ಲಡಾಖ್ ಜನರು ಹೋರಾಟ ಮಾಡುತ್ತಿರುವುದು ಯಾಕೆ? ಮೋದಿ ಸರ್ಕಾರ ವಾಂಗ್ಚುಕ್‌ರನ್ನು ಬಂಧಿಸಿದ್ದೇಕೆ?

Date:

Advertisements

ಭಾರತದ ತುತ್ತ ತುದಿಯ ರಾಜ್ಯ ಜಮ್ಮು-ಕಾಶ್ಮೀರ. ಈಗ ಅದು ಪೂರ್ಣ ಪ್ರಮಾಣದ ರಾಜ್ಯವಾಗಿ ಉಳಿದಿಲ್ಲ. ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಒಡೆದುಹೋಗಿದೆ. 1957ರಿಂದಲೂ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಆ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2019ರಲ್ಲಿ ಕಸಿದುಕೊಂಡಿತು. ರಾಜ್ಯವನ್ನು ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳಾಗಿ ವಿಂಗಡಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಿತು. ರಾಜ್ಯವನ್ನು ತನ್ನ ಅಧೀನಕ್ಕೆ ಪಡೆದುಕೊಂಡಿತು. ವಿಧಾನಸಭೆಯೂ ಅಸ್ತಿತ್ವದಲ್ಲಿಲ್ಲದ ಕಾಲದಲ್ಲಿ ತನ್ನದೇ ರಾಜ್ಯಭಾರ ನಡೆಸಿತು. ಕೇಂದ್ರದ ನಡೆಯನ್ನು ಖಂಡಿಸಿದವರನ್ನು ಸೆರೆಗೆ ದೂಡಿತು. ವಿಪಕ್ಷಗಳ ನಾಯಕರನ್ನು ಗೃಹಬಂಧನದಲ್ಲಿಟ್ಟು, ತನ್ನ ಸರ್ವಾಧಿಕಾರಿ ಧೋರಣೆ ತೋರಿಸಿತು.

ಆದರೀಗ, ಚುನಾವಣೆ ನಡೆಯುತ್ತಿದೆ. ಇದೇ ವೇಳೆ ಗಂಭೀರ ಪ್ರಶ್ನೆಗಳು ಸವಾಲುಗಳು ಎದುರಾಗಿವೆ. ಒಂದು, ಲಡಾಖ್‌ನಲ್ಲಿ ಚೀನಾ ತನ್ನ ಸೇನಾ ನೆಲೆಗಳನ್ನು ಸ್ಥಾಪಿಸುತ್ತಿದೆ. ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿಕೊಳ್ಳುತ್ತಿದೆ. ಈ ವಿಚಾರವಾಗಿ ಮೋದಿ ಮೌನವಾಗಿದ್ದು, ದೇಶಾದ್ಯಂತ ಭಾರತದ ಭೂ ಪ್ರದೇಶದ ರಕ್ಷಣೆಗಾಗಿನ ಪ್ರಶ್ನೆ ಕೇಳಿಬರುತ್ತಿದೆ. ಮತ್ತೊಂದು, ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆ ಮತ್ತು ಜನರ ರಾಜಕೀಯ ಹಕ್ಕುಗಳನ್ನು ಮರಳಿ ನೀಡಬೇಕೆಂದು ಹೋರಾಟಗಳು ನಡೆಯುತ್ತಿವೆ. ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆಗಾಗಿ ಶಿಕ್ಷಣ ತಜ್ಞ, ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಅವರು ಲಡಾಖ್‌ನಿಂದ ದೆಹಲಿಗೆ ಪಾದಯಾತ್ರೆ ಹೊರಟಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜೈಲಿನಲ್ಲಿರಿಸಿದ್ದಾರೆ.

ಹಾಗಿದ್ರೆ ಈ ಸೋನಮ್ ವಾಂಗ್ ಚುಕ್ ಯಾರು?

