ಹರಿಯಾಣವನ್ನು ಕಾಂಗ್ರೆಸ್ ದೊಡ್ಡ ಅಂತರದಿಂದ ಗೆದ್ದರೆ, ಅದು ರಾಹುಲ್ ಅವರ ಜಾತ್ಯತೀತ ರಾಜಕಾರಣ ಮತ್ತು ಸಾಮಾಜಿಕ ನ್ಯಾಯದ ಪ್ರಯೋಗಕ್ಕೆ ದೊಡ್ಡ ಅನುಮೋದನೆಯ ಮುದ್ರೆ ದೊರೆತಂತಾಗಲಿದೆ. ಒಂದು ವೇಳೆ, ಸೋತುಹೋದರೆ ಕಾಂಗ್ರೆಸ್ ವಲಯದಲ್ಲಿ ಗೊಂದಲ ಮೂಡಿಸಲಿದೆ. ಮಾತ್ರವಲ್ಲ, ಲೋಕಸಭಾ ಚುನಾವಣೆಯ ನಂತರ ರಾಹುಲ್ ಮತ್ತು ಕಾಂಗ್ರೆಸ್ ಸಾಧಿಸಿದ ವೇಗ ಮುರಿದು ಬೀಳಲಿದೆ.
ಹರಿಯಾಣದಲ್ಲಿ ಚುನಾವಣೆ ಕುತೂಹಲಕಾರಿ ಘಟ್ಟ ತಲುಪುತ್ತಿದೆ. ಒಂದೆಡೆ, ಪ್ರಧಾನಿ ಮೋದಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಕೇಂದ್ರ ಮತ್ತು ರಾಜ್ಯದಲ್ಲಿ 10 ವರ್ಷಗಳ ಆಡಳಿತ ನಡೆಸಿರುವ ಬಿಜೆಪಿಯ ಧೋರಣೆ, ನೀತಿಗಳ ವಿರುದ್ಧ ಕಾಂಗ್ರೆಸ್ ಪ್ರಚಾರ ನಡೆಸುತ್ತಿದೆ. ರಾಜ್ಯದ ಬದಲಾವಣೆಗೆ ಸರ್ಕಾರದ ಬದಲಾವಣೆ ಅಗತ್ಯವಿದೆ ಎಂದು ಹೇಳುತ್ತಿದೆ. ಜೊತೆಗೆ, ಆಂತರಿಕ ಬಂಡಾಯವನ್ನು ಶಮನಗೊಳಿಸುವ ಪ್ರಯತ್ನದಲ್ಲಿದೆ. ಕುಮಾರಿ ಸೆಲ್ಜಾ ಮತ್ತು ಭೂಪಿಂದರ್ ಸಿಂಗ್ ಹೂಡಾ ನಡುವಿನ ಆಂತರಿಕ ಕದನಕ್ಕೆ ರಾಹುಲ್ ಗಾಂಧಿ ವಿರಾಮ ಘೋಷಿಸಿದ್ದಾರೆ.
ಚುನಾವಣೆಯಲ್ಲಿ ಪಕ್ಷದ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನದಲ್ಲಿರುವ ರಾಹುಲ್ ಗಾಂಧಿಗೆ ಹಲವು ಸವಾಲುಗಳು, ಜೊತೆಗೆ ಅವಕಾಶಗಳೂ ಇವೆ. ಈಗಾಗಲೇ, ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದೆ. ಹರಿಯಾಣವನ್ನು ತನ್ನ ಭದ್ರಕೋಟೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಬಿಜೆಪಿಗೆ ಒಳಪೆಟ್ಟು ಕೊಟ್ಟಿದೆ. ಇದರಲ್ಲಿ, ರಾಹುಲ್ ಅವರ ಪಾತ್ರ ಪ್ರಧಾನವಾದದ್ದು. ಸದ್ಯ, ರಾಜಕೀಯದಲ್ಲಿ ಹೊಸ ಮಾಸ್ ಲೀಡರ್ ಆಗಿ ಮೇಲೇರುತ್ತಿರುವ ರಾಹುಲ್ಗೆ ಹರಿಯಾಣ ಮತ್ತಷ್ಟು ವೇದಿಕೆ ಒದಗಿಸುತ್ತಿದೆ.
