ಮಹಾರಾಷ್ಟ್ರ| ಶರದ್ ಪವಾರ್ ಮತ್ತೆ ಎನ್‌ಸಿಪಿ ಬಾಸ್, ರಾಜೀನಾಮೆ ಪ್ರಹಸನದ ಹಿಂದಿನ ಮರ್ಮವೇನು?

Date:

Advertisements
ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಬಹಳ ನಾಜೂಕಾಗಿ, ರಾಜಕೀಯ ತಂತ್ರಗಾರಿಕೆಯಿಂದ ಈ ‘ರಾಜೀನಾಮೆ’ ಪ್ರಹಸನ ಹೆಣೆದು ತಮ್ಮ ಇಷ್ಟಾರ್ಥ ಸಿದ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕುಟುಂಬ ಮತ್ತು ಪಕ್ಷದ ನಡುವಿನ ಭಿನ್ನಾಭಿಪ್ರಾಯ ಶಮನಕ್ಕಾಗಿ ಹಿರಿಯ ಮುತ್ಸದ್ದಿ ಶರದ್ ಪವಾರ್ ಎನ್‌ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂತಿಮವಾಗಿ ಇದೀಗ ಅಜಿತ್ ಪವಾರ್ ಅಧಿಕಾರ ಕಡಿತಗೊಂಡಿದೆ, ಸುಪ್ರಿಯಾ ಸುಲೆ ಪ್ರಭಾವ ಹೆಚ್ಚಾಗಿದೆ. ಶರದ್ ಪವಾರ್ ಮತ್ತೆ ಎನ್‌ಸಿಪಿ ಬಾಸ್ ಆಗಿದ್ದಾರೆ!

ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮನ್ನು ಟೀಕಿಸಿರುವ ಬಗ್ಗೆ ಅಜಿತ್ ಪವಾರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ಬಂಡಾಯಗಳನ್ನು ಶಮನಗೊಳಿಸಲು ಭಾರತದಲ್ಲಿ ಸಾಮಾನ್ಯವಾಗಿ ರಾಜೀನಾಮೆಗಳು ಕೆಲಸ ಮಾಡುತ್ತವೆ. ಆದರೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಬಹಳ ನಾಜೂಕಾಗಿ, ರಾಜಕೀಯ ತಂತ್ರಗಾರಿಕೆಯಿಂದ ಈ ‘ರಾಜೀನಾಮೆ’ ಪ್ರಹಸನ ಹೆಣೆದು ಯಶಸ್ವಿಯಾಗಿದ್ದಾರೆ.

ಕಳೆದ ಮಂಗಳವಾರ ಪವಾರ್ ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿರುವುದು ಪಕ್ಷದೊಳಗಿನ ಅವರ ಶತ್ರುಗಳಿಗೆ ಆಘಾತ ತಂದಿತ್ತು. ಬುಧವಾರ ಮತ್ತು ಗುರುವಾರ ಎನ್‌ಸಿಪಿ ಒಳಗೆ ರಾಜೀನಾಮೆಯನ್ನು ಅರ್ಥೈಸಿಕೊಳ್ಳುವುದು, ಬೇಗುದಿ ಶಮನ ಯತ್ನ, ಹಿಂಪಡೆಯುವಂತೆ ಒತ್ತಾಯ, ಅಳು ಮೊದಲಾದವು ನಡೆದಿದ್ದವು. ಅಂತಿಮವಾಗಿ ಶುಕ್ರವಾರ ಪಕ್ಷದ ಸಮಿತಿ ಸಭೆ ಸೇರಿ ಶರದ್ ಪವಾರ್ ಅವರೇ ತಮ್ಮ ಅಧ್ಯಕ್ಷರು ಎಂದು ತೀರ್ಮಾನಿಸಿ ಅವರ ರಾಜೀನಾಮೆಯನ್ನು ತಿರಸ್ಕರಿಸಿತು. ನಿಮಿಷಗಳ ನಂತರ ನೀರಸ ಭಾವ ಪ್ರದರ್ಶಿಸಿದ ಪವಾರ್, ಪರಿಸ್ಥಿತಿಯನ್ನು ಗಮನಿಸಿ ತಾವು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವುದಾಗಿ ಹೇಳಿದರು.

