ಪ್ರಜಾಪ್ರಭುತ್ವದ ಬುಡವನ್ನೇ ಅಲ್ಲಾಡಿಸುವ ಬಿಜೆಪಿಯ ದ್ವೇಷ ರಾಜಕಾರಣಕ್ಕೆ; ಕರ್ನಾಟಕದ ಜನತೆಯ ಸಂವಿಧಾನಾತ್ಮಕ ಆಯ್ಕೆಗೆ ಮೋದಿ ಮತ್ತು ಶಾ ಒಡ್ಡಿರುವ ಸವಾಲಿಗೆ; ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂಬ ನೆಪದಲ್ಲಿ ನಡೆಸುತ್ತಿರುವ ನಿರಂಕುಶ ಪ್ರಭುತ್ವಕ್ಕೆ; ಮಾಧ್ಯಮಗಳ ಮೂಲಕ ನಡೆಸುತ್ತಿರುವ ವೈದಿಕಶಾಹಿ ದಾಳಿಗೆ- ಉತ್ತರಿಸುವ ಕಾಲ ಬಂದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಬದಲಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯವು(ಇಡಿ) ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಈಗಾಗಲೇ, ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತದ ಮೈಸೂರು ಜಿಲ್ಲಾ ಘಟಕದ ಪೊಲೀಸರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ್ದಾರೆ. ಅದನ್ನು ಆಧಾರವಾಗಿಟ್ಟುಕೊಂಡು ಜಾರಿ ನಿರ್ದೇಶನಾಲಯ(ಇಡಿ) ಬೆಂಗಳೂರು ಪ್ರಾದೇಶಿಕ ಕಚೇರಿಯ ಅಧಿಕಾರಿಗಳು, ಜಾರಿ ನಿರ್ದೇಶನಾಲಯದ ಪ್ರಕರಣದ ಮಾಹಿತಿ ವರದಿ(ಇಸಿಐಆರ್) ದಾಖಲಿಸಿದ್ದಾರೆ.
ಮೈಸೂರು ಲೋಕಾಯುಕ್ತ ಎಫ್ಐಆರ್ ದಾಖಲಿಸುತ್ತಿದ್ದಂತೆ, ಅದರ ಬೆನ್ನಿಗೇ ಮುಖ್ಯಮಂತ್ರಿಗಳ ವಿರುದ್ಧ ಸ್ನೇಹಮಯಿ ಕೃಷ್ಣ ಇಡಿಗೂ ದೂರು ನೀಡಿದ್ದರು. ಆದರೆ, ಇಡಿ ಅಧಿಕಾರಿಗಳು ಕೃಷ್ಣ ಅವರ ದೂರಿನ ಮೇರೆಗೆ ಕ್ರಮ ಕೈಗೊಳ್ಳದೆ, ಸಿಎಂ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮೈಸೂರು ಮುಡಾ ಹಗರಣದಲ್ಲಿ ಇದ್ದಕ್ಕಿದ್ದಂತೆ ಕೇಂದ್ರದ ಇಡಿ ಆಸಕ್ತಿ ತೋರಿದ್ದು ಏಕೆ ಎನ್ನುವ ಪ್ರಶ್ನೆ ಈಗ ಸಾರ್ವಜನಿಕ ವಲಯದಿಂದ ಕೇಳಿಬರತೊಡಗಿದೆ. ಕಾನೂನು ತಜ್ಞರು, ‘ಇಡಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎನ್ನುತ್ತಾರೆ. ಆದರೆ ಇಡಿ ಇತರ ತನಿಖಾ ಸಂಸ್ಥೆಗಳು ದಾಖಲಿಸಿದ ಎಫ್ಐಆರ್‍ಗಳನ್ನು ಅವಲಂಬಿಸಿ ತನಿಖೆಗೊಳಪಡಿಸಿದ ಉದಾಹರಣೆಗಳಿವೆ ಎನ್ನುತ್ತದೆ.
