ರಾಯಚೂರು ನಗರದ ಚಂದ್ರಬಂಡಾ ರಸ್ತೆಯ ಎಲ್ ಬಿ ಎಸ್ ನಗರದ ಸಂತೋಷ್ ಬಡಾವಣೆಯಲ್ಲಿ ಸರ್ಕಾರಿ ಪ್ರೌಢ ಶಾಲೆಗಾಗಿ ಮೀಸಲಿರಿಸಿದ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಲಾಗಿರುವ ಕುರಿತು ಮಾಹಿತಿ ಇದ್ದು, ಈಗಾಗಲೇ ಪೊಲೀಸ್ ಬಂದೋಬಸ್ತ್ ಮೂಲಕ ತೆರವುಗೊಳಿಸುವುದಾಗಿ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಭರವಸೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರ್ಕಾರಿ ಕನ್ನಡ ಶಾಲಾ ಉಳಿಸಿ ಹೋರಾಟ ಸಮಿತಿಯ ನಿಯೋಗ ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಿ ಮನವಿ ಸಲ್ಲಿಸಿದ ವೇಳೆ, ಈ ರೀತಿ ಭರವಸೆ ನೀಡಿದ್ದಾರೆ.
ಚಂದ್ರಬಂಡಾ ರಸ್ತೆಯ ಎಲ್‌ಬಿಎಸ್ ನಗರದ ಸಂತೋಷ್ ಬಡಾವಣೆಯ ಸರ್ವೆ ನಂ. 784/1 ರಲ್ಲಿ ವಸತಿ ಬಡಾವಣೆಗೆ ನಾಗರಿಕ ಸೌಲಭ್ಯದ ಕೋಟಾದಡಿ ಎಲ್ ಬಿ ಎಸ್ ನಗರದ ಸರ್ಕಾರಿ ಪ್ರೌಢ ಶಾಲೆಗೆ (ಕನ್ನಡ ಮಾಧ್ಯಮ) ಶಾಲಾ ಕಟ್ಟಡಕ್ಕಾಗಿ ಮೀಸಲಿಡಲಾಗಿದೆ. 1017 ಚದರ ಮೀಟರ್‌ಗಿಂತ ಅಧಿಕ ಖಾಲಿ ನಿವೇಶನವನ್ನು ಬಡಾವಣೆಯ ಕೆಲವು ಪಟ್ಟಭದ್ರ ವ್ಯಕ್ತಿಗಳು ಸರ್ಕಾರಿ ಜಾಗದಲ್ಲಿ ಮನೆ ಕಟ್ಟುವ ಸಂದರ್ಭದಲ್ಲಿ ಅಕ್ರಮವಾಗಿ ಟಿನ್ ಶೆಡ್ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ದೇವಸ್ಥಾನ ಮತ್ತು ದೇವರ ಸ್ವರೂಪವನ್ನು ನೀಡಿ ದೇವರ ಹೆಸರಿನಲ್ಲಿ ಸರ್ಕಾರಿ ಜಾಗವನ್ನು ಕಬಳಿಸುವ ಹುನ್ನಾರ ಮಾಡಿದ್ದಾರೆ ಎಂದು ಸರ್ಕಾರಿ ಕನ್ನಡ ಶಾಲಾ ಉಳಿಸಿ ಹೋರಾಟ ಸಮಿತಿಯ ಮುಖಂಡರು ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ, ಸಂಬಂಧಪಟ್ಟಂತೆ ಶಿಕ್ಷಣ ಇಲಾಖೆಯ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳ ಮತ್ತು ಸಚಿವರ ಗಮನಕ್ಕೆ ತಂದರು ಅದನ್ನು ಇಲ್ಲಿಯವರೆಗೂ ತೆರೆವುಗೊಳಿಸಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಿದರು.
ಸಚಿವರು, ಅಧಿಕಾರಿಗಳು ಶೆಡ್ ಅನ್ನು ತೆರವುಗೊಳಿಸಿ ಶಾಲಾ ಕಟ್ಟಡ ಕಾಮಗಾರಿಯನ್ನು ಆರಂಭಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ಈಗಾಗಲೇ ಸಾಕಷ್ಟು ಗಡುವು ನೀಡಿದ್ದು, ತೆರವುಗೊಳಿಸಿಲ್ಲ. ತೆರವುಗೊಳಿಸದಿದ್ದರೆ ಪೋಷಕರು ಹಾಗೂ ಸಂಘಟನೆಗಳ ನೇತೃತ್ವದಲ್ಲಿ ತೆರವು ಮಾಡುವುದಾಗಿ ತಿಳಿಸಿದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತವೇ ತೆರವುಗೊಳಿಸಲು ಮುಂದಾಗಿದ್ದು, 15 -20 ದಿನದಲ್ಲಿ ಪೊಲೀಸ್ ಬಂದೋಬಸ್ತಿನೊಂದಿಗೆ ತೆರವುಗೊಳಿಸುವುದಾಗಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ರಾಯಚೂರು | ಎಡದಂಡೆ ನೀರಿನ ಸಮಸ್ಯೆ : ಸಿಎಂ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಬಸವರಾಜ ಕಳಸ, ಅಶೋಕ ಕುಮಾರ ಜೈನ್, ಶಿವುಕುಮಾರ ಯಾದವ್ , ಜಾನ್‌ವೇಸ್ಲಿ, ವಿರೇಶ್ ಹೀರಾ, ಶಿವುಕುಮಾರ ಮ್ಯಾಗಳಮನೆ, ಎಸ್.ನರಸಿಂಹಲು , ಕೆ.ರಂಗನಾಥ, ಇಮ್ರಾನ್ ಬಡೆಸಾಬ್, ಎನ್.ಆರ್.ರಮೇಶ್, ಸಾಧೀಕ್ ಪಾಷ, ಕೊಂಡಪ್ಪ, ಫಕ್ರುದ್ದೀನ್ ಅಲಿ, ಅಹ್ಮದ್ ಜಿ.ನರಸಿಂಹ, ಖಲೀಲ್ ಪಾಷಾ ಸೇರಿದಂತೆ ಅನೇಕರು ಇದ್ದರು.