Advertisements

82 ವರ್ಷದ ಪವಾರ್ ತಾವು 50 ವರ್ಷಗಳಿಂದ ರಾಜಕೀಯದಲ್ಲಿ ಪಳಗಿದ ಮುತ್ಸದ್ದಿ ಎನ್ನುವುದನ್ನು ಮೂರೇ ದಿನಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಅಜಿತ್ ಪವಾರ್‌ರ ರಾಜಕೀಯ ಬಂಡಾಯವನ್ನೇ ಬಳಸಿಕೊಂಡು ಶರದ್ ಪವಾರ್ ಈಗ ಇನ್ನಷ್ಟು ಎತ್ತರಕ್ಕೆ ಏರಬಹುದು. ಪವಾರ್‌ ಅವರ ಮಗಳು ಸುಪ್ರಿಯಾ ಸುಲೆಗೆ ಅಧಿಕಾರ ನೀಡುವ ದಾರಿ ಸ್ಪಷ್ಟವಾಗಿದೆ. ಎನ್‌ಸಿಪಿಯಲ್ಲಿ ಯಾರು ಬಾಸ್ ಎನ್ನುವುದನ್ನು ಟೀಕಾಕಾರರಿಗೆ ಮತ್ತೊಮ್ಮೆ ತೋರಿಸಿಕೊಡಲಾಗಿದೆ.

ತಮ್ಮ ಅಂಕಲ್ ಮತ್ತು ಗುರುವಾಗಿರುವ ಶರದ್ ಪವಾರ್ ಅವರಿಂದ ಅಜಿತ್ ಪವಾರ್ ಬಹಳಷ್ಟು ಬಾರಿ ಇಂತಹ ತಿರುಗೇಟು ತಿಂದಿದ್ದಾರೆ. ಭವಿಷ್ಯದಲ್ಲಿ ಅಜಿತ್ ಜೊತೆಗೆ ಸಾಗಲು ಬಯಸುವ ಶಾಸಕರ ಸಂಖ್ಯೆ ಇನ್ನಷ್ಟು ಕುಸಿಯಲಿದೆ. ಪಕ್ಷದ ಹಿರಿಯರು ಮತ್ತು ಶರದ್ ಪವಾರ್‌ ಅವರ ನಿಷ್ಠಾವಂತರು ಸುಪ್ರಿಯಾ ಜೊತೆಗೆ ಹೆಚ್ಚು ಉತ್ತಮ ಸಂಬಂಧ ಹೊಂದಿದ್ದಾರೆ.

ಪವಾರ್ ಎಂದಿಗೂ ಭಾವನೆಗಳಿಗೆ ಪ್ರತಿಕ್ರಿಯಿಸಿ ಕೆಲಸ ಮಾಡುವವರಲ್ಲ. ಬದಲಾಗಿ ಅದಕ್ಕೆ ವಿರುದ್ಧವಾಗಿ ನಿಲ್ಲುವವರು. ಹೀಗಾಗಿ ತಮ್ಮ ಅಚ್ಚರಿಯ ರಾಜೀನಾಮೆ ಘೋಷಿಸಿದಾಗ ಅವರು ಹೇಗೆ ಅದನ್ನು ತಿರುಗಿಸಿ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು ಎನ್ನುವುದನ್ನೂ ಯೋಜಿಸಿದ್ದರು. “ಅಜಿತ್ ಪವಾರ್ ಸಾರ್ವಜನಿಕ ವೇದಿಕೆಯಲ್ಲಿ ಎನ್‌ಸಿಪಿಯೊಳಗಿನ ಅಶಾಂತಿ ಹೊರಚೆಲ್ಲುವ ಪ್ರಯತ್ನದಲ್ಲಿದ್ದರು. ಪಕ್ಷ ಮತ್ತು ಪರಿವಾರದ ನಡುವಿನ ಈ ಭಿನ್ನಾಭಿಪ್ರಾಯ ಬಂಡಾಯವಾಗದಂತೆ ತಡೆಯಲಾಗಿದೆ. ಅಜಿತ್ ಪವಾರ್ ವರ್ಸಸ್ ಜಯಂತ್ ಪಾಟೀಲ್ ಸಮಯ ಎಲ್ಲರಿಗೂ ತಿಳಿದಿರುವುದೇ. ಆದರೆ ಎನ್‌ಸಿಪಿ ನಿಯಂತ್ರಿಸುವ ಅಜಿತ್ ಅವರ ಮಹಾತ್ವಾಕಾಂಕ್ಷೆಯೇ ದೊಡ್ಡ ಕಳವಳವಾಗಿತ್ತು” ಎಂದು ಎನ್‌ಸಿಪಿ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ಶುಕ್ರವಾರದ ಪತ್ರಿಕಾಗೋಷ್ಠಿಯಲ್ಲಿ ಶರದ್ ಪವಾರ್, “ಎನ್‌ಸಿಪಿ ನಾಯಕರು ತಮ್ಮನ್ನು ಹೊರ ಹೋಗಲು ಬಿಡುತ್ತಿಲ್ಲ ಎನ್ನುವುದನ್ನು ಒತ್ತಿ ಹೇಳಿದರು. ರಾಹುಲ್ ಗಾಂಧಿ ಮತ್ತು ಸೀತಾರಾಂ ಯಚೂರಿ ಅವರಂತಹ ಇತರ ಪಕ್ಷಗಳ ನಾಯಕರೂ ಅಧ್ಯಕ್ಷರಾಗಿ ಮುಂದುವರಿಯುವಂತೆ ಒತ್ತಾಯಿಸಿದ್ದಾರೆ” ಎಂದು ತಿಳಿಸಿದ್ದರು.

