ಮಹಾತ್ಮಾ ಗಾಂಧೀಜಿಯವರ ಪಾರದರ್ಶಕ ವ್ಯಕ್ತಿತ್ವ ಮತ್ತು ಚಿಂತನೆಯ ಅಪೂರ್ವ ಹೊಳಹುಗಳನ್ನು ಕಾಣಿಸುವ ಈ ಮಾತು ಮತ್ತು ಬರಹಗಳು ನಾಡಿನ ಹಾಗೂ ಮನುಷ್ಯನ ಆರೋಗ್ಯಕರ ದೇಹ-ಮನಸ್ಸುಗಳಿಗೆ ಬೇಕಾದದ್ದನ್ನೆಲ್ಲ ಕೊಡುತ್ತವೆ. ಈ ವಿಶಿಷ್ಟ ಒಳನೋಟ, ಚಿಂತನೆಗಳು ನಿಮ್ಮ ವ್ಯಕ್ತಿತ್ವದಲ್ಲಿ ಬೆರೆಯಲಿ ಎಂಬುದು ನಮ್ಮ ಆಶಯ...
ನಾಗರಿಕ ಪ್ರತಿಭಟನೆ
ನಾಗರಿಕ ಅವಿಧೇಯತೆಯ ತತ್ವವನ್ನು ನಾನು ಥೋರೋನ ಬರಹಗಳಿಂದ ಪಡೆದೆ ಎಂಬುದು ಅಷ್ಟು ಸರಿಯಲ್ಲ. ನಾನು ಥೋರೋ ‘ಸಿವಿಲ್ ಡಿಸೊಬಿಡಿಯೆನ್ಸ್’ ಕುರಿತು ಬರೆದ ಬರಹವನ್ನು ಓದುವ ಮೊದಲೇ ದಕ್ಷಿಣ ಆಫ್ರಿಕಾದ ಆಳ್ವಿಕೆಯ ವಿರುದ್ಧ ನಮ್ಮ ಪ್ರತಿಭಟನೆ ಶುರುವಾಗಿತ್ತು. ನಾವು ಆಗ ಈ ಪ್ರತಿಭಟನೆಯನ್ನು ‘ಪ್ಯಾಸಿವ್ ರೆಸಿಸ್ಟೆನ್ಸ್’ (ಶಾಂತ ಪ್ರತಿಭಟನೆ) ಎಂದು ಕರೆದಿದ್ದವು. ಥೋರೋನ ‘ಸಿವಿಲ್ ಡಿಸೊಬಿಡಿಯೆನ್ಸ್’ ಎಂಬ ಅಪೂರ್ವ ಪ್ರಬಂಧ ಓದಿದ ಮೇಲೆ ಇಂಗ್ಲಿಷ್ ಓದುಗರನ್ನು ಗಮನದಲ್ಲಿಟ್ಟುಕೊಂಡು ನಾನು ‘ನಾಗರಿಕ ಅವಿಧೇಯತೆ’ ಎಂಬ ಪದವನ್ನು ಬಳಸತೊಡಗಿದೆ. ಆದರೆ ಯಾಕೋ ಈ ಪದ ನಮ್ಮ ಹೋರಾಟದ ಅರ್ಥವನ್ನು ಪೂರ್ತಿಯಾಗಿ ಹೇಳುತ್ತಿಲ್ಲ ಅನ್ನಿಸಿತು. ಆಗ ‘ನಾಗರಿಕ ಪ್ರತಿಭಟನೆ’ ಎಂಬ ಪದವನ್ನು ಬಳಸತೊಡಗಿದೆ.
