ಮೈಸೂರಿನ ಹೊರವಲಯ ಉತ್ತರಹಳ್ಳಿ ಸಮೀಪದಲ್ಲಿ ನಡೆಯಲಿರುವ ಯುವ ದಸರಾ ಕಾರ್ಯಕ್ರಮದ ಸ್ಥಳವನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಪರಿಶೀಲನೆ ನಡೆಸಿದರು.
ಯುವ ದಸರಾ ಆಯೋಜನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು, “ನಾಡಹಬ್ಬ ದಸರಾ ಮಹೋತ್ಸವದಲ್ಲಿ ನಡೆಯುವ ಆಕರ್ಷಕ ಕಾರ್ಯಕ್ರಮಗಳಲ್ಲಿ ಯುವದಸರಾ ಪ್ರಮುಖವಾಗಿದ್ದು, ಮೈಸೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಜನರು ವೀಕ್ಷಣೆಗೆ ಆಗಮಿಸುವರು. ಹೀಗಾಗಿ ಅಗತ್ಯ ಸೌಲಭ್ಯವನ್ನು ಕಲ್ಪಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.

“ಯುವದಸರಾಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಯುವಜನರು ಆಗಮಿಸಿ ಸಂಭ್ರಮಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದರಿಂದ ಯಾವುದೇ ಅನಾನುಕೂಲ ಉಂಟಾಗದಂತೆ ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ರೂಪಿಸಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಆನೆ ದಾಳಿಗೆ ರೈತ ಬಲಿ; ₹25 ಲಕ್ಷ ಪರಿಹಾರ ರೈತ ಸಂಘ ಆಗ್ರಹ
“ನಗರದಿಂದ ಬರುವ ದಾರಿಯುದ್ದಕ್ಕೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೀದಿದೀಪದ ವ್ಯವಸ್ಥೆ ಮಾಡಬೇಕು. ವಾಹನ ಪಾರ್ಕಿಂಗ್ ಸ್ಥಳದಲ್ಲಿ ವ್ಯವಸ್ಥಿತವಾಗಿ ನಿಲ್ಲಿಸಲು ಸೂಚನಾ ಫಲಕ ಅಳವಡಿಸಬೇಕು. ಮಹಿಳೆಯರ ಸುರಕ್ಷತೆಗಾಗಿ
ಸೂಕ್ತ ಭದ್ರತೆ ಒದಗಿಸಬೇಕು. ರಾತ್ರಿ ವೇಳೆ ಕಾರ್ಯಕ್ರಮ ನಡೆಯುವುದರಿಂದ ಎಲ್ಲ ಬಗೆಯ ಅಗತ್ಯ ಮುಂಜಾಗೃತ ಕ್ರಮ ಅನುಸರಿಸಬೇಕು” ಎಂದು ಸೂಚನೆ ನೀಡಿದರು.
ಹಿರಿಯ ಐಪಿಎಸ್ ಅಧಿಕಾರಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಕೆ ಎಂ ಗಾಯಿತ್ರಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಉಪ ವಿಭಾಗಧಿಕಾರಿ ಕೆ ಆರ್ ರಕ್ಷಿತ್ ಸೇರಿದಂತೆ ಇತರರು ಇದ್ದರು.