ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಬದಲಾವಣೆ ಕುರಿತಂತೆ ಹೈಕಮಾಂಡ್ ಗಮನಕ್ಕೂ ತಂದಿದ್ದೇವೆ. ಅಧ್ಯಕ್ಷರ ಬದಲಾವಣೆ ಮಾಡಬೇಕೋ ಅಥವಾ ಬೇಡವೋ ಎಂಬುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ನಾವು ಎಲ್ಲಿ ಮಾತುಕತೆ ಮಾಡಬೇಕು ಅಲ್ಲಿ ಮಾತನಾಡಿದ್ದೇವೆ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಿದ್ದೇವೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ದಾವಣಗೆರೆಯ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 38 ಜನರು ಸೇರಿ ಬೆಳಗಾವಿಯಲ್ಲಿ ಸಭೆ ನಡೆಸಿದ್ದು ನಿಜ. ಆದರೆ ನಾವ್ಯಾರೂ ಭಿನ್ನಮತೀಯರಲ್ಲ, ಇದು ಭಿನ್ನಮತೀಯರ ಸಭೆಯೂ ಅಲ್ಲ. ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಪಕ್ಷದ ವಿರುದ್ಧ ಕೆಲಸ ಮಾಡಿದವರು ತಾಯಿಗೆ ದ್ರೋಹ ಮಾಡಿದಂತೆ. ರಾಜ್ಯದ ಬೆಳವಣಿಗೆಗಳ ಕುರಿತಾಗಿ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಯಾವ ಶಿಸ್ತುಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದು ತಿಳಿಸಿದರು.

ಸ್ವಾರ್ಥ ಸಾಧನೆ ಬಿಟ್ಟು ಪಕ್ಷಕ್ಕಾಗಿ ದುಡಿಯಬೇಕು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ದ ಕ್ರಮ ಜರುಗಿಸಬೇಕು. ನಾವು ಬಹಿರಂಗವಾಗಿ ಪಕ್ಷದ ಅಧ್ಯಕ್ಷರ ಬದಲಾವಣೆ ಮಾಡಬೇಕೆಂಬ ಬಗ್ಗೆ ಒತ್ತಾಯ ಮಾಡಲ್ಲ. ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇವೆ ಅಷ್ಟೇ ಎಂದು ಹೇಳಿದರು.
ಚಿತ್ರದುರ್ಗದಲ್ಲಿ ವಿಜಯೇಂದ್ರ ಅವರು ನನಗೆ ಸಂಸ್ಕಾರದ ಬಗ್ಗೆ ಮಾತನಾಡಿದ್ದಾರೆ. ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿಗಳು ಜೈಲಿನಲ್ಲಿದ್ದು, ಅವರ ಸಂಸ್ಕಾರ ಎಂಥದ್ದು? ಬಿ. ಎಸ್. ಯಡಿಯೂರಪ್ಪರ ಸಂಸ್ಕಾರ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನನಗೆ ಸಂಸ್ಕಾರದ ಬಗ್ಗೆ ಹೇಳಬೇಕಾದ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ವರಿಷ್ಠರು, ಸಂಘ ಪರಿವಾರದವರು ನಮ್ಮೊಟ್ಟಿಗೆ ಸಭೆ ನಡೆಸಿ ಅಭಿಪ್ರಾಯ ಕೇಳಿದ್ದಾರೆ. ನಾವು ಎಲ್ಲ ವಿಚಾರಗಳನ್ನೂ ಅವರಿಗೆ ತಿಳಿಸಿದ್ದೇವೆ. ಬಹಿರಂಗವಾಗಿ ಮಾತನಾಡಬೇಡಿ ಎಂದು ಸೂಚನೆ ನೀಡಿದ್ದಾರೆ. ಅದನ್ನು ಪಾಲಿಸುತ್ತೇವೆ. ನಾವೇನೂ ಭಿನ್ನಮತೀಯ ಚಟುವಟಿಕೆ ನಡೆಸಿಲ್ಲ. ಪಕ್ಷ ವಿರೋಧಿ ನಡವಳಿಕೆ ನಮ್ಮಲ್ಲಿ ಇಲ್ಲ. ಪಕ್ಷಕ್ಕೆ ಎಂದಿಗೂ ನಾವು ನಿಷ್ಠರು. ಪಕ್ಷದ ಉಳಿವಿಗಾಗಿ ಹೋರಾಟ ಶುರು ಮಾಡಿದ್ದೇವೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದು, ಪಾಲನೆ ಮಾಡುತ್ತೇವೆ. ಇದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
ಈ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ್, ಗಾಯತ್ರಿ ಸಿದ್ದೇಶ್ವರ್ ಹರಿಹರ ಶಾಸಕ ಹರೀಶ್ ಮತ್ತಿತರರು ಹಾಜರಿದ್ದರು.