ರಾಹುಲ್ ಗಾಂಧಿ ಅವರಿಗೆ ಜಮ್ಮು-ಕಾಶ್ಮೀರಕ್ಕಿಂತ ಹರಿಯಾಣವು ಆದ್ಯತೆಯ ರಾಜ್ಯವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿ, ಅಲ್ಲಿನ ಜನರ ದನಿಯನ್ನು ಹತ್ತಿಕ್ಕಿದ್ದ ಬಿಜೆಪಿ ಈಗ ಅಲ್ಲಿ ಪ್ರಮುಖ ಆಟಗಾರ ಅಥವಾ ಸ್ಪರ್ಧಿಯಾಗಿ ಉಳಿದಿಲ್ಲ. ಕಾಶ್ಮೀರದ ಜನರು ಬಿಜೆಪಿ ವಿರುದ್ಧ ಗಟ್ಟಿಯಾಗಿ ನಿಂತಿದ್ದಾರೆಂದು ಕಾಂಗ್ರೆಸ್ ಭಾವಿಸಿದೆ. ಕಣಿವೆ ರಾಜ್ಯದಲ್ಲಿ ಬಿಜೆಪಿಯನ್ನು ಕಡೆಗಣಿಸಿರುವ ಕಾಂಗ್ರೆಸ್, ಬಿಜೆಪಿಯ ಜನವಿರೋಧಿ, ರೈತ ವಿರೋಧಿ ಆಡಳಿತಕ್ಕೆ ಸಿಲುಕ್ಕಿದ್ದ ಹರಿಯಾಣವನ್ನು ತನ್ನ ಹೋರಾಟದ ಪ್ರಧಾನ ಮೈದಾನ ಮಾಡಿಕೊಂಡಿದೆ.
10 ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯದಲ್ಲಿ (ಹರಿಯಾಣ) ಆಡಳಿತ ನಡೆಸಿರುವ ಬಿಜೆಪಿಯ ಸಾಧನೆ ನೀರಸವಾಗಿದೆ. ರೈತ ವಿರೋಧಿ ನೀತಿಗಳು, ಪ್ರತಿಭಟನಾನಿರತ ರೈತರೊಂದಿಗೆ ಬಿಜೆಪಿ ಸರ್ಕಾರಗಳು ವರ್ತಿಸಿದ ರೀತಿ – ಧೋರಣೆ, ಹರಿಯಾಣದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಬಡತನ, ಕೋಮು ಗಲಭೆಗಳು ಬಿಜೆಪಿ ವಿರುದ್ಧ ಹರಿಯಾಣ ಯುವಜನರ ಆಕ್ರೋಶಕ್ಕೆ ಕಾರಣವಾಗಿವೆ.
ಹರಿಯಾಣದಲ್ಲಿ ಬಿಜೆಪಿ ನಾನಾ ತಪ್ಪುಗಳ ಕಾರಣಕ್ಕಾಗಿ ಸುದ್ದಿಯಾಗಿತ್ತು. ರೈತ ಹೋರಾಟದ ಸಮಯದಲ್ಲಿ ಹರಿಯಾಣವು ಯುದ್ಧಭೂಮಿಯಾಗಿ ಮಾರ್ಪಟ್ಟಿತ್ತು. ರೈತರ ಮೇಲೆ ಲಾಠಿಚಾರ್ಜ್, ಜಲಪಿರಂಗಿ, ಅಶ್ರುವಾಯುಗಳನ್ನು ಪ್ರಯೋಗಿಸಿ ರೈತರನ್ನು ದಮನಿಸಲು ಯತ್ನಿಸಿತ್ತು. ರೈತರನ್ನು ‘ಖಲಿಸ್ತಾನಿ’ಗಳು, ನಕಲಿ ರೈತರೆಂದು ಬಿಂಬಿಸಲು ಮೋದಿ ಸರ್ಕಾರ ಮತ್ತು ಗೋದಿ ಮೀಡಿಯಾಗಳು ಯತ್ನಿಸಿದವು. ಬಿಜೆಪಿ ಸರ್ಕಾರದ ದಮನಕ್ಕೆ ಬಗ್ಗದ ರೈತರು ದೆಹಲಿ ಗಡಿ ತಲುಪಿ, ಒಂದು ವರ್ಷ ನಿರಂತರ ಹೋರಾಟ ನಡೆಸಿದರು. ಮೋದಿ ಅವರ ಅಹಂಅನ್ನು ಮಣಿಸಿದರು. ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿದರು.
