- ರಣ ಬಿಸಿಲಿನಿಂದ ಬಳಲುತ್ತಿರುವ ಬಡ ಬೆಂಗಳೂರಿಗರ ಗತಿ ಏನು?
- ರೋಡ್ ಶೋ ನಡೆಯುವ ರಸ್ತೆ ಉದ್ದಕ್ಕೂ ಮರಗಳ ಮಾರಣಹೋಮ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆಯ ಧಗೆಗೆ ಕಂಗೆಟ್ಟದ್ದ ಜನಕ್ಕೆ ಕಳೆದ ಎರಡು ದಿನಗಳಿನಿಂದ ಮಳೆಯಾಗಿ ತಂಪೆರೆದಿದೆ. ಜನರಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಆಸರೆಯಾಗಿದ್ದು, ನಗರದಲ್ಲಿರುವ ಮರಗಳು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗಾಗಿ ನೂರಾರು ಮರಗಳನ್ನು ಕಡಿದುರುಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಡಿ ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ಒಟ್ಟು 36 ಕಿ.ಮೀ ರೋಡ್ ಶೋ ನಡೆಸುತ್ತಿದ್ದಾರೆ. ರೋಡ್ ಶೋ ನಡೆಯುವ ರಸ್ತೆ ಉದ್ದಕ್ಕೂ ಮರಗಳನ್ನು ಕಡಿಯಲಾಗಿದೆ. ಕೇವಲ ರೋಡ್ ಶೋಗಾಗಿ ಮರಗಳನ್ನು ಕಡಿಯುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಪರಿಸರ ಪ್ರೇಮಿ ವಿಜಯ್ ನಿಶಾಂತ್, “ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿರುವ ಮರಗಳ ನೆರಳಿನಲ್ಲಿ ಬರಬೇಕೆಂದು ಬಯಸಿದ್ದೆವು. ಅದನ್ನು ತೆಗೆಯುವ ಮೂಲಕ ಅಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
“ಇಂದಿರಾನಗರ, ಬಸವನಗುಡಿ, ಬಸವೇಶ್ವರನಗರ ಸೇರಿದಂತೆ ನಗರದೆಲ್ಲೆಡೆ ಪ್ರಧಾನಿಯವರ ರೋಡ್ ಶೋಗೆ ಸ್ಥಳಾವಕಾಶಕ್ಕಾಗಿ ಮರಗಳ ಮಾರಣಹೋಮ ಮಾಡುತ್ತಿದ್ದಾರೆ. ಬೆಂಗಳೂರಿನ ಜನರು ಮರಗಳನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಮುಖ್ಯಮಂತ್ರಿಯವರು ಪ್ರಧಾನಮಂತ್ರಿ ಅವರಿಗೆ ತಿಳಿಸಬೇಕು” ಎಂದು ಕಿಮ್ಸುಕಾ ಎಂಬುವವರು ಮನವಿ ಮಾಡಿದ್ದಾರೆ.
“ಇದು ನ್ಯಾಯವೇ? ಮರಗಳು ಏನು ಮಾಡಿದ್ದವು. 30 ಕಿ.ಮೀ ರಸ್ತೆಯುದ್ದಕ್ಕೂ ರೋಡ್ ಶೋ ನಡೆಯುವ ಎಲ್ಲ ರಸ್ತೆಗಳಲ್ಲಿ ಮರಗಳನ್ನು ಕಡಿಯುತ್ತಿದ್ದಾರೆ. ಪರಿಸರ ಕಾಳಜಿ ಬಗ್ಗೆ ಉದ್ದುದ್ದ ಡೈಲಾಗ್ ಹೊಡೆದು ಪ್ರಯೋಜನವೇನು ಒಂದು ದಿನದ ರೋಡ್ ಶೋಗಾಗಿ ನೂರಾರು ಮರಗಳ ಮಾರಣಹೋಮ ಮಾಡುತ್ತಿದ್ದಾರೆ” ಎಂದು ರೂಪೇಶ್ ರಾಜಣ್ಣ ಅವರು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿ ರೋಡ್ ಶೋ ವೇಳೆ ಸಾರ್ವಜನಿಕರು ಮನೆಯ ಬಾಲ್ಕನಿ/ಟೆರೇಸ್ ಮೇಲೆ ನಿಂತು ನೋಡುವುದನ್ನು ನಿಷೇಧಿಸಲಾಗಿದೆ
“ಪ್ರಧಾನಿ ಮೋದಿ ಅವರು ಬರುತ್ತಾರೆ ಮತ್ತೆ ಹೋಗುತ್ತಾರೆ. ಆದರೆ, ಈ ರಣ ಬಿಸಿಲಿನಿಂದ ಬಳಲುತ್ತಿರುವ ಬಡ ಬೆಂಗಳೂರಿಗರ ಗತಿ ಏನು? ನಗರದಲ್ಲಿ ಮರ ಕಡಿಯಲು ಟ್ರೀ ಆಫೀಸರ್ ಅನುಮತಿ ನೀಡಿದ್ದಾರೆಯೇ?” ಎಂದು ವಿನಯ್ ಎಂಬುವವರು ಪ್ರಶ್ನಿಸಿದ್ದಾರೆ.