ಪವಾರ್‌ ಅವರಿಗೆ ಎನ್‌ಸಿಪಿಯಲ್ಲಿ ಪರ್ಯಾಯವಿಲ್ಲ ಎನ್ನುವುದು ಸ್ಪಷ್ಟ. ಹಾಗಿದ್ದರೆ, ಪತ್ರಿಕಾ ಗೋಷ್ಠಿಯಲ್ಲಿ ಗೈರಾಗಿದ್ದ ಅಜಿತ್ ಪವಾರ್ ರಾಜಕೀಯ ಬದುಕಿನ ಭವಿಷ್ಯವೇನು? ಅಜಿತ್ ಅವರು ತಮ್ಮ ಅಂಕಲ್ ರಾಜೀನಾಮೆ ಹಿಂಪಡೆದಿರುವುದನ್ನು ಸ್ವಾಗತಿಸಿ ನಂತರ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ಎನ್‌ಸಿಪಿ ಒಗ್ಗಟ್ಟಿನಲ್ಲಿದೆ” ಎಂದು ಅವರು ಘೋಷಿಸಿದ್ದಾರೆ.

ಹಿನ್ನೆಲೆಯಲ್ಲಿದ್ದುಕೊಂಡೇ ಬಳಲಿರುವ ಅಜಿತ್ ಪವಾರ್ ಕೇಂದ್ರ ಭಾಗಕ್ಕೆ ಬರಲು ಅನೇಕ ತಂತ್ರಗಳನ್ನು ಹೂಡುತ್ತಲೇ ಬಂದಿದ್ದಾರೆ. 2019ರ ವಿಧಾನಸಭಾ ಚುನಾವಣೆ ಅವರಿಗೆ ಬೆಳಕಿನ ಕಿಂಡಿ ತೋರಿಸಿತ್ತು. ಆದರೆ ಅವರ ಕ್ಯಾಂಪ್‌ನಲ್ಲಿ ಬೆಂಬಲಕ್ಕೆ ಸಾಕಷ್ಟು ಶಾಸಕರಿರಲಿಲ್ಲ. “ಪವಾರ್ ಪಕ್ಷವನ್ನು ಒಗ್ಗಟ್ಟಿನಲ್ಲಿರಿಸಲು ಬಯಸಿದ್ದಾರೆ. ಹೀಗಾಗಿ ಅವರೆಂದಿಗೂ ಅಜಿತ್‌ ಅವರಿಗೆ ಅಧಿಕಾರ ಕೊಡುವುದಿಲ್ಲ. ಅಜಿತ್‌ ಕೈಗೆ ಅಧಿಕಾರ ಹೋದಲ್ಲಿ ಹಿರಿಯ ನಾಯಕರ ಅಸಮಾಧಾನ ಬಹಿರಂಗವಾಗಬಹುದು” ಎಂದು ಎನ್‌ಸಿಪಿ ನಾಯಕರು ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ.

