ತಿರುಪತಿ ಲಡ್ಡು ವಿವಾದದ ಪ್ರಕರಣವನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಕೆ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಲಡ್ಡುಗಳ ತಯಾರಿಕೆಗೆ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಸಾರ್ವಜನಿಕವಾಗಿ ಆರೋಪ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಮುಖ್ಯಮಂತ್ರಿಗಳು ಇಂತಹ ಹೇಳಿಕೆ ನೀಡುವುದರ ಔಚಿತ್ಯವನ್ನು ಕೋರ್ಟ್ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ಪೀಠವು ತಿರುಪತಿ ಲಡ್ಡುಗಳಿಗೆ ಸಂಬಂಧಿಸಿದ ವಿವಾದವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದೆ.
ಇದನ್ನು ಓದಿದ್ದೀರಾ? ಬೆಳಗಾವಿ | ತಿರುಪತಿ ಲಡ್ಡು ವಿವಾದ; ನಂದಿನಿ ತುಪ್ಪಕ್ಕೆ ಬೇಡಿಕೆ
ಇನ್ನು ಕೇಂದ್ರೀಯ ತನಿಖೆ ಅಗತ್ಯವಿದೆಯೇ ಎಂಬುದರ ಕುರಿತು ಕೇಂದ್ರ ಸರ್ಕಾರದಿಂದ ಸೂಚನೆಗಳನ್ನು ಪಡೆಯುವಂತೆ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಾಲಯ ಸೂಚಿಸಿದೆ. ಬಳಿಕ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಒಂದು ಗಂಟೆಯ ಸುದೀರ್ಘ ವಿಚಾರಣೆಯನ್ನು ನಡೆಸಿದ ಕೋರ್ಟ್, “ಪ್ರಯೋಗಾಲಯದ ವರದಿಯಲ್ಲಿ ಕೆಲವು ಗೊಂದಲಗಳಿದೆ. ಇದು ಸ್ಪಷ್ಟವಾಗಿಲ್ಲ ಮತ್ತು ತುಪ್ಪವನ್ನು ತಿರಸ್ಕರಿಸಲಾಗಿದೆ ಎಂದು ಪ್ರಾಥಮಿಕವಾಗಿ ಸೂಚಿಸುತ್ತದೆ. ಅದನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ನೀವೇ ತನಿಖೆಗೆ ಆದೇಶಿಸಿದ್ದರೆ, ಸಾರ್ವಜನಿಕವಾಗಿ ಹೇಳಿಕೆ ನೀಡುವ ಅಗತ್ಯವೇನಿತ್ತು” ನ್ಯಾಯಮೂರ್ತಿ ವಿಶ್ವನಾಥನ್ ಅವರು ಆಂಧ್ರಪ್ರದೇಶ ರಾಜ್ಯವನ್ನು ಪ್ರತಿನಿಧಿಸಿದ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಅವರನ್ನು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ತಿರುಪತಿ ಲಡ್ಡು ವಿವಾದ | ಸುಪ್ರೀಂ ಮೇಲ್ವಿಚಾರಣೆಯ ತನಿಖಾ ಸಮಿತಿ ಕೋರಿ ಸುಬ್ರಮಣಿಯನ್ ಸ್ವಾಮಿ ಅರ್ಜಿ
“ಈ ವರದಿಯು ಲಡ್ಡುಗಳ ತಯಾರಿಕೆಯಲ್ಲಿ ಬಳಸಲಾದ ತುಪ್ಪವಲ್ಲ ಎಂದು ಪ್ರಾಥಮಿಕವಾಗಿ ಸೂಚಿಸುತ್ತದೆ” ಎಂಬುದನ್ನು ಕೂಡಾ ನ್ಯಾಯಮೂರ್ತಿ ವಿಶ್ವನಾಥನ್ ಅವರು ಗಮನಿಸಿದ್ದಾರೆ.
“ನೀವು ಎಸ್ಐಟಿ ಮೂಲಕ ತನಿಖೆಗೆ ಆದೇಶಿಸಿದಾಗ ಪತ್ರಿಕಾಗೋಷ್ಠಿ ನಡೆಸುವ ಅವಶ್ಯಕತೆ ಏನಿತ್ತು? ನೀವು ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವಾಗ ದೇವರುಗಳನ್ನು ರಾಜಕಾರಣಿಗಳಿಂದ ದೂರವಿಡಬೇಕೆಂದು ನಾವು ನಿರೀಕ್ಷಿಸುತ್ತೇವೆ” ಎಂದು ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ.