ಆದರೆ ‘ಪ್ಯಾಸಿವ್ ರೆಸಿಸ್ಟೆನ್ಸ್’ ಅಥವಾ ‘ನಾಗರಿಕ ಅವಿಧೇಯತೆ’ ಎಂಬ ಪದದ ಅರ್ಥ ಸೀಮಿತವಾಗಿದೆ ಎಂದು ನಮಗೆಲ್ಲ ಅನ್ನಿಸತೊಡಗಿತು. ನಾವಾಗ ಹೊಸ ಪದವೊಂದನ್ನು ಹುಡುಕತೊಡಗಿದೆವು. ಆಗ ಮಗನ್‌ಲಾಲ್ ಗಾಂಧಿ ‘ಸದಾಗ್ರಹ’ (ಒಳ್ಳೆಯದಕ್ಕಾಗಿ ಆಗ್ರಹ) ಎಂಬ ಪದವನ್ನು ರೂಪಿಸಿದರು. ಅದರ ಅರ್ಥ ಇನ್ನಷ್ಟು ಸ್ಪಷ್ಟವಾಗಲೆಂದು, ಸಕಾರಾತ್ಮಕವಾಗಲೆಂದು ನಾನು ಅದನ್ನು ‘ಸತ್ಯಾಗ್ರಹ’ ಎಂದು ಕರೆದೆ.
ಸತ್ಯಾಗ್ರಹ
ಸತ್ಯಾಗ್ರಹ ಎನ್ನುವುದು ಆಧ್ಯಾತ್ಮಿಕ ಯುದ್ಧ. ಪ್ರತಿ ಸತ್ಯಾಗ್ರಹಿಯೂ ಒಬ್ಬ ಸೈನಿಕ. ಸತ್ಯಾಗ್ರಹ ಸೈನ್ಯವನ್ನು ಸೇರುವವನು ಆಲೋಚಿಸಿಯೇ ಸೇರುತ್ತಾನೆ. ಅಹಿಂಸೆಯ ಭಾಗವಾದ ಸತ್ಯಾಗ್ರಹ ಎರಡು ಹಂತದಲ್ಲಿ ಕೆಲಸ ಮಾಡುತ್ತದೆ, ಒಂದು: ಖಾಸಗಿ ಜೀವನದಲ್ಲಿ, ಅಂದರೆ ವ್ಯಕ್ತಿಯ ಬದುಕಿನಲ್ಲಿ; ಎರಡು: ಸಾರ್ವಜನಿಕ ಜೀವನದಲ್ಲಿ, ಸಾಮೂಹಿಕವಾಗಿ, ಸ್ವಇಚ್ಛೆಯಿಂದ ಪಡುವ ಯಾತನೆಗೆ ಮತ್ತೊಂದು ಹೆಸರೇ ಸತ್ಯಾಗ್ರಹ. ಸತ್ಯಾಗ್ರಹ ಪರಿಶುದ್ಧವಾದ ಸಂವಿಧಾನಾತ್ಮಕ ಪ್ರತಿಭಟನೆ. ನೇರ ಕಾರ್ಯಾಚರಣೆಗೆ- ‘ಡೈರೆಕ್ಟ್ ಆ್ಯಕ್ಷನ್’ಗೆ- ಸತ್ಯಾಗ್ರಹ ಅತ್ಯಂತ ಪರಿಣಾಮಕಾರಿ ಸಾಧನ. ಸತ್ಯಾಗ್ರಹ ಸಭ್ಯವಾದುದು; ಅದು ಯಾರಿಗೂ ಗಾಯವುಂಟುಮಾಡುವುದಿಲ್ಲ. ಹಿಂಸೆಯ ಮೂಲಕ ನಡೆಯುವ ‘ದುರಾಗ್ರಹ’ಕ್ಕೆ ಸತ್ಯಾಗ್ರಹ ವಿರುದ್ಧವಾದುದು. ಸತ್ಯಾಗ್ರಹವನ್ನು ಅನ್ಯಾಯದ ಆಡಳಿತಗಾರರ ವಿರುದ್ಧ ಬಳಸಬಹುದು ಹಾಗೂ ಬಳಸಲೇಬೇಕು.
