ಮುಡಾದಿಂದ ನೀಡಲಾದ 14 ಬದಲಿ ನಿವೇಶನಗಳನ್ನು ವಾಪಸ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ ಎಂ ಪಾರ್ವತಿ ಬರೆದ ಪತ್ರವನ್ನು ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮುಡಾ ಆಯುಕ್ತರಿಗೆ ಮಂಗಳವಾರ ಸಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಡಾ ಆಯುಕ್ತ ರಘುನಂದನ್, “ಪಾರ್ವತಿ ಅವರ ಪರವಾಗಿ ಡಾ. ಯತೀಂದ್ರ ಪತ್ರವನ್ನು ನೀಡಿದ್ದಾರೆ. ಈ ಕುರಿತು ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಜರುಗಿಸುತ್ತೇವೆ” ಎಂದಿದ್ದಾರೆ.
“ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ಕ್ಕೆ ಸಂಬಂಧಿಸಿ ಲೋಕಾಯುಕ್ತ ಪೊಲೀಸರು ಕೆಲವು ದಾಖಲೆಗಳನ್ನು ಕೇಳಿದ್ದು, ತನಿಖೆಗೆ ಸಹಕಾರ ನೀಡುತ್ತಿದ್ದೇವೆ. ಇ.ಡಿ. ಯಿಂದ ಈವರೆಗೆ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ” ಎಂದು ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ?
“ನನ್ನ ಪತಿಯಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕವೂ ಅಂಟಿಕೊಳ್ಳದಂತಹ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡಬಾರದು ಎಂಬ ನಿರ್ಧಾರಕ್ಕೆ ಬದ್ಧಳಾಗಿ ಬದುಕಿದವಳು. ನಾನೆಂದೂ ಮನೆ, ಆಸ್ತಿ, ಚಿನ್ನ, ಸಂಪತ್ತನ್ನು ಬಯಸಿದವಳಲ್ಲ. ಯಾವುದೇ ಕಾರಣಕ್ಕೂ ನನ್ನಿಂದ ಅವರ ರಾಜಕೀಯ ಜೀವನಕ್ಕೆ ಒಂದು ಸಣ್ಣ ಹನಿಯಷ್ಟೂ ಕಳಂಕ ತಟ್ಟಬಾರದೆಂದು ಎಚ್ಚರಿಕೆಯಿಂದ ನಡೆದುಕೊಂಡವಳು. ನನ್ನ ಪತಿಗೆ ರಾಜ್ಯದ ಜನತೆ ಹರಿಸುತ್ತಾ ಬಂದ ಪ್ರೀತಿ ಅಭಿಮಾನಗಳನ್ನು ದೂರದಿಂದಲೇ ಕಂಡು ಸಂತೋಷ ಮತ್ತು ಹೆಮ್ಮೆ ಪಟ್ಟವಳು. ಹೀಗಿದ್ದರೂ ಮೈಸೂರಿನ ಮುಡಾ ನಿವೇಶನಕ್ಕೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳಿಂದ ನಾನು ಘಾಸಿಗೊಂಡಿದ್ದೇನೆ. ನನ್ನ ಸ್ವಂತ ಸೋದರ ಅರಿಶಿನ – ಕುಂಕುಮದ ಭಾಗವಾಗಿ ಕೊಟ್ಟ ಜಮೀನಿನ ಬಾಬ್ತು ಪಡೆದ ನಿವೇಶನಗಳು ಇಷ್ಟೊಂದು ರಾದ್ಧಾಂತವಾಗುತ್ತದೆ. ಇದರಿಂದ ನನ್ನ ಪತಿಯವರು ಅನ್ಯಾಯವಾಗಿ ಆರೋಪಗಳನ್ನು ಎದುರಿಸುವಂತಾಗಬಹುದು ಎನ್ನುವುದನ್ನು ನಾನು ಊಹಿಸಿದವಳೂ ಅಲ್ಲ. ನಮಗೆ ದೊರಕಿರುವ 14 ಸೈಟ್‌ಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದೇನೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಲಿ” ಎಂದು ಸುದೀರ್ಘ ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಆಗ್ರಹಿಸಿದ್ದಾರೆ.