ಬಿಜೆಪಿ ತನ್ನ ಧೋರಣೆಯ ಕಾರಣಕ್ಕಾಗಿಯೇ, ಲೋಕಸಭಾ ಚುನಾವಣೆಯಲ್ಲಿ ಕೇವಲ 5 ಸ್ಥಾನಗಳನ್ನು ಮಾತ್ರವೇ ಗೆದ್ದಿದೆ. ಬಿಜೆಪಿ ವಿರೋಧಿ ಅಲೆ ಕಾಂಗ್ರೆಸ್ಗೆ ವರದಾನವೂ ಆಗಲಿದೆ. ಮೋದಿ ಸರ್ಕಾರದ ದುರ್ವತನೆಯನ್ನು ರಾಹುಲ್ ನಿರಂತರವಾಗಿ ದೂಷಿಸುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದರೆ, ರೈತರ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಎಂಎಸ್ಪಿಗೆ ಕಾನೂನು ಖಾತರಿ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಮಂಗಳಾರತಿ ಎತ್ತಬೇಕಾದ್ದು ಕಾವೇರಿಗಲ್ಲ, ಕಾಂಗ್ರೆಸ್ಸಿಗರಿಗೆ
ರೈತರ ವಿಚಾರ ಮಾತ್ರವಲ್ಲದೆ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರ ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟಿಸಿದ ಮಹಿಳಾ ಕುಸ್ತಿಪಟುಗಳನ್ನು ಬಿಜೆಪಿ ಸರ್ಕಾರ ನಡೆಸಿಕೊಂಡ ರೀತಿಯಿಂದಲೂ ಹರಿಯಾಣದ ಜನರು ಅಸಮಾಧಾನಗೊಂಡಿದ್ದಾರೆ. ಈಗಲೂ ಆರೋಪಿ ಬ್ರಿಜ್ ಭೂಷಣ್ ಸಿಂಗ್ನನ್ನು ಬಂಧಿಸಲಾಗಿಲ್ಲ. ಯಾವುದೇ ಕ್ರಮ ಜರುಗಿಸಲಾಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಬದಲಿಗೆ ಆತನ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದು, ಹರಿಯಾಣ ಜನರ ಅಸಹನೆಗೆ ಕಾರಣವಾಗಿದೆ. ಇದೇ ಹೊತ್ತಿನಲ್ಲಿ, ಕುಸ್ತಿಪಟು ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕಾಂಗ್ರೆಸ್ ಸೇರಿದ್ದಾರೆ. ಫೋಗಟ್ ಅವರು ಹರಿಯಾಣದ ಪ್ರಬಲ ಜಾತಿಗಳಲ್ಲಿ ಒಂದಾದ ಜಾಟ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧೆಯನ್ನೂ ಮಾಡಿದ್ದಾರೆ.
ಜೊತೆಗೆ, 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಜಾಟ್ ಸಮುದಾಯದ ವಿರುದ್ಧ ಇತರ ಜಾತಿಗಳನ್ನು ಧ್ರುವೀಕರಿಸುವ ತಂತ್ರವನ್ನೇ ಹೆಣೆದಿದೆ. 2014ರಲ್ಲಿ ಜಾಟ್ ಸಮುದಾಯದ ಬೇಡಿಕೆಗಳನ್ನು ಕಡೆಗಣಿಸಿ, ಪಂಜಾಬಿ ಸಮುದಾಯದ ಮನೋಹರ್ ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿತ್ತು. ಅಲ್ಲದೆ, 10 ವರ್ಷಗಳ ಬಿಜೆಪಿ ಆಡಳಿತವೂ ಜಾಟ್ ಸಮುದಾಯಕ್ಕೆ ತೃಪ್ತಿ ನೀಡಿಲ್ಲ. ಸಮುದಾಯಕ್ಕಾಗಿ ಯಾವುದೇ ವಿಶೇಷ ಕೊಡುಗೆ ನೀಡಿಲ್ಲ. ಇದೆಲ್ಲವೂ, ಆ ಸಮುದಾಯ ಕಾಂಗ್ರೆಸ್ನತ್ತ ವಾಲುವಂತೆ ಮಾಡಿದೆ.