…ಸತ್ಯಾಗ್ರಹಿ ಕೋಪಕ್ಕೆ ವಿದಾಯ ಹೇಳಿರುವವನು. ಆದ್ದರಿಂದ ಅವನು ಎದುರಾಳಿಯನ್ನು ನಂಬಲು ಹಿಂಜರಿಯುವುದಿಲ್ಲ. ಸತ್ಯಾಗ್ರಹಿಯ ಎದುರಾಳಿ ಇಪ್ಪತ್ತು ಸಲ ಅವನಿಗೆ ಮೋಸ ಮಾಡಿದರೂ ಇಪ್ಪತ್ತೊಂದನೆಯ ಸಲ ಕೂಡ ಸತ್ಯಾಗ್ರಹಿ ತನ್ನ ಎದುರಾಳಿಯನ್ನು ನಂಬಲು ಸಿದ್ಧನಿರುತ್ತಾನೆ. ಯಾಕೆಂದರೆ ಅವನು ನಂಬಿದ ತತ್ವದ ಮೂಲ ಸತ್ವವೇ ಮಾನವನ ಸ್ವಭಾವದಲ್ಲಿ ನಂಬಿಕೆಯಿಡುವಂತೆ ಅವನನ್ನು ಪ್ರೇರೇಪಿಸುತ್ತದೆ. ಹೋರಾಟದ ಎಲ್ಲ ಮಾರ್ಗಗಳೂ ಕೊನೆಗೊಂಡ ಮೇಲೆ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಬಹುದು…ಸತ್ಯಾಗ್ರಹಕ್ಕೆ ಸೋಲು ಎನ್ನುವುದೇ ಗೊತ್ತಿಲ್ಲ. ಪ್ರತಿ ಹೊಡೆತದಿಂದಲೂ ಅದು ಮರು ಹುಟ್ಟು ಪಡೆಯುತ್ತಿರುತ್ತದೆ.
ಸರ್ವೋದಯ
ಸರ್ವೋದಯ ಎಂದರೆ ಎಲ್ಲರ ಕಲ್ಯಾಣ. ಜಾನ್ ರಸ್ಕಿನ್ ಹೇಳಿದಂತೆ ನಮ್ಮ ಗುರಿ ‘ಎಲ್ಲರ ಪ್ರಗತಿ ಆಗಿರಬೇಕೇ ಹೊರತು, ಕೇವಲ ಅತಿ ಹೆಚ್ಚು ಜನರ ಪ್ರಗತಿಯಲ್ಲ’. ಸತ್ಯಾಗ್ರಹವಿಲ್ಲದೆ ಸರ್ವೋದಯವಿಲ್ಲ. ಎಲ್ಲಿ ಅಹಿಂಸೆಗೆ ಜಾಗವಿಲ್ಲವೋ ಅಲ್ಲಿ ಸತ್ಯಕ್ಕೆ ಸ್ಥಾನವಿಲ್ಲ. ಆದ್ದರಿಂದಲೇ ಸರ್ವೋದಯವನ್ನು ಸಾಧಿಸುವುದು ಅಹಿಂಸೆಯ ಮೇಲೆ ನಿಂತಿದೆ. ಜನ ಅಹಿಂಸೆಯ ಬಗ್ಗೆ ಮಾತಾಡುತ್ತಿದ್ದರೂ ಅವರು ಒಳಗೊಳಗೇ ಎಷ್ಟು ಸೋಮಾರಿಗಳಾಗಿದ್ದಾರೆಂದರೆ, ವಾಸ್ತವಾಂಶಗಳನ್ನು ಅರ್ಥ ಮಾಡಿಕೊಳ್ಳಲು ಹೋಗುವುದೇ ಇಲ್ಲ. ಒಂದು ಉದಾಹರಣೆ ನೋಡಿ: ಇಂಡಿಯಾ ಒಂದು ಬಡ ದೇಶ. ಆದರೆ ಈ ಬಡತನ ಹೇಗೆ ಬಂತು? ಅದರ ಪರಿಣಾಮಗಳೇನು? ಅದನ್ನು ಹೋಗಲಾಡಿಸುವುದು ಹೇಗೆ? ಈ ಬಗ್ಗೆ ಎಷ್ಟು ಜನ ಅಧ್ಯಯನ ಮಾಡಿದ್ದಾರೆ?