ಜಾರಿ ನಿರ್ದೇಶನಾಲಯ(ಇಡಿ) ಭಾರತ ಸರ್ಕಾರದ ಕಾನೂನು ಜಾರಿ ಮತ್ತು ಆರ್ಥಿಕ ಗುಪ್ತಚರ ಸಂಸ್ಥೆಯಾಗಿದೆ. ಆದಾಯ ಇಲಾಖೆ, ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಇದು ಆರ್ಥಿಕ ಕಾನೂನುಗಳನ್ನು ಜಾರಿಗೊಳಿಸುವ ಮತ್ತು ಆರ್ಥಿಕ ಅಪರಾಧಗಳನ್ನು ತಡೆಗಟ್ಟುವ ಕೆಲಸ ಮಾಡುತ್ತದೆ. ಜಾರಿ ನಿರ್ದೇಶನಾಲಯದ ಪ್ರಕರಣದ ಮಾಹಿತಿ ವರದಿ(ಇಸಿಐಆರ್) ಶಂಕಿತ ಮನಿ ಲಾಂಡರಿಂಗ್ ಅಪರಾಧಗಳಿಗೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸಲು ಬಳಸುವ ಆಂತರಿಕ ದಾಖಲೆಯಾಗಿದೆ. ಇದು ಪೊಲೀಸರಿಗೆ ಸಲ್ಲಿಸಲಾದ ಎಫ್ಐಆರ್‍ನಂತೆಯೇ ಇದ್ದು, ಶಾಸನಬದ್ಧ ದಾಖಲೆಯಲ್ಲ, ಔಪಚಾರಿಕವಾಗಿ ನೋಂದಾಯಿಸುವ ಅಗತ್ಯವೂ ಇಲ್ಲ ಎಂದು ಹೇಳಲಾಗುತ್ತದೆ. ಇಲ್ಲಿಯವರೆಗೆ ಇಡಿ, ಈ ಇಸಿಐಆರ್ ಅಡಿ 5,906 ಪ್ರಕರಣಗಳನ್ನು ದಾಖಲಿಸಿ, 513 ವ್ಯಕ್ತಿಗಳನ್ನು ಬಂಧಿಸಿದೆ ಎನ್ನುವ ಮಾಹಿತಿ ಇದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹರಿಯಾಣದಲ್ಲಿ ರಾಹುಲ್‌ಗೆ ಅವಕಾಶ ಮಾತ್ರವಲ್ಲ, ಎಚ್ಚರಿಕೆಯೂ ಇದೆ
ಮೈಸೂರು ಮುಡಾ ಪ್ರಕರಣದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪವಿದೆ. ರಾಜಕೀಯ ಪ್ರಭಾವ ಬೀರಿದ ಆರೋಪವೂ ಇದೆ. ಆದರೆ ಅಕ್ರಮ ಹಣ ವರ್ಗಾವಣೆ ಎಲ್ಲಿದೆ? ಇಡಿಗೆ ಮುಡಾ ಸೈಟು ಹಂಚಿಕೆಯ ವಿವಾದದಲ್ಲಿ ಮೂಗು ತೂರಿಸುವ ಅಗತ್ಯವೇನಿದೆ?
ಇದು ಕರ್ನಾಟಕದ ಜನತೆಯ ಪ್ರಶ್ನೆಯಷ್ಟೇ ಅಲ್ಲ, ಇಡೀ ದೇಶದ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರವಾಗಿ ಜಾರಿ ನಿರ್ದೇಶನಾಲಯ ನಿರ್ವಹಿಸಿದ ಹತ್ತು ಹಲವು ಪ್ರಕರಣಗಳೇ ಅದನ್ನು ಬಹಿರಂಗಪಡಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಇಡಿ ಕೇವಲ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ, ಕೇಂದ್ರದಲ್ಲಿ ಆಡಳಿತದಲ್ಲಿರುವವರ ಆಜ್ಞೆ-ಆದೇಶಗಳನ್ನು ಪಾಲಿಸುತ್ತ, ಬೇಕೆಂದಾಗ ಬೇಕಾದವರ ಮೇಲೆ ಬಳಸುವ ಅಸ್ತ್ರವಾಗಿ ಮಾರ್ಪಟ್ಟಿದೆ ಎನ್ನುವ ಆರೋಪಗಳೂ ಕೇಳಿಬರತೊಡಗಿವೆ.