Advertisements

ರಾಜ್ ಕುಮಾರ್ ಹಿರಾನಿ ಅವರ ಹಿಂದಿ ಚಿತ್ರ ‘ತ್ರೀ ಈಡಿಯಟ್ಸ್’ ಪ್ರೇಕ್ಷಕರ ಮನ ಗೆದ್ದಿದ್ದ ಸಿನಿಮಾ. ಆ ಚಿತ್ರದಲ್ಲಿ ಅಮೀರ್ ಖಾನ್ ಅವರು ನಿರ್ವಹಿಸಿದ ಫುನ್ಸುಖ್ ವಾಂಗ್ಚು ಕಥಾಪಾತ್ರಕ್ಕೆ ಸ್ಫೂರ್ತಿಯಾದ ವ್ಯಕ್ತಿಯೇ ಈ ಸೋನಮ್ ವಾಂಗ್ಚುಕ್. ಇವರು ಲಡಾಖ್‌ನ ಎಂಜಿನಿಯರ್ ಮತ್ತು ಶಿಕ್ಷಣ ಸುಧಾರಕ, ಲಡಾಖ್ ಪ್ರದೇಶದಲ್ಲಿ ಶಿಕ್ಷಣ ಮತ್ತು ಸುಸ್ಥಿರ ಅಭಿವೃದ್ಧಿಗೆ ಅವರ ನವೀನ ವಿಧಾನಗಳನ್ನು ಕೈಗೊಂಡವರು.

ಅಂದಹಾಗೆ, ಇದೇ ಸೋನಮ್ ವಾಂಗ್ಚುಕ್ ಅವರು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದು ಮಾಡಿದಾಗ, ಕೇಂದ್ರ ಸರ್ಕಾರದ ನಡೆಯನ್ನು ಬೆಂಬಲಿಸಿದ್ದರು. ಜೊತೆಗೆ, ಜಮ್ಮು-ಕಾಶ್ಮೀರಕ್ಕೂ ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ಹಕ್ಕುಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದರು. ಆದರೆ, ಈವರೆಗೆ, ಲಡಾಖ್‌ಗೆ 6ನೇ ವಿಧಿ ವಿಸ್ತರಣೆಗೊಂಡಿಲ್ಲ.

Raj Kumar Hirani 3 ಇಡಿಯಟ್ಸ್

ಸೋನಮ್ ವಾಂಗ್ಚುಕ್ ಅವರು ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆ, ರಾಜ್ಯ ಸ್ಥಾನಮಾನ ಹಾಗೂ ಆರನೇ ಶೆಡ್ಯೂಲ್ ಅಡಿ ಹಕ್ಕುಗಳನ್ನು ಒದಗಿಸಬೇಕು. ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸುತ್ತಿದ್ದಾರೆ. ಸಂವಿಧಾನದ 6ನೇ ವಿಧಿಯು ಬುಡಕಟ್ಟು ಪ್ರದೇಶಗಳಿಗೆ ಭೂ ರಕ್ಷಣೆ ಮತ್ತು ಸ್ವಾಯತ್ತತೆಯ ಹಕ್ಕನ್ನು ಖಾತ್ರಿಪಡಿಸುತ್ತದೆ. ಲಡಾಖ್ ದಕ್ಷಿಣಕ್ಕೆ ಬೃಹತ್ ಕೈಗಾರಿಕಾ ಸ್ಥಾವರ ಮತ್ತು ಉತ್ತರಕ್ಕೆ ಚೀನಾದ ಅತಿಕ್ರಮಣದಿಂದ ಪ್ರಧಾನ ಹುಲ್ಲುಗಾವಲು ಭೂಮಿಯನ್ನು ಕಳೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇನ್ನು ಲೇಹ್ ಮತ್ತು ಕಾರ್ಗಿಲ್‌ಗೆ ಪ್ರತ್ಯೇಕ ಲೋಕಸಭಾ ಸ್ಥಾನಗಳು, ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹಾಗೂ ಲಡಾಖ್‌ನಲ್ಲಿ ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಸಾರ್ವಜನಿಕ ಸೇವಾ ಆಯೋಗ ಬೇಕು ಎಂದು ವಾಂಗ್ಚುಕ್ ಒತ್ತಾಯಿಸಿದ್ದಾರೆ. ಕೈಗಾರಿಕೀಕರಣದಿಂದ ಉಂಟಾದ ಪರಿಸರ ಹಾನಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸದೆ 13 ಗಿಗಾವ್ಯಾಟ್ ಯೋಜನೆಯನ್ನು ಸರ್ಕಾರ ಹೇರುತ್ತಿದೆ ಎಂದು ಟೀಕಿಸಿದ್ದಾರೆ.

ಹೀಗಾಗಿಯೇ, ಸರ್ಕಾರದ ಧೋರಣೆಗಳ ವಿರುದ್ಧ ಹಾಗೂ ಲಡಾಖ್‌ನಲ್ಲಿ ಉಂಟಾಗುತ್