ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಕಳೆದ ಜುಲೈ 16ರಂದು ಸಂಭವಿಸಿದ್ದ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ ಕೇರಳದ ಭಾರತ್ ಬೆಂಝ್ ಲಾರಿ ಚಾಲಕ ಅರ್ಜುನ್ ಮೃತದೇಹ ಬರೋಬ್ಬರಿ 72 ದಿನಗಳ ಬಳಿಕ ಕಳೆದ ಸೆ.25ರಂದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಮೂರನೇ ಹಂತದ ಕಾರ್ಯಾಚರಣೆಯಲ್ಲಿ ಎರಡು ಮಾನವ ಮೂಳೆ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ, “ಅಂಕೋಲಾ ಶಿರೂರು ಗುಡ್ಡ ಕುಸಿತದಲ್ಲಿ ಕಾಣೆಯಾದವರಿಗಾಗಿ ನಡೆಸಲಾಗುತ್ತಿರುವ ಮೂರನೇ ಹಂತದ ಶೋಧ ಕಾರ್ಯಾಚರಣೆಯಲ್ಲಿ ಇಂದು ಎರಡು ಮೂಳೆಗಳು ಗಂಗಾವಳಿ ನದಿಯಲ್ಲಿ ದೊರೆತಿದೆ.ಅದನ್ನು ಡಿ.ಎನ್.ಎ ಪರೀಕ್ಷೆಗಾಗಿ ಕಳುಹಿಸಲಾಗಿದೆ” ಎಂದು ತಿಳಿಸಿದ್ದಾರೆ.
ಶಿರೂರು ದುರಂತದಿಂದ ಗಂಗಾವಳಿಯಲ್ಲಿ ಮುಳುಗಿ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಡ್ರೆಜ್ಜಿಂಗ್ ಮೂಲಕ ಶೋಧ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಮಾನವ ಮೂಳೆ ಪತ್ತೆಯಾಗಿದೆ.
ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡಕುಸಿತ ಉಂಟಾಗಿ 75 ದಿನ ಕಳೆದಿದ್ದು, ಮೂರನೇ ಹಂತದ ಕಾರ್ಯಚರಣೆಯಲ್ಲಿ ಲಾರಿ ಚಾಲಕ ಅರ್ಜುನ್ ಮೃತದೇಹ ಪತ್ತೆಯಾದ ಬೆನ್ನಲ್ಲೇ ಇದೀಗ ವಿದ್ಯುತ್ ಟವರ್ ಸಿಕ್ಕಿರುವ ಸ್ಥಳದಲ್ಲೆ ಮಾನವ ಮೂಳೆ ಪತ್ತೆಯಾಗಿದೆ. ಯಾರಿಗೆ ಸೇರಿದ್ದು ಎನ್ನುವುದು ಡಿಎನ್ಎ ಪರೀಕ್ಷೆ ಬಳಿಕವೇ ಪತ್ತೆಯಾಗಬೇಕಿದೆ. ಶಿರೂರಿನ ಲೋಕೇಶ್ ನಾಯ್ಕ ಹಾಗೂ ಹೋಟೆಲ್ ನಡೆಸುತ್ತಿದ್ದ ಜಗನ್ನಾಥ ನಾಯ್ಕ ಎಂಬುವವರಿಗಾಗಿ ಹುಡುಕಾಟ ಮುಂದುವರಿಸಲಾಗಿದೆ.
ಶಾಸಕ ಸತೀಶ ಸೈಲ್ ಕೂಡ ಕಾರ್ಯಾಚರಣೆ ಸ್ಥಳದಲ್ಲಿ ನಿರಂತರವಾಗಿ ಇದ್ದರು. ‘ಇನ್ನೂ ಕೆಲ ದಿನಗಳ ಕಾಲ ಕಾರ್ಯಾಚರಣೆ ಮುಂದುವರೆಯಲಿದೆ. ಕಣ್ಮರೆಯಾಗಿರುವ ಇಬ್ಬರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತೇವೆ’ ಎಂದು ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾರ್ಕಳದಲ್ಲಿ ದಾರುಣ ಘಟನೆ : ಲಾರಿ- ಬೈಕ್ ಮಧ್ಯೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರ ಸಾವು
ಕಳೆದ ಜುಲೈ 16ರಂದು ಶಿರೂರು ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿ ಎರಡು ತಿಂಗಳ ಬಳಿಕ ನಡೆಸಿದ ಡ್ರಜ್ಜಿಂಗ್ ಕಾರ್ಯಾಚರಣೆಯ ವೇಳೆ ಗಂಗಾವಳಿ ನದಿಯಲ್ಲಿ ಲಾರಿ ಸಹಿತ ಚಾಲಕ ಅರ್ಜುನ್ ಶವವು ಸೆ.25ರಂದು ಪತ್ತೆಯಾಗಿತ್ತು. ಡಿಎನ್‌ಎ ಪರೀಕ್ಷೆಯಲ್ಲಿ ಶವ ಅರ್ಜುನ್‌ನದ್ದೇ ಎಂದು ದೃಢೀಕರಿಸಿದ ಬಳಿಕ ಉತ್ತರ ಕನ್ನಡ ಜಿಲ್ಲಾಡಳಿತವು ಶವವನ್ನು ಪೊಲೀಸ್ ಸೂಕ್ತ ಬೆಂಗಾವಲಿನೊಂದಿಗೆ ಕೇರಳದ ಕೋಝಿಕ್ಕೂಡ್‌ನ ಅರ್ಜುನ್‌ನ ಕುಟುಂಬಸ್ಥರಿಗೆ ಹಸ್ತಾಂತರಿಸಿತ್ತು. ಆ ಬಳಿಕ ಸೆ.28ರಂದು ಅರ್ಜುನ್ ಅವರ ಮೃತದೇಹವನ್ನು, ಅರ್ಜುನ್ ನಿರ್ಮಿಸಲು ಬಯಸಿದ್ದ ಮನೆಯ ಬಳಿಯಲ್ಲಿಯೇ ದಹನ ಮಾಡಲಾಗಿತ್ತು. ಅಂತ್ಯಸಂಸ್ಕಾರದ ವೇಳೆ ಭಾರೀ ಜನಸ್ತೋಮ ನೆರೆದಿತ್ತು.