ಗಂಡು, ಹೆಣ್ಣುಗಳು ತಮ್ಮ ಸಂಪತ್ತು, ಸಾಮರ್ಥ್ಯಗಳನ್ನು ಎಲ್ಲರಿಗಾಗಿ ಆನಂದದಿಂದ ವಿನಿಯೋಗಿಸುತ್ತಾ ತಮ್ಮೊಳಗಿನ ಸುಪ್ತ ದೈವಿಕ ಗುಣವನ್ನು ಸಾಕಾರ ಮಾಡಿಕೊಳ್ಳಬಹುದು… ನಮ್ಮ ನಿಜವಾದ ಸಂತೋಷ ಮತ್ತು ಆರೋಗ್ಯ ನಮ್ಮ ಕೈ ಕಾಲುಗಳನ್ನು ಬಳಸಿ ಮಾಡುವ ಕೆಲಸದಿಂದ ಹುಟ್ಟುತ್ತದೆ ಎಂದು ನಮ್ಮ ಹಿರಿಯರು ನಂಬಿದ್ದರು… ಸಾಮಾನ್ಯ ಜನರು ಕೃಷಿಯನ್ನು ಅವಲಂಬಿಸಿದ್ದರು. ಅವರು ನಿಜವಾದ ಹೋಂ ರೂಲ್ (ಸ್ವಯಮಾಡಳಿತ) ಅನುಭವಿಸುತ್ತಿದ್ದರು.
‘ಅತಿ ಹೆಚ್ಚು ಜನರಿಗೆ ಅತಿ ಹೆಚ್ಚು ಒಳಿತು ಮಾಡಬಹುದು’ ಎಂಬ ಪ್ರಯೋಜನವಾದಿ ತತ್ವವನ್ನು ಅಹಿಂಸೆಯ ಪರಿಪಾಲಕ ಒಪ್ಪುವುದಿಲ್ಲ. ಅಹಿಂಸೆಯ ಪರಿಪಾಲಕ ಎಲ್ಲರ ಅತ್ಯುತ್ತಮ ಒಳಿತಿಗಾಗಿ (ಸರ್ವೋದಯಕ್ಕಾಗಿ) ಕೆಲಸ ಮಾಡುವನು. ಆ ಆದರ್ಶ ಸಾಧಿಸುವಲ್ಲಿ ಪ್ರಾಣವನ್ನೂ ಕೊಡುವನು. ಇತರರು ಬದುಕಲೆಂದು ತಾನು ಸಾಯಲು ಸಿದ್ಧನಿರುವನು… ನಮ್ಮ ಸೇವೆ ಪ್ರೀತಿ ಅಥವಾ ಅಹಿಂಸೆಯಲ್ಲಿ ಬೇರೂರದಿದ್ದರೆ ನಿಜವಾದ ಸೇವೆ ಸಾಧ್ಯವಿಲ್ಲ. ನಿಜವಾದ ಪ್ರೀತಿ ಎಲ್ಲೆಯಿಲ್ಲದ ಕಡಲಿನಂತೆ; ಅದು ತನ್ನೊಳಗೇ ಉಕ್ಕುತ್ತಾ, ಎಲ್ಲ ಎಲ್ಲೆಗಳನ್ನೂ ಮೀರುತ್ತಾ ಇಡೀ ಜಗತ್ತನ್ನೇ ತಬ್ಬಿಕೊಳ್ಳುತ್ತದೆ. ರೊಟ್ಟಿಗಾಗಿ ಮಾಡುವ ದುಡಿಮೆಯ ಬಲವಿಲ್ಲದೆ ಈ ಬಗೆಯ ಸೇವೆ ಅಸಾಧ್ಯ. ಗಂಡಾಗಲೀ, ಹೆಣ್ಣಾಗಲೀ ಸೇವೆಗಾಗಿ ದೈಹಿಕ ಶ್ರಮ ಮಾಡಿದಾಗ ಮಾತ್ರ ಅವರಿಗೆ ಬದುಕುವ ಹಕ್ಕಿರುತ್ತದೆ.