ಈ ಸುದ್ದಿ ಓದಿದ್ದೀರಾ?: ಶರದ್ ಪವಾರ್ ರಾಜೀನಾಮೆ ತಿರಸ್ಕರಿಸಿದ ಎನ್‌ಸಿಪಿ ಸಮಿತಿ

ಮಾಜಿ ಸಚಿವೆಯಾಗಿ ಸುಪ್ರಿಯಾ ಸುಲೆ ಪಕ್ಷದ ಅಧ್ಯಕ್ಷರಾಗುವ ಮತ್ತು ಎನ್‌ಸಿಪಿ ಉತ್ತಮ ಸಂಖ್ಯೆಗಳನ್ನು ಗಳಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೇರುವ ಅವಕಾಶವನ್ನೂ ಹೊಂದಿದ್ದಾರೆ. ಎನ್‌ಸಿಪಿಯ ಅಘಾಡಿ ಮೈತ್ರಿಕೂಟದ ಸದಸ್ಯರಾದ ಕಾಂಗ್ರೆಸ್ ಮತ್ತು ಶಿವಸೇನೆಗೆ ಸುಪ್ರಿಯಾ ಹೆಚ್ಚು ಆಪ್ತರೆನಿಸಬಹುದು. 2019ರ ಚುನಾವಣೆಯ ನಂತರ ಅಜಿತ್ ಪವಾರ್ ಬಿಜೆಪಿಗೆ ಹತ್ತಿರವಾಗಿರುವುದು ಅವರ ವಿರುದ್ಧ ಕೆಲಸ ಮಾಡಬಹುದು. ಆರಂಭದ, ಸುಪ್ರಿಯಾ ದೆಹಲಿ ಅಥವಾ ರಾಷ್ಟ್ರೀಯ ಮುಖ ಮತ್ತು ರಾಜ್ಯದಲ್ಲಿ ಅಜಿತ್ ಪವಾರ್ ಅವರಿಗೇ ಮಣೆ ಎನ್ನುವ ಸ್ಥಿತಿ ಈಗ ಬದಲಾಗಿದೆ.

ಅಜಿತ್ ಪವಾರ್ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸ್ನೇಹ ಇತ್ತೀಚೆಗಿನ ದಿನಗಳ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಮತ್ತು ಹೊಸ ಸರ್ಕಾರಗಳ ರಚನೆಯಲ್ಲಿ ಸುಸ್ಪಷ್ಟ. ಆದರೆ ಶರದ್ ಪವಾರ್ ರಾಜೀನಾಮೆ ಸಂದರ್ಭ ಫಡ್ನವಿಸ್, “ಇದು ಎನ್‌ಸಿಪಿ ಆಂತರಿಕ ವಿಚಾರ, ನಾವು ಅಂತಿಮ ನಿಲುವಿಗೆ ಕಾಯುತ್ತಿದ್ದೇವೆ” ಎಂದು ಹೇಳಿಕೆ ನೀಡಿ ಸುಮ್ಮನಾಗಿದ್ದರು. 2019ರಲ್ಲಿ ಅಜಿತ್ ಪವಾರ್ ಬಿಜೆಪಿ ಕಡೆ ತಿರುಗಿ ಮರಳಿ ಎನ್‌ಸಿಪಿ ಸೇರಿರುವುದೇ ಅವರ ಮೇಲೆ ಪಕ್ಷದೊಳಗೆ ವಿಶ್ವಾಸ ಹೊರಟು ಹೋಗಲು ಮುಖ್ಯ ಕಾರಣ. ಅಜಿತ್ ಪವಾರ್ ಪಕ್ಷವನ್ನು ಮುರಿದು ಬಿಜೆಪಿಗೆ ಸರ್ಕಾರ ರಚಿಸಲು ನೆರವಾಗಬಹುದು ಎನ್ನುವ ಆತಂಕ ಈಗಲೂ ಕಾಡುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X