ಇದೇ ಸಮುದಾಯದಲ್ಲಿ, ರಾಹುಲ್ ಗಾಂಧಿ ಮೊದಲಿನಿಂದಲೂ ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಜಾಟ್ ಸಮುದಾಯದಲ್ಲಿ ರಾಹುಲ್ ಸ್ಥಾನಮಾನ ಹಿಗ್ಗಿದೆ. ಒಂದು ವೇಳೆ, ಹರಿಯಾಣದಲ್ಲಿ ಕಾಂಗ್ರೆಸ್ ಗೆದ್ದರೆ, ಜಾಟ್ ಸಮುದಾಯದ ಅಭಿವೃದ್ಧಿಗೆ ಅನುವಾಗುತ್ತದೆ ಎಂಬ ಭಾವನೆಯೂ ಆ ಸಮುದಾಯದಲ್ಲಿದೆ.
ಎರಡು ‘ಜೋಡೋ ಯಾತ್ರೆ’ ನಡೆಸಿದ ರಾಹುಲ್ ಗಾಂಧಿ ಮೋದಿಯವರ ರಾಜಕೀಯಕ್ಕೆ ಪ್ರಬಲ ಸವಾಲಾಗಿ ಹೊರಹೊಮ್ಮಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಜಾತಿ ಗಣತಿ ವಿಷಯವನ್ನು ಬಲವಾಗಿ ಮುನ್ನೆಲೆಗೆ ತಂದಿದ್ದಾರೆ. ಬಿಜೆಪಿ-ಆರ್ಎಸ್ಎಸ್ನ ಹಿಂದುತ್ವ ಮತ್ತು ರಾಷ್ಟ್ರೀಯತೆ ಸಿದ್ದಾಂತ-ತಂತ್ರಕ್ಕೆ ಪ್ರತಿಯಾಗಿ ಸಮಾನತೆಯ ನಿರೂಪಣೆ ರೂಪಿಸಿದ್ದಾರೆ. ಹರಿಯಾಣದಲ್ಲಿ ಮೋದಿ ಅವರನ್ನೂ ಮೀರಿಸುವಷ್ಟು ಜನಪ್ರಿಯತೆಯನ್ನು ರಾಹುಲ್ ಪಡೆದುಕೊಳ್ಳುತ್ತಿದ್ದಾರೆ.
ಹರಿಯಾಣವನ್ನು ಕಾಂಗ್ರೆಸ್ ದೊಡ್ಡ ಅಂತರದಿಂದ ಗೆದ್ದರೆ, ಅದು ರಾಹುಲ್ ಅವರ ಜಾತ್ಯತೀತ ರಾಜಕಾರಣ ಮತ್ತು ಸಾಮಾಜಿಕ ನ್ಯಾಯದ ಪ್ರಯೋಗಕ್ಕೆ ದೊಡ್ಡ ಅನುಮೋದನೆಯ ಮುದ್ರೆ ದೊರೆತಂತಾಗಲಿದೆ. ಒಂದು ವೇಳೆ, ಸೋತುಹೋದರೆ ಕಾಂಗ್ರೆಸ್ ವಲಯದಲ್ಲಿ ಗೊಂದಲ ಮೂಡಿಸಲಿದೆ. ಮಾತ್ರವಲ್ಲ, ಲೋಕಸಭಾ ಚುನಾವಣೆಯ ನಂತರ ರಾಹುಲ್ ಮತ್ತು ಕಾಂಗ್ರೆಸ್ ಸಾಧಿಸಿದ ವೇಗ ಮುರಿದು ಬೀಳಲಿದೆ. ಈ ಹಿನ್ನೆಲೆಯಲ್ಲಿ, ಹರಿಯಾಣವನ್ನು ಗೆಲ್ಲಲೇಬೇಕಾದ ಸವಾಲು, ಅಗತ್ಯ, ಅನಿವಾರ್ಯತೆ ಕಾಂಗ್ರೆಸ್ ಮೇಲಿದೆ.