ಇದನ್ನು ಓದಿದ್ದೀರಾ?: ಶಾಲಾ ಮಕ್ಕಳಿಗೆ 6 ದಿನ ಮೊಟ್ಟೆ: ಹಣಕ್ಕಿಂತ ದಾನವೆ ಶ್ರೇಷ್ಠ ಎಂದ ಉದ್ಯಮಿ ಅಜೀಂ ಪ್ರೇಮ್‌ಜಿ
‘ಸರ್ವೋದಯ ರಾಜ್ಯ ಸ್ಥಾಪನೆಗೆ ಅಹಿಂಸಾ ಮಾರ್ಗ ಅತ್ಯಗತ್ಯ. ನೀವು ಜನ ಸಮುದಾಯಕ್ಕೆ ಅಹಿಂಸೆಯನ್ನು ಹೇಳಿಕೊಡುವುದು ಸಾಧ್ಯವಿಲ್ಲ. ಎಲ್ಲೋ ಅಪರೂಪಕ್ಕೆ ವ್ಯಕ್ತಿಗಳಿಗೆ ಮಾತ್ರ ಅಹಿಂಸೆಯನ್ನು ಹೇಳಿಕೊಡಬಹುದು’ ಎಂದು ಹೇಳುವವರಿದ್ದಾರೆ. ಆದರೆ ಹೀಗೆ ಹೇಳುವವರು ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಿರುತ್ತಾರೆ. ಮಾನವ ಕುಲ ಸಹಜವಾಗಿಯೇ ಅಹಿಂಸಾತ್ಮಕವಾಗಿರದಿದ್ದರೆ ಅದು ತನ್ನನ್ನು ತಾನೇ ಎಂದೋ ನಾಶ ಮಾಡಿಕೊಂಡಿರುತ್ತಿತ್ತು. ಹಿಂಸಾಶಕ್ತಿಗಳು ಹಾಗೂ ಅಹಿಂಸಾ ಶಕ್ತಿಗಳ ನಡುವಣ ಕಾಳಗದಲ್ಲಿ ಕೊನೆಗೆ ಅಹಿಂಸೆಯೇ ಗೆದ್ದಿದೆ. ನಿಜ ಸಂಗತಿಯೇನೆಂದರೆ, ಅಹಿಂಸೆಯನ್ನು ಜನಮಾನಸದಲ್ಲಿ ಹಬ್ಬಿಸಿ, ಅದು ರಾಜಕೀಯ ಗುರಿಯನ್ನು ಸಾಧಿಸಬಲ್ಲ ಸಾಧನ ಎಂದು ಜನರಿಗೆ ತೋರಿಸಿಕೊಡುವ ನಿಟ್ಟಿನಲ್ಲಿ ನಾವು ಮನಸ್ಸಿಟ್ಟು ತೊಡಗಿಸಿಕೊಂಡಿಲ್ಲ. ಹಾಗೆ ತೊಡಗಿಸಿಕೊಂಡು ತಾಳ್ಮೆಯಿಂದ ಕಾಯುವ ಮನಸ್ಥಿತಿಯೂ ನಮಗಿಲ್ಲ.
