ಖಾನಾಪುರ ತಾಲೂಕಿನ ಪಶ್ಚಿಮ ಘಟ್ಟದ ಕಾಡಂಚಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜದ ರೈತ ಸಂಘಟನೆಯ ಮುಖಂಡ ಸಿದ್ದಗೌಡ ಮೋದಗಿ ಅವರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಡಂಚಿನ ರೈತರು ವನ್ಯ ಪ್ರಾಣಿಗಳ ಹಾವಳಿಯಿಂದ ಬೆಳೆನಷ್ಟವಾಗಿದ್ದು, ಅರಣ್ಯ ಇಲಾಖೆಯಿಂದ ಪರಿಹಾರ ಬಿಡುಗಡೆಗೊಳಿಸಬೇಕು. ಅರ್ಜಿ ಸಲ್ಲಿಸಿದ ರೈತರಿಗೆ ಇವತ್ತಿನವರೆಗೂ ಏಕೆ ಪರಿಹಾರ ಕೊಟ್ಟಿಲ್ಲಾ ಎಂಬುದರ ಬಗ್ಗೆ ಇಲಾಖೆಯ ಮುಖ್ಯಸ್ಥರು ಉತ್ತರಿಸಬೇಕು” ಎಂದು ಆಗ್ರಹಿಸಿದರು.
“ಕಾಡು ಪ್ರಾಣಿಗಳ ಹಾವಳಿಯಿಂದ ಉಂಟಾದ ಬೆಳೆನಾಶ. ಮಾನವನ ಪ್ರಾಣಹಾನಿ, ಸಾಕು ಪ್ರಾಣಿಗಳ ಪ್ರಾಣಹಾನಿ, ಆಸ್ತಿ-ಪಾಸ್ತಿ ಹಾನಿ, ಗಾಯಗೊಂಡವರಿಗೆ ನೀಡಲಾಗುತ್ತಿರುವ ಧನ- ಪರಿಹಾರ ಮೊತ್ತವನ್ನು ಪರಿಷ್ಕರಿಸಬೇಕು” ಎಂದು ಒತ್ತಾಯಿಸಿದರು.
“ಈ ಭಾಗದ ಹಳ್ಳಿ ಗ್ರಾಮಗಳ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು, ಶಾಲೆ ಕಾಲೇಜು ಮಕ್ಕಳಿಗೆ ಬೆಳಿಗ್ಗೆ, ಮದ್ಯಾಹ್ನ ಮತ್ತು ಸಾಯಂಕಾಲ ಸರಿಯಾದ ಸಮಯಕ್ಕೆ ಬಸ್ಸ್ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮಗಳಿಗೆ ಸಮರ್ಪಕ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು. ಈ ಭಾಗದಲ್ಲಿ ಆರೋಗ್ಯ ಪ್ರಾಥಮಿಕ ಕೇಂದ್ರ, ಉಪ ಮಾರುಕಟ್ಟೆ ಕೇಂದ್ರಗಳನ್ನು ಪ್ರಾರಂಭಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಹಲವು ಇಲಾಖೆಗಳ ಖಾಲಿ ಹುದ್ದೆ ನೇಮಕಕ್ಕೆ ಆಗ್ರಹಿಸಿ ಪತ್ರ ಚಳವಳಿ
“ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ” ಗೃಹಲಕ್ಷ್ಮಿ ಯೋಜನೆ” ನೀರಿಕ್ಷಿತ ಪ್ರಮಾಣದಲ್ಲಿ ಅನುಷ್ಠಾನಗೊಂಡಿರುವುದಿಲ್ಲ. ಕೂಡಲೇ ಅರ್ಹ ಫಲಾನುಭವಿಗಳಿಗೆ ತಲಪುವಂತೆ ವ್ಯವಸ್ಥೆ ಮಾಡಬೇಕು. ತಮ್ಮ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಬೇಕು. ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಾಡುವಂತೆ ರೈತರ ಪರವಾಗಿ ಸರ್ಕಾರಕ್ಕೆ ಪತ್ರ ಬರೆಯಬೇಕು. ಈ ಭಾಗದಲ್ಲಿರುವ ರೆಸಾರ್ಟ್, ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರವುಗೊಳಿಸಲು ತುರ್ತು ಕ್ರಮವಹಿಸಬೇಕು” ಎಂದು ಆಗ್ರಹಿಸಿದರು.
ಈ ಕುರಿತು ಈ ದಿನ.ಕಾಮ್ ಜೊತೆ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಮಾತನಾಡಿ, “ಖಾನಾಪುರ ತಾಲೂಕಿನ ಪಶ್ಚಿಮ ಘಟ್ಟದ ರೈತರ ಸಮಸ್ಯೆಗಳು ಈಡೇರದಿದ್ದಲ್ಲಿ ತಹಶೀಲ್ದಾರ್ ಕಚೇರಿ ಎದುರು ಖಾನಾಪುರ ತಾಲೂಕಿನ ರೈತ ಸಂಘದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.