಮರ ಜನಸಂಖ್ಯೆಯನ್ನು ತೋರಿಸಲು ಪಾಕಿಸ್ತಾನದ ಧ್ವಜ ಬಳಸಿದ ‘ಸುವರ್ಣ ನ್ಯೂಸ್ ಕನ್ನಡ’!
“ಕಳೆದ ವರ್ಷ ಸರಿಸುಮಾರು 300,000 ಹೊಸ ತೆರಿಗೆದಾರರು ಇದ್ದರು. ಈ ವರ್ಷ 732,000 ಹೊಸ ತೆರಿಗೆದಾರರು ನೋಂದಾಯಿಸಿಕೊಂಡಿದ್ದಾರೆ. ದೇಶದಲ್ಲಿ ಒಟ್ಟು ತೆರಿಗೆದಾರರ ಸಂಖ್ಯೆಯು 1.6 ಮಿಲಿಯನ್‌ನಿಂದ 3.2 ಮಿಲಿಯನ್‌ಗೆ ಹೆಚ್ಚಾಗಿದೆ” ಎಂದು ವಿವರಿಸಿದರು.
“ಆರ್ಥಿಕತೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ದೇಶದ ವಿದೇಶಿ ವಿನಿಮಯ ಸಂಗ್ರಹವು ಅತ್ಯಧಿಕ ಮಟ್ಟವನ್ನು ತಲುಪಿದೆ” ಎಂದು ಪ್ರತಿಪಾದಿಸಿದ ಸಚಿವರು, “ರಾಷ್ಟ್ರೀಯ ರಫ್ತು ಮತ್ತು ಐಟಿ ರಫ್ತು ಎರಡರಲ್ಲೂ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಆರ್ಥಿಕತೆಯ ಬಲದ ಬಗ್ಗೆ ಹೂಡಿಕೆದಾರರ ವಿಶ್ವಾಸವು ಪ್ರಮುಖ ಯಶಸ್ಸು” ಎಂದರು.
