ಪೂರ್ವಸೂಚನೆ ಇಲ್ಲದೆ ಏಕಾಏಕಿ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ನುಗ್ಗಿದ ಉಪಕುಲಪತಿಯ ನಡೆಯ ವಿರುದ್ಧ ವಿದ್ಯಾರ್ಥಿ ಪ್ರತಿಭಟನೆ ಸಿಡಿದಿದೆ. ಪಂಜಾಬಿನ ಪಟಿಯಾಲದ ರಾಜೀವಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಜೈಶಂಕರ್ ಸಿಂಗ್ ವಿರುದ್ಧ ವಿದ್ಯಾರ್ಥಿಗಳು ಕಳೆದ ಎಂಟು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.
ಉಪಕುಲಪತಿಯು ಈ ಹಿಂದೆ ನೀಡುತ್ತ ಬಂದಿರುವ ಸ್ತ್ರೀದ್ವೇಷಿ ಹೇಳಿಕೆಗಳು, ವಿಶ್ವವಿದ್ಯಾಲಯದ ಕ್ಯಾಂಪಸ್ ನ ಕುಂದು ಕೊರತೆಗಳ ವಿರುದ್ಧ ವಿದ್ಯಾರ್ಥಿಗಳ ಅಸಮಾಧಾನ ಹೆಪ್ಪುಗಟ್ಟುತ್ತ ಬಂದಿತ್ತು. ಉಪಕುಲಪತಿ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ನುಗ್ಗಿದ ನಡೆ ಈ ಅಸಮಾಧಾನದ ಆಸ್ಫೋಟಕ್ಕೆ ದಾರಿ ಮಾಡಿದೆ.
ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ವಿಶ್ವವಿದ್ಯಾಲಯದ ಪುರುಷ ಸಿಬ್ಬಂದಿಗೆ ಪ್ರವೇಶವಿಲ್ಲ. ಈ ಕುರಿತು ನಿಯಮವನ್ನೇ ಮಾಡಲಾಗಿದೆ. ಪೋಷಕರನ್ನು ಕೂಡ ಹಾಸ್ಟೆಲ್ ಒಳಗೆ ಬಿಡುವುದಿಲ್ಲ. ಉಪಕುಲಪತಿ ಹೀಗೆ ನುಗ್ಗಿರುವುದು ನಮ್ಮ ಖಾಸಗಿತನ ಮತ್ತು ಖಾಸಗಿ ಆವರಣದ (ಪ್ರೈವೆಸಿ) ಮೇಲೆ ನಡೆದಿರುವ ಆಕ್ರಮಣ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಉಪಕುಲಪತಿಯವರ ಈ ಅನುಚಿತ ನಡೆ ಇದೇ ಮೊದಲನೆಯದೇನೂ ಅಲ್ಲ. ಕಳೆದ ಮಾರ್ಚ್ ತಿಂಗಳಿನಲ್ಲಿ ನೇಮಕ ಆದಾಗಿನಿಂದ ಲೈಂಗಿಕ ಪೂರ್ವಗ್ರಹದ ಮತ್ತು ಸಂವೇದನಾಶೂನ್ಯ ಹೇಳಿಕೆಗಳನ್ನು ಹಲವಾರು ಸಲ ಮಾಡಿದ್ದಾರೆ. ‘ನೈತಿಕ ಪೊಲೀಸುಗಿರಿ’ ನಡೆಸಿದ್ದಾರೆ. ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ನುಗ್ಗಿದ ನಂತರ ನಾವು ಆಕ್ಷೇಪಣೆ ಎತ್ತಿದ ನಂತರವೇ ಚೀಫ್ ವಾರ್ಡನ್ ಮತ್ತು ಮಹಿಳಾ ಸೆಕ್ಯೂರಿಟಿ ಗಾರ್ಡ್ ಅವರನ್ನು ಕರೆಯಿಸಲಾಯಿತು ಎಂದಿದ್ದಾರೆ ವಿದ್ಯಾರ್ಥಿಗಳು.
‘ಹುಡುಗಿಯಾಗಿ ಯಾಕೆ ಇಂತಹ ಹೊಸ ಮತ್ತು ಜಟಿಲ ವಿಷಯಗಳನ್ನು ಯಾಕೆ ಆರಿಸಿಕೊಂಡಿದ್ದೀ. ಕೌಟುಂಬಿಕ ಹಿಂಸೆ ಅಥವಾ ವಿವಾಹ ಕಾಯಿದೆ ಕುರಿತು ಮನೆಯಿಂದಲೇ ಕೋರ್ಸ್ ಮಾಡು’ ಎಂದು ವಿ.ಸಿ. ವಿದ್ಯಾರ್ಥಿನಿಯರಿಗೆ ಹೇಳಿದ್ದುಂಟು. ವಿದ್ಯಾರ್ಥಿನಿಯರು ತೊಡುವ ಉಡುಪನ್ನು ಕುರಿತೂ ಟೀಕೆ ಟಿಪ್ಪಣಿ ಮಾಡಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯದ ಪದನಿಮಿತ್ತ ಕುಲಾಧಿಪತಿಯೂ ಆಗಿರುವ ಪಂಜಾಬ್-ಹರಿಯಾಣ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರಿಗೆ ದೂರು ಸಲ್ಲಿಸಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ವಿದ್ಯಾರ್ಥಿನಿಯರ ಚಲನವಲನದ ಮೇಲೆ ಹೇರಿದ್ದ ನಿರ್ಬಂಧಗಳನ್ನು ರದ್ದು ಮಾಡಬೇಕು, ಹಾಸ್ಟೆಲ್ ಊಟದ ಗುಣಮಟ್ಟ ಸುಧಾರಿಸಬೇಕು, ಕ್ಯಾಂಪಸ್ ನ ಮುಖ್ಯದ್ವಾರದಲ್ಲಿ ಸಿಸಿ ಟಿವಿ ಕ್ಯಾಮೆರಾ ಹಾಗೂ ಸಾಕಷ್ಟು ಬೆಳಕಿನ ವ್ಯವಸ್ಥೆ ಆಗಬೇಕು ಎಂಬುದು ವಿದ್ಯಾರ್ಥಿಗಳ ಇತರೆ ಅಹವಾಲುಗಳು.
ಈ ಸಲ ವಿದ್ಯಾರ್ಥಿನಿಯರು ದೊಡ್ಡ ಸಂಖ್ಯೆಯಲ್ಲಿ ಪ್ರವೇಶ ಪಡೆದಿದ್ದು, ವಿದ್ಯಾರ್ಥಿನಿಯರ ಹಾಸ್ಟೆಲ್ ಕಿಕ್ಕಿರಿದು ಮೊದಲನೆಯ ವರ್ಷದ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಮೊದಲ ವರ್ಷದ ವಿದ್ಯಾರ್ಥಿನಿಯರು ಕೊಠಡಿಗಳನ್ನು ಹಂಚಿಕೊಳ್ಳಬೇಕಾಗಿ ಬಂದಿದೆ ಎಂಬ ದೂರು ಬಂದಿತ್ತು. ಪರಿಶೀಲಿಸಲೆಂದು ವಿದ್ಯಾರ್ಥಿನಿಯರ ಆಮಂತ್ರಣದ ಮೇರೆಗೇ ಹೋಗಿದ್ದೆ ಎಂಬುದು ಉಪಕುಲಪತಿಯ ಸಮಜಾಯಿಷಿ.
ವಿದ್ಯಾರ್ಥಿನಿಯರು, ಈ ಸಮಜಾಯಿಷಿ ಸತ್ಯದೂರ ಎಂದು ತಳ್ಳಿ ಹಾಕಿದ್ದಾರೆ. ಉಪಕುಲಪತಿಯವರು ವಿದ್ಯಾರ್ಥಿನಿಯರಿಗಾಗಲಿ, ಹಾಸ್ಟೆಲಿನ ಚೀಫ್ ವಾರ್ಡನ್‌ಗೇ ಆಗಲಿ ತಮ್ಮ ಭೇಟಿ ಕುರಿತು ಪೂರ್ವಸೂಚನೆ ನೀಡಿಲ್ಲ. ಮೊದಲನೆಯ ವರ್ಷದ ವಿದ್ಯಾರ್ಥಿನಿಯರಿಗೆ ತೊಂದರೆಯಾದರೆ, ಉಪಕುಲಪತಿಯವರು ಮೂರನೆಯ ವರ್ಷದ ವಿದ್ಯಾರ್ಥಿನಿಯರ ಕೊಠಡಿಗಳಿಗೂ ನುಗ್ಗಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.