ಕಳೆದ ಹತ್ತು ವರ್ಷಗಳ ಮೋದಿ ಆಳ್ವಿಕೆಯಲ್ಲಿ, ಪ್ರಧಾನಿಗಳಿಂದ ಇಡಿ ಸುಪಾರಿ ಸ್ವೀಕರಿಸಿದ ಹಲವು ನಿದರ್ಶನಗಳು ದೇಶದ ಜನರ ಕಣ್ಣಮುಂದಿವೆ. ಅದರಲ್ಲೂ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಜಾರ್ಖಂಡ್ ಮುಕ್ತಿಮೋರ್ಛಾ ಪಕ್ಷ ಕಟ್ಟಿ ಮುಖ್ಯಮಂತ್ರಿಯಾದ ಹೇಮಂತ್ ಸೊರೇನ್ ಅವರ ಮೇಲೆ ಇಡಿ ಛೂ ಬಿಟ್ಟು, ಜೈಲಿಗಟ್ಟಿದ್ದು- ದ್ವೇಷ ರಾಜಕಾರಣದ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುತ್ತದೆ.
2014ರಲ್ಲಿ ಮೋದಿ ಪ್ರಧಾನಿಯಾದಾಗ, ದೇಶ ಬದಲಾವಣೆ ಕಾಣುತ್ತದೆ ಎಂದು ಜನ ನಿರೀಕ್ಷಿಸಿದ್ದರು. ಆದರೆ, ಅವರು ಪ್ರಜಾಪ್ರಭುತ್ವದ ಮೂಲ ತತ್ವಕ್ಕೆ ವಿರುದ್ಧವಾಗಿ ನಡೆಯುತ್ತ, ವಿರೋಧ ಪಕ್ಷಗಳನ್ನೇ ಇಲ್ಲವಾಗಿಸುವತ್ತ ಗಮನ ಹರಿಸಿದ್ದರು. ತಮ್ಮ ವಿರುದ್ಧ ಮಾತನಾಡುವ, ವಿರೋಧಿಸುವ, ಟೀಕಿಸುವ, ವಿಮರ್ಶಿಸುವ ವ್ಯಕ್ತಿಗಳನ್ನು ಸಹಿಸದಾದರು. ತಮ್ಮನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿದ ಮತದಾರನಿರಲಿ, ಪ್ರತಿಭಟಿಸುವ ಹೋರಾಟಗಾರರಾಗಿರಲಿ, ಸುದ್ದಿ ಮಾಧ್ಯಮಗಳ ಪತ್ರಕರ್ತರಾಗಿರಲಿ ಯಾರೂ ಪ್ರಶ್ನಿಸುವಂತಿಲ್ಲ ಎಂಬ ಧೋರಣೆ ತಳೆದರು. ಅಷ್ಟೇ ಅಲ್ಲ, ವಿರೋಧ ಪಕ್ಷಗಳ ರಾಜಕೀಯ ನಾಯಕರನ್ನು ಬಗ್ಗು ಬಡಿಯಲು ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡರು. 2024ರ ಹೊತ್ತಿಗೆ ಸರ್ವಾಧಿಕಾರಿಯಾಗಿ ಮಾರ್ಪಟ್ಟಿದ್ದರು.
ಅದರಲ್ಲೂ ಮೋದಿಯವರ ಆಡಳಿತ, ಭ್ರಷ್ಟಾಚಾರ, ಹಿಂದುತ್ವದ ವಿರುದ್ಧ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದ ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯನವರನ್ನು ಕಂಡರೆ, ಉರಿದು ಬೀಳುತ್ತಿದ್ದರು. ಕಳೆದ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಬ್ಬರ ತಗ್ಗಿಸಿದ್ದನ್ನು, ಬಿಜೆಪಿಯ ನಾಗಾಲೋಟಕ್ಕೆ ತಡೆಯೊಡ್ಡಿದ್ದನ್ನು ಸಹಿಸಿಕೊಳ್ಳದಾದರು. ಸಮಯಕ್ಕಾಗಿ ಕಾದಿದ್ದರು.
