ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬೀದರ್ ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬ್ರಿಮ್ಸ್ ) ಆಸ್ಪತ್ರೆಯಲ್ಲಿ ಮೂತ್ರಶಾಸ್ತ್ರಜ್ಞ ವೈದ್ಯರಿಲ್ಲದೆ ರೋಗಿಗಳು ಪರದಾಡುತ್ತಿದ್ದು, ಕೂಡಲೇ ಮೂತ್ರಶಾಸ್ತ್ರಜ್ಞ ವೈದ್ಯರನ್ನು ನೇಮಕ ಮಾಡುವಂತೆ ಕರ್ನಾಟಕ ಯುವ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ವೇದಿಕೆಯ ಜಿಲ್ಲಾಧ್ಯಕ್ಷ ಗುರುದಾಸ ಅಮದಲಪಾಡ ನೇತ್ರತ್ವದಲ್ಲಿ ಬ್ರಿಮ್ಸ್ ನಿರ್ದೇಶಕ ಶಿವಕುಮಾರ್ ಶೆಟಕಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ʼಜಿಲ್ಲಾ ಆಸ್ಪತ್ರೆಯಲ್ಲಿ ಮೂತ್ರಶಾಸ್ತ್ರಜ್ಞ ವೈದ್ಯರ ಕೊರತೆಯೇ ಗಂಭೀರ ಸಮಸ್ಯೆಯಾಗಿದೆ. ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಇದ್ದರೂ ಕೆಲವು ವಿಭಾಗದಲ್ಲಿ ವಿಶೇಷ ತಜ್ಞ ವೈದ್ಯರಿಲ್ಲ. ಗ್ರಾಮೀಣ ಭಾಗದಿಂದ ಚಿಕಿತ್ಸೆಗೆಂದು ಆಗಮಿಸುವ ಜಿಲ್ಲೆಯ ರೋಗಿಗಳಿಗೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲʼ ಎಂದು ದೂರಿದರು.
ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವ ಬಡ ರೋಗಿಗಳಿಗೆ ನುರಿತ ವೈದ್ಯರು ಇಲ್ಲದ ಪರಿಣಾಮ ತೊಂದರೆಗೆ ಸಿಲುಕಿದ್ದಾರೆ. ಇದರಿಂದ ಜನರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶೀಘ್ರದಲ್ಲೇ ವೈದ್ಯರನ್ನು ನೇಮಿಸುವ ಮಹತ್ತರ ಜವಾಬ್ದಾರಿ ಆರೋಗ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗುಡುಗು ಸಹಿತ ಮಳೆ; ಸಿಡಿಲಿಗೆ ಕುರಿಗಾಹಿ ಬಲಿ
ಈ ಸಂದರ್ಭದಲ್ಲಿ ಕರ್ನಾಟಕ ಯುವಗರ್ಜನೆ ಜಿಲ್ಲಾಧ್ಯಕ್ಷ ಅನೀಲ್ ಕುಮಾರ್ ಭವಾನಿ, ಜಿಲ್ಲಾಧ್ಯಕ್ಷ ವಿಲ್ಸನ್ ದೊಡ್ಡಮನಿ ಇದ್ದರು.