- ಖಲಿಸ್ತಾನಿ ಉಗ್ರರಿಂದ ದೇವಾಲಯದ ಮೇಲೆ ಭಾರತ ವಿರೋಧಿ ಬರಹ
- ಆಸ್ಟ್ರೇಲಿಯದ ರೋಸ್‌ಹಿಲ್ ಪ್ರದೇಶದ ಶ್ರೀ ಸ್ವಾಮಿ ನಾರಾಯಣ ದೇಗುಲ
ಖಲಿಸ್ತಾನಿ ಉಗ್ರರು ಆಸ್ಟ್ರೇಲಿಯದ ಸಿಡ್ನಿಯಲ್ಲಿ ಹಿಂದೂ ದೇವಾಲಯವನ್ನು ಶುಕ್ರವಾರ (ಮೇ 5) ವಿರೂಪಗೊಳಿಸಿದ್ದಾರೆ.
ಸಿಡ್ನಿಯ ರೋಸ್‌ಹಿಲ್ ಪ್ರದೇಶದಲ್ಲಿರುವ ಶ್ರೀ ಸ್ವಾಮಿ ನಾರಾಯಣ ದೇವಾಲಯದ ದ್ವಾರದ ಮೇಲೆ ಖಲಿಸ್ತಾನಿ ಉಗ್ರರು ತಮ್ಮ ಧ್ವಜ ಕಟ್ಟಿದ್ದಾರೆ. ದೇಗುಲದ ಗೋಡೆ ಮೇಲೆ ಭಾರತ ವಿರೋಧಿ ಬರಹಗಳನ್ನು ಗೀಚಲಾಗಿದೆ.
ಖಲಿಸ್ತಾನಿ ಉಗ್ರರು ಭಾರತೀಯರ ಭಾವನೆಗಳಿಗೆ ಘಾಸಿ ಮಾಡಿದ್ದಾರೆ ಎಂದು ಪ್ರದೇಶದಲ್ಲಿರುವ ಭಾರತೀಯರು ಆತಂಕಕ್ಕೊಳಗಾಗಿದ್ದಾರೆ.
ಮೇ 24ರಂದು ಆಸ್ಟ್ರೇಲಿಯದ ಮೆಲ್ಬರ್ನ್‌ನಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಅದಕ್ಕೂ ಮುನ್ನ ಈ ಘಟನೆ ನಡೆದಿದೆ.
ಇಂತಹ ಕೃತ್ಯದಿಂದ ಇಲ್ಲಿ ನೆಲೆಸಿರುವ ಭಾರತೀಯರ ಭಾವನೆಗಳಿಗೆ ಘಾಸಿ ಉಂಟಾಗಿದೆ. ಈ ಕುರಿತು ನ್ಯೂ ಸೌಥ್ ವೇಲ್ಸ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
23 ವರ್ಷಗಳ ಹಿಂದೆ ಈ ಶ್ರೀ ಸ್ವಾಮಿ ನಾರಾಯಣ ದೇವಾಲಯ ನಿರ್ಮಿಸಲಾಗಿದೆ. ಆಸ್ಟ್ರೇಲಿಯದ ಭಾರತೀಯರಲ್ಲಿ ಶಾಂತಿ, ಸಾಮರಸ್ಯ ಬೆಳೆಸಿ, ಹಿಂದೂ ಧರ್ಮದ ಮೌಲ್ಯಗಳನ್ನು ಬಿತ್ತಲು ದೇವಾಲಯ ಆದ್ಯತೆ ನೀಡುತ್ತಿದೆ ಎಂದು ಆಡಳಿತ ಮಂಡಳಿ ಹೇಳಿದೆ.
ದೇವಾಲಯದ ಮೇಲೆ ಖಲಿಸ್ತಾನಿ ಉಗ್ರರ ದಾಳಿಯ ನಂತರ ದೇಶದ ನಾನಾ ಕಡೆ ಇರುವ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಯುವ ಅಪಾಯ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತವಾಗಿದೆ.
ಸಂಸದ ಆಂಡ್ರ್ಯೂ ಚಾರ್ಲ್ಟನ್ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ವಿರೂಪಗೊಂಡಿರುವ ದೇವಾಲಯದ ಗೋಡೆಗಳಿಗೆ ಬಣ್ಣ ಬಳಿಯುವಂತೆ ದೇವಾಲಯ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.
“ಈ ಘಟನೆ ಆಘಾತ ಉಂಟು ಮಾಡಿದೆ. ಇಂತಹ ಕೃತ್ಯಗಳನ್ನು ಎಲ್ಲರೂ ಖಂಡಿಸಬೇಕು. ಆಸ್ಟ್ರೇಲಿಯದಲ್ಲಿ ನೆಲೆಸಿರುವ ಎಲ್ಲ ಸಮುದಾಯ ಶಾಂತಿಯಿಂದ ತಮ್ಮ ಧಾರ್ಮಿಕ ಕಾರ್ಯ ನಡೆಸುವ ಹಕ್ಕು ಹೊಂದಿದ್ದಾರೆ” ಎಂದು ಆಂಡ್ರ್ಯೂ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ನನ್ನ ಮೇಲೆ ಅತ್ಯಾಚಾರವೆಸಗಿದ್ದ ಡೊನಾಲ್ಡ್ ಟ್ರಂಪ್; ಪತ್ರಕರ್ತೆ ಇ ಜೀನ್ ಕ್ಯಾರೊಲ್ ಗಂಭೀರ ಆರೋಪ
ಖಲಿಸ್ತಾನಿ ಉಗ್ರರು ಈ ವರ್ಷದ ಆರಂಭದಲ್ಲಿ ಮೆಲ್ಬರ್ನ್‌ನ ಮೂರು ಮತ್ತು ಬ್ರಿಸ್ಟೇನ್‌ನ ಎರಡು ಹಿಂದೂ ದೇಗುಲಗಳನ್ನು ವಿರೂಪಗೊಳಿಸಿದ್ದರು.
ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯ ಪ್ರಧಾನಿ ಆ್ಯಂಟನಿ ಅಲ್ಬನೆಸ್ ಭಾರತಕ್ಕೆ ಭೇಟಿ ನೀಡಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಈ ವಿಷಯದ ಕುರಿತು ಅವರೊಂದಿಗೆ ಚರ್ಚಿಸಿದ್ದರು.