ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಹಾಲು ಡೈರಿಯ ಕಾರ್ಯದರ್ಶಿಗಳ ಸಭೆಯನ್ನು ಆಯೋಜಿಸಿ ತಾಕೀತು ಮಾಡುವ ಹಾಗೂ ಇಲ್ಲಸಲ್ಲದ ನಿಯಮ ತಿಳಿಸುವ ಮೂಲಕ ಆಡಳಿತ ಪಕ್ಷದ ಪರ ಕೆಲಸ ಮಾಡಿದ ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಓಬಳೇಶ್ ಅಧಿಕಾರ ದುರುಪಯೋಗ ಮಾಡಿಕೊಂಡು ಒಂದು ಪಕ್ಷ ಓರ್ವ ವ್ಯಕ್ತಿಯ ಪರ ಕೆಲಸ ಮಾಡಿದ್ದಾರೆ. ಈ ರೀತಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಈ ಅಧಿಕಾರಿ ಓಬಳೇಶ್ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು, ಹಾಲು ಉತ್ಪಾದಕರ ಸಂಘದ ನೂರಾರು ಸದಸ್ಯರು ಸಭೆಯನ್ನು ಸ್ಥಗಿತಗೊಳಿಸಿದರು.
ಸೋಮವಾರ ಬೆಳಿಗ್ಗೆ ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳ ಸಭೆಯ ಆರಂಭಕ್ಕೆ ಮುನ್ನ ಬಿಜೆಪಿ ಮುಖಂಡರು, ಹಾಲಿನ ಡೈರಿ ಸದಸ್ಯರು ಹಾಜರಾಗಿ ಸಭೆಯ ಉದ್ದೇಶವನ್ನು ಪ್ರಶ್ನಿಸಿದರು.
ಒಕ್ಕೂಟದ ನಿರ್ದೇಶಕರ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವಾಗ್ಗೆ ಈ ಸಭೆ ದುರುದ್ದೇಶದಿಂದ ಕೂಡಿದೆ. ಸೂಕ್ತ ಕಾರಣ ನೀಡಬೇಕು. 90 ದಿನದ ಹಿಂದೆ ಮಾಡಬೇಕಾದ ನಿಯಮ ಏಕಾಏಕಿ ಅರವತ್ತು ವರ್ಷ ಆಗಿರುವವರ ನಿವೃತ್ತಿ ಮಾಡುವ ಮೂಲಕ ಸಂಘಗಳ ಅಸ್ಥಿರತೆಗೆ ಅಧಿಕಾರಿಗಳು ಮುಂದಾಗಿದ್ದೀರಿ ಎಂದು ಓಬಳೇಶ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ ನಾಲ್ಕೈದು ವರ್ಷದ ಹಿಂದೆ ಕಟ್ಟಿದ ಡೈರಿ ಕಟ್ಟಡದ ಲೆಕ್ಕಪತ್ರ ಪರಿಶೀಲನೆ ಹೆಸರಿನಲ್ಲಿ ಹಾಲು ಸಂಘವನ್ನು ಅಸ್ಥಿರಗೊಳಿಸಿ ಅಭ್ಯರ್ಥಿಗಳು ಕಣಕ್ಕೆ ಬಾರದಂತೆ ತಡೆಯಲು ಹುನ್ನಾರ ನಡೆದಿದೆ. ಒಂದು ವರ್ಷದಿಂದ ನಿಬಂಧಕರ ಬಳಿಯೇ ಇದ್ದ ಲೆಕ್ಕಪತ್ರ ಈಗ ಮುನ್ನಲೆಗೆ ಬರಲು ಕಾರಣ ಎಲ್ಲರಿಗೂ ತಿಳಿದಿದೆ. ನೀತಿ ಸಂಹಿತೆ ಇರುವಾಗ್ಗೆ ಸಭೆ ನಡೆಸುವುದು ನಿಯಮ ಉಲ್ಲಂಘನೆಯಾಗಿದೆ. ಕಾರ್ಯದರ್ಶಿಗಳ ಮೇಲೆ ಒತ್ತಡ ಹೇರುವ ಈ ಅಧಿಕಾರಿ ಓಬಳೇಶ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ ಮಾತನಾಡಿ ಚುನಾವಣಾ ಅಕ್ರಮ ನಡೆಸಲು ದುರುದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ. ನಂದಿನಿ ಭವನ ಕಟ್ಟಡದಲ್ಲಿ ಮಾಡಲು ನೀತಿ ಸಂಹಿತೆ ಅಡ್ಡಿ ಎನ್ನುವ ಅಧಿಕಾರಿ ಓಬಳೇಶ್ ತಾಲ್ಲೂಕು ಪಂಚಾಯಿತಿ ಸಭಾಂಗಣ ಸರ್ಕಾರಿ ಕಟ್ಟಡ ಬಳಸಿಕೊಂಡಿದ್ದು ಯಾಕೆ ಎಂಬುದು ಹೇಳಬೇಕಿದೆ. ಆಡಳಿತಾರೂಢ ಪಕ್ಷದ ಪರ ಕೆಲಸ ಮಾಡಲು ನೀತಿ ಸಂಹಿತೆ ಉಲ್ಲಂಘಿಸಿ ಕಾರ್ಯದರ್ಶಿಗಳ ಮೇಲೆ ಒತ್ತಡ ಪ್ರಯೋಗ ಮಾಡುವ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಮಾತನಾಡಿ ಅರವತ್ತು ವರ್ಷ ಮೇಲ್ಪಟ್ಟವರ ನಿವೃತ್ತಿ ಬಗ್ಗೆ ಚುನಾವಣಾ ಸಂದರ್ಭದಲ್ಲಿ ಮುನ್ನಲೆಗೆ ತಂದು ಇಡೀ ಜಿಲ್ಲೆಯಲ್ಲಿ ಇಲ್ಲದ ಈ ನಿಯಮ ಗುಬ್ಬಿ ತಾಲ್ಲೂಕಿಗೆ ಅಳವಡಿಸಿ ಹಾಲಿನ ಡೈರಿ ಹಾಳು ಮಾಡುವ ಹುನ್ನಾರ ನಡೆದಿದೆ. ನ್ಯಾಯಯುತ ಚುನಾವಣೆ ಮಾಡಲಾಗದೆ ವಾಮಮಾರ್ಗ ಅನುಸರಿಸಿ ಸಹಕಾರ ಇಲಾಖೆಯ ಅಧಿಕಾರಿಗಳ ದುರ್ಬಳಕೆ ಮಾಡಲಾಗುತ್ತಿದೆ. ಡೈರಿಯ ಕಾರ್ಯದರ್ಶಿಗಳನ್ನು ಹಿಡಿತಕ್ಕೆ ಪಡೆದು ತಮ್ಮ ಸ್ವಾರ್ಥ ಸಾಧನೆಗಾಗಿ ಅಧಿಕಾರ ಬಳಸಿಕೊಂಡಿರುವುದು ದುರಂತ. ಸಹಾಯಕ ನಿಬಂಧಕರು ನೀತಿ ಸಂಹಿತೆ ಜಾರಿ ನಂತರ ಸಭೆ ನಡೆಸಿರುವುದು ಸರಿಯಲ್ಲ ಎಂದು ಸಭೆಯಲ್ಲಿ ಓಬಳೇಶ್ ಅವರನ್ನು ಘೇರಾವ್ ಮಾಡಿದ ಮುಖಂಡರು, ಡೈರಿ ಸದಸ್ಯರು ಸಭೆ ನಡೆಸದಂತೆ ತಾಕೀತು ಮಾಡಿ ಎಆರ್ ಓಬಳೇಶ್ ಅವರನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಇರದಂತೆ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನೆರೆದಿದ್ದ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳು ಮೂಕ ಪ್ರೇಕ್ಷಕರಾಗಿ ಈ ಸಭೆಯ ಔಚಿತ್ಯ ಇರಲಿಲ್ಲ ಎಂದು ಗುಸು ಗುಸು ಚರ್ಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಾಗರನಹಳ್ಳಿ ವಿಜಯಕುಮಾರ್, ಯತೀಶ್, ಸಿದ್ದರಾಮಯ್ಯ, ಅಣ್ಣಪ್ಪಸ್ವಾಮಿ, ಶಶಿಕುಮಾರ್, ಲಕ್ಷ್ಮೀರಂಗಯ್ಯ, ಹೊಸಹಳ್ಳಿ ಗಿರೀಶ್, ರೇಣುಕಾ ಪ್ರಸಾದ್, ಚೇತನ್ ನಾಯಕ್, ಪ್ರಮೋದ್, ವಿದ್ಯಾಸಾಗರ, ಗಂಗಬಸಪ್ಪ ಇತರರು ಇದ್ದರು.