ಅದಕ್ಕೆ ತಕ್ಕಂತೆ ಸಿದ್ದರಾಮಯ್ಯನವರು ಮೈಸೂರಿನ ಮುಡಾ ಹಗರಣ ಹೊರಬಿತ್ತು. ರಾಜ್ಯ ಬಿಜೆಪಿ ನಾಯಕರು ಹೊಂದಾಣಿಕೆ ರಾಜಕಾರಣದಲ್ಲಿ ಮುಳುಗೇಳುತ್ತಿದ್ದಾಗ, ದಿಲ್ಲಿಯಿಂದ ಹುಕುಂ ನೀಡಿ ಪಾದಯಾತ್ರೆ ಮಾಡಿಸಿದರು. ರಾಜ್ಯಪಾಲರನ್ನು ಬಳಸಿಕೊಂಡು ಕೋರ್ಟಿಗೆಳೆದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಎಫ್ಐಆರ್ ದಾಖಲಾಗುವಂತೆ ನೋಡಿಕೊಂಡರು.
ಇಷ್ಟಕ್ಕೇ ಸುಮ್ಮನಾಗದ ದೆಹಲಿಯ ಬಿಜೆಪಿ ನಾಯಕರು ಈಗ ಇಡಿಯನ್ನು ಛೂ ಬಿಟ್ಟಿದ್ದಾರೆ. ಇಡಿ ಅಧಿಕಾರಿಗಳು ತನಿಖೆಯ ನೆಪದಲ್ಲಿ ಸಿದ್ದರಾಮಯ್ಯರಿಗೆ ತೊಂದರೆ ಕೊಡಬಹುದು, ಬಂಧಿಸಿ ಜೈಲಿಗಟ್ಟಬಹುದು. ಅವರೂ ಕೂಡ ಕೇಜ್ರಿವಾಲ್ ಮತ್ತು ಸೊರೇನ್ ರೀತಿ ಜೈಲಿನಿಂದ ಹೊರಬರಬಹುದು.
ಆದರೆ, ಪ್ರಜಾಪ್ರಭುತ್ವದ ಬುಡವನ್ನೇ ಅಲ್ಲಾಡಿಸುವ ಬಿಜೆಪಿಯ ದ್ವೇಷ ರಾಜಕಾರಣಕ್ಕೆ; ಕರ್ನಾಟಕದ ಜನತೆಯ ಸಂವಿಧಾನಾತ್ಮಕ ಆಯ್ಕೆಗೆ ಮೋದಿ ಮತ್ತು ಶಾ ಒಡ್ಡಿರುವ ಸವಾಲಿಗೆ; ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂಬ ನೆಪದಲ್ಲಿ ನಡೆಸುತ್ತಿರುವ ನಿರಂಕುಶ ಪ್ರಭುತ್ವಕ್ಕೆ; ಮಾಧ್ಯಮಗಳ ಮೂಲಕ ನಡೆಸುತ್ತಿರುವ ವೈದಿಕಶಾಹಿ ದಾಳಿಗೆ- ಉತ್ತರಿಸುವ ಕಾಲ ಬಂದಿದೆ. ಕರ್ನಾಟಕವನ್ನು ಕರ್ನಾಟಕವನ್ನಾಗಿಯೇ ಉಳಿಸಿಕೊಳ್ಳಬೇಕಾದ ತುರ್ತಿದೆ.

ದ್ವೇಷ ರಾಜಕಾರಣಕ್ಕೆ ಈಗಾಗಲೇ ಕರ್ನಾಟಕದ ಜನತೆ ವಿಧಾನಸಭೆ ಚುಣಾವಣೆಯಲ್ಲಿ ಸರಿಯಾದ ಉತ್ತರ ನೀಡಿದ್ದಾರೆ ಆದರೂ ಅದನ್ನೆ ಮುಂದುವರೆಸಿದರೆ ಅದಕ್ಕೆ ತಕ್ಕ ಉತ್ತರ ಮಂಬರುವ ದಿನಗಳಲ್ಲಿ ಎದುರಿಸಬೇಕಾಗುತ್ತದೆ.