ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಿ ಗ್ರಾಮದ ದಲಿತರಿಗೆ ಬಹಿಷ್ಕಾರ ಪ್ರಕರಣ ನಡೆದು ಎರಡು ವಾರ ಕಳೆದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸರು ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ಮಾದಿಗ ದಡೋರ ಮಾದಿಗ ಮೀಸಲಾತಿ ಸೇರಿದಂತೆ ವಿವಿಧ ದಲಿತ ಸಂಘಟನೆಗಳಿಂದ ಸೋಮವಾರ ಯಾದಗಿರಿ ಬಂದ್‌ಗೆ ಕರೆ ನೀಡಲಾಗಿತ್ತು.
ಸೋಮವಾರ ದಲಿತ ಸಂಘಟನೆಗಳ ನೇತ್ರತ್ವದಲ್ಲಿ ಯಾದಗಿರಿ ನಗರದ ಬಾಬು ಜಗಜೀವನರಾಮ್ ವೃತ್ತ ಹಿರೆಅಗಸಿಯಿಂದ ಸುಭಾಷ್ ವೃತ್ತದ ವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಘೋಷಣೆ ಕೂಗಿದರು. ಬಳಿಕ ಮುಖ್ಯಮಂತ್ರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಮಾದಿಗ ದಡೋರ ಮಾದಿಗ ಮೀಸಲಾತಿ ಸಮಿತಿ ರಾಜ್ಯಾಧ್ಯಕ್ಷ ಬಿ.ನರಸಪ್ಪ ಮಾತನಾಡಿ, ʼಯಾದಗಿರಿ ಜಿಲ್ಲೆಯ ಬಪ್ಪರಗಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಕೃತ್ಯ ಅಮಾನವೀಯವಾಗಿದೆ. ಗ್ರಾಮದಲ್ಲಿ ಬೆರಳಣಿಕೆಯಷ್ಟು ಇರುವ ಸವರ್ಣೀಯರು ದಲಿತರನ್ನು ಬಹಿಷ್ಕಾರ ಹಾಕಿ ದರ್ಪ ತೋರುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆತಗ್ಗಿಸುವ ಹೇಯಕೃತ್ಯವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಿ ದಲಿತರಿಗೆ ರಕ್ಷಣೆ ಒದಗಿಸಲು ಮುಂದಾಗಬೇಕುʼ ಎಂದು ಒತ್ತಾಯಿಸಿದರು.
ʼಬಹಿಷ್ಕಾರ ಹಾಕಿರುವ ತಪ್ಪಿಸ್ಥ ಆರೋಪಿಗಳ ಬಂಧನಕ್ಕೆ ಪೊಲೀಸರು ತೆರಳಿದ್ದಾಗ ದಲಿತ ಕುಟುಂಬಗಳ ಸುಡುವ ಬೆದರಿಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಬಹಿಷ್ಕಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಈ ಅನ್ಯಾಯ ಸಹಿಸುವುದಿಲ್ಲ. ಕೃತ್ಯ ಎಸಗಿದವರಿಗೆ ಕಠಿಣ ಕಾನೂನು ಶಿಕ್ಷೆ ಆಗಬೇಕುʼ ಎಂದು ಒತ್ತಾಯಿಸಿದರು.

ʼದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಬೇಕು. ಬಾಲಕಿ ಮತ್ತು ಬಹಿಷ್ಕಾರಕ್ಕೊಳಗಾದ ಕುಟುಂಬಕ್ಕೆ ಸರ್ಕಾರದಿಂದ 5 ಎಕರೆ ಜಮೀನು, ಮನೆ ಹಾಗೂ 25 ಲಕ್ಷ ಪರಿಹಾರ ಧನ ನೀಡಬೇಕು. ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಗಲ್ಲಿ ಶಿಕ್ಷೆ ವಿಧಿಸಬೇಕುʼ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ʼಬಹಿಷ್ಕಾರಕ್ಕೊಳಗಾದ 10 ದಲಿತ ಕುಟುಂಬಕ್ಕೆ ಸರ್ಕಾರದಿಂದ 5 ಎಕರೆ ಜಮೀನು ಮತ್ತು ಮನೆ ಕೊಡಬೇಕು. ಯಾದಗಿರಿ ಜಿಲ್ಲೆಯ ಕೊಡೇಕಲ್ ಗ್ರಾಮದಲ್ಲಿ 15 ವರ್ಷದ ಐಶ್ವರ್ಯ ಎಂಬ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಆರೋಪಿಗಳ ವಿರುದ್ಧ ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಾದರೂ ತಪ್ಪಿಸ್ಥರನ್ನು ಇನ್ನೂ ಬಂಧಿಸಿಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸಿ ಬಾಲಕಿ ಕುಟುಂಬಕ್ಕೆ 5 ಎಕರೆ ಜಮೀನು, ಮನೆ ಹಾಗೂ 25 ಲಕ್ಷ ಪರಿಹಾರ ನೀಡಬೇಕುʼ ಎಂದು ಆಗ್ರಹಿಸಿದರು.
ʼಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿಲು ವಿಳಂಬ ನೀತಿ ಅನುಸರಿಸಿ ತಾರತಮ್ಯ ತೋರಿದ ಸುರಪುರ ಡಿವೈಎಸ್‌ಪಿ, ಕೊಡೇಕಲ್ ಪಿಎಸ್‌ಐ ಹಾಗೂ ಹುಣಸಗಿ ಪಿಎಸ್‌ಐ ಅವರನ್ನು ಕೂಡಲೇ ಅಮಾನತ್ತುಗೊಳಿಸಬೇಕುʼ ಎಂದು ಮನವಿ ಮೂಲಕ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅ.5ರಂದು ಜಿಲ್ಲಾ ರೈತ ಸಮಾವೇಶ : ನಾಗೇಂದ್ರ ಥಂಬೆ
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಗಣೇಶ ದುಪ್ಪಲಿ, ಕಾಶಪ್ಪ ಹೆಗ್ಗಣಗೇರಾ, ಮಲ್ಲಣ್ಣ ದಾಸನಕೇರಿ, ಖಂಡಪ್ಪ ದಾಸನ್, ಶಾಂತರಾಜ ಮೋಟ್ನಳ್ಳಿ, ದೇವಿಂದ್ರನಾಥ, ಸ್ವಾಮಿದೇವ ದಾಸನಕೇರಿ, ವಿಜಯ ಶಿರಗೋಳ, ಭೀಮರಾಯ ಮ್ಯಗೇರಿ, ಸೋಮು ಬಂದೊಡ್ಡಿ, ಕುಮಾರ್ ವಡಗೇರಾ, ಕೆ.ಬಿ ವಾಸು, ಅಶೋಕ ಅಂಬೇಡ್ಕರ್, ಮಲ್ಲಿಕಾರ್ಜುನ ದೊಡ್ಡಮನಿ, ಗೋಪಾಲ ದಾಸನಕೇರಿ, ಎಂ.ಕೆ.ಬೀರನೂರ, ಕೃಷ್ಣಾ ಚಪೇಟ್ಲಾ, ಹಣಮಂತ ಲಿಂಗೇರಿ, ಚನ್ನಯ್ಯ ಮಾಳಕೇರಿ, ಸ್ಯಾಮಸನ್ ಮಾಳಿಕೇರಿ, ಲಿಂಗಪ್ಪ ಹತ್ತಿಮನಿ, ಭೀಮಾಶಂಕರ ಆಜ್ಞಾಕ್, ನಿಂಗಪ್ಪ ವಡ್ನಳ್ಳಿ, ಮಲ್ಲಿಕಾರ್ಜುನ ಕಾಂತಿಮನಿ, ತಾಯಪ್ಪ ಬದ್ದೇಪಲ್ಲಿ, ಭೀಮರಾಯ ಕಿಲ್ಲನಕೇರಾ, ನಾಗರಾಜ ಕೊಡೇಕಲ್, ಮಾನಪ್ಪ ಮೇಸ್ತ್ರಿ, ಮಂಜುನಾಥ ದಾಸನಕೇರಿ, ಅನೀಲ್ ದಾಸನಕೇರಿ, ಗುರು ಭಂಡಾರಿ, ಶಾಂತಪ್ಪ ಖಾನಹಳ್ಳಿ, ಮಲ್ಲಿಕಾರ್ಜುನ ಜಲ್ಲಪ್ಪನೋರ, ಮೈಲಾರಪ್ಪ ಜಾಗೀರದಾರ, ಮಲ್ಲು ದೊಡ್ಡನಿ ಬೆಳಗೇರ, ದೇವು ಲಿಂಗೇರಿ, ಚಂದ್ರು ಮುಂಡರಗಿ, ರಾಜು ಮೇತ್ರೆ ಕಡೇಚೂರ, ಮಾನಪ್ಪ ಕಟ್ಟಿಮನಿ, ಹಣಮಂತ ಸೌರಾಷ್ಟ್ರಹಳ್ಳಿ, ಶರಣಪ್ಪ ವಡಗೇರಾ, ಭೀಮಶಪ್ಪ ಗುರುಮಠಕಲ್, ಸಾಬಣ್ಣ ಸೈದಾಪೂರ, ಸಂಜಯಕುಮಾರ ಪುಟಗಿ, ತಿಪ್ಪಣ್ಣ ಗೊಂದೆನೋರ ಸೆರಿದಂತೆ ಅನೇಕರು ಪಾಲ್ಗೊಂಡಿದ್ದರು.