ಸತ್ಯ
ಸತ್ಯ, ಅಹಿಂಸೆ ಎರಡೂ ಬೆಟ್ಟ, ಗುಡ್ಡಗಳಷ್ಟು ಪ್ರಾಚೀನವಾದವು. ನನ್ನ ಕೈಲಾದಷ್ಟು ಅವುಗಳಲ್ಲಿ ಪ್ರಯೋಗ ಮಾಡಿರುವುದಷ್ಟೇ ನಾನು ಮಾಡಿರುವ ಕೆಲಸ. ನನ್ನ ದೃಷ್ಟಿಯಲ್ಲಿ ಸತ್ಯ, ಅಹಿಂಸೆಗಳ ನಡುವೆ ಸತ್ಯಕ್ಕೆ ಮೊದಲ ಸ್ಥಾನ. ಸತ್ಯದ ಹುಡುಕಾಟದಲ್ಲಿ ನಾನು ಅಹಿಂಸೆಯನ್ನು ಹುಡುಕಿಕೊಂಡೆ. ಸತ್ಯ, ಅಹಿಂಸೆಗಳು ಮಾನವ ಸ್ವಭಾವದಲ್ಲಿ ಸಹಜವಾಗಿ ಸೇರಿಕೊಂಡಿವೆ. ಇವೆರಡೂ ಇಲ್ಲದಿದ್ದರೆ ಮಾನವ ಸಮಾಜವೇ ಇರಲಾರದು.
ಎಲ್ಲಿ ಸತ್ಯವಿದೆಯೋ ಅಲ್ಲಿ ಜ್ಞಾನವಿದೆ. ಸತ್ಯ ಕುರಿತ ಬದ್ಧತೆಯೇ ಮಾನವನ ಅಸ್ತಿತ್ವಕ್ಕೆ ಇರುವ ಏಕ ಮಾತ್ರ ಸಕಾರಣ. ದೈಹಿಕವಾಗಿ ಕೂಡ ಸತ್ಯ ನನ್ನನ್ನು ಹೇಗೆ ಹಿಡಿದಿದೆಯೆಂದರೆ, ಅಸತ್ಯ ನುಡಿಯುವುದು ನನ್ನ ನಾಲಿಗೆಗೇ ಅಸಾಧ್ಯವಾಗಿದೆ.
ಸತ್ಯವನ್ನು ಪಾಲಿಸುವುದು ಎಂದರೆ, ಸತ್ಯ ನುಡಿಯುವುದಷ್ಟೇ ಅಲ್ಲ. ಸತ್ಯ ಎಂಬ ಶಬ್ದವನ್ನು ಇನ್ನಷ್ಟು ವಿಶಾಲವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಆಲೋಚನೆಯಲ್ಲಿ ಸತ್ಯ, ಮಾತಿನಲ್ಲಿ ಸತ್ಯ, ಕ್ರಿಯೆಯಲ್ಲಿ ಸತ್ಯ ಈ ಮೂರನ್ನೂ ಸತ್ಯದ ಪರಿಕಲ್ಪನೆ ಒಳಗೊಂಡಿರಬೇಕಾಗುತ್ತದೆ.
ಸತ್ಯವು ನಮ್ಮ ಬದುಕು ಮತ್ತು ನಡವಳಿಕೆಗಳ ಸಾರ್ವಭೌಮ ನೀತಿತತ್ವ, ಈ ತತ್ವದಲ್ಲಿ ಇನ್ನಿತರ ಅಸಂಖ್ಯಾತ ತತ್ವಗಳು ಅಡಗಿವೆ.
ದೈವವೇ ಸತ್ಯ ಎಂದು ನಾನು ಹಿಂದೊಮ್ಮೆ ಹೇಳುತ್ತಿದ್ದೆ: ಎರಡು ವರ್ಷಗಳ ಕೆಳಗೆ ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಿದೆ: ‘ಸತ್ಯವೇ ದೇವರು.’
ಎಂದೂ ಹುಸಿಹೋಗದ ಸತ್ಯದ ಪರೀಕ್ಷೆಯನ್ನು ಅರ್ಥ ಮಾಡಿಕೊಂಡರೆ ನಾವು ಅರ್ಥಪೂರ್ಣವಾದ ಏನನ್ನು ನೋಡಬೇಕು, ಏನನ್ನು ಮಾಡಬೇಕು, ಏನನ್ನು ಓದಬೇಕು ಎಲ್ಲವೂ ನಮಗೆ ಅರಿವಾಗುತ್ತದೆ.
ಸತ್ಯ ಮಾನವನ ಪ್ರಾಥಮಿಕ ತತ್ವ.
ಸತ್ಯಶೋಧನೆ ತಪಸ್ಸು ಅಥವಾ ನಮ್ಮ ಒಳಯಾತನೆಯನ್ನು ಒಳಗೊಂಡಿದೆ.
ಸತ್ಯಶೋಧನೆಯಲ್ಲಿ ಸ್ವಹಿತಾಸಕ್ತಿಯ ಲವಲೇಶವೂ ಇಲ್ಲ.
ನಾನೊಬ್ಬ ಸತ್ಯಶೋಧಕ. ಸತ್ಯ ಹುಡುಕಲು ನಾನು ದಣಿವರಿಯದೆ ಪ್ರಯತ್ನ ಮಾಡುತ್ತಲೇ ಇದ್ದೇನೆ. ಆದರೆ ಅದು ಇನ್ನೂ ನನಗೆ ಸಿಕ್ಕಿಲ್ಲ ಎಂಬುದನ್ನೂ ಒಪ್ಪಿಕೊಳ್ಳುತ್ತೇನೆ. ಸತ್ಯವನ್ನು ಪೂರ್ಣವಾಗಿ ಹುಡುಕುವುದೆಂದರೆ ತನ್ನನ್ನು, ತನ್ನ ಬಾಳಿನ ದಿಕ್ಕನ್ನು ಅರಿಯುವುದು. ಅಂದರೆ, ಪರಿಪೂರ್ಣನಾಗುವುದು. ನನ್ನ ಅಪರಿಪೂರ್ಣತೆಗಳನ್ನು ನಾನು ನೋವಿನಿಂದಲೇ ಒಪ್ಪಿಕೊಳ್ಳುತ್ತೇನೆ. ಮನುಷ್ಯನ ಶಕ್ತಿಯಿರುವುದು ತನ್ನ ಮಿತಿಗಳನ್ನು ಅರಿಯುವುದರಲ್ಲೇ ಎಂದು ನನ್ನ ನಂಬಿಕೆ.
ಮನುಷ್ಯರನ್ನು ಬೆಸೆಯುವ ತತ್ವಗಳನ್ನೇ ನಾನು ಸತ್ಯ ಎನ್ನುತ್ತೇನೆ.

ಸತ್ಯದ ಹುಡುಕಾಟದಲ್ಲಿ ಮುಂದುವರಿದಂತೆಲ್ಲಾ ಸತ್ಯ ಎಲ್ಲವನ್ನೂ ಗ್ರಹಿಸಬಲ್ಲದು ಎಂಬುದು ನನಗೆ ಅರಿವಾಗತೊಡಗುತ್ತದೆ. ಪರಿಶುದ್ಧ ಹೃದಯ ಹಾಗೂ ಪರಿಶುದ್ಧ ಬುದ್ಧಿಶಕ್ತಿಗೆ ಕಂಡಿದ್ದು ಆ ಕ್ಷಣದ ಸತ್ಯ. ನಾನು ಆ ಸತ್ಯಕ್ಕೆ ಆತುಕೊಳ್ಳುತ್ತೇನೆ. ಅದು ನನ್ನನ್ನು ಪರಿಶುದ್ಧ ಸತ್ಯದೆಡೆಗೆ ಕರೆದೊಯ್ಯುತ್ತದೆ. ಸತ್ಯದ ಪರಿಪಾಲಕ ಧೂಳಿನಂತೆ ವಿನಮ್ರನಾಗಿರಬೇಕಾಗುತ್ತದೆ. ಅವನ ನಮ್ರತೆ ಸತ್ಯದ ಒಡನಾಟದೊಂದಿಗೆ ಇನ್ನಷ್ಟು ಹೆಚ್ಚುತ್ತದೆ.
ಕೃಪೆ: ಎಲ್ಲರ ಗಾಂಧೀಜಿ, ಸಂ: ನಟರಾಜ್ ಹುಳಿಯಾರ್, ಪಲ್ಲವ ಪ್ರಕಾಶನ, ಸಂಪರ್ಕ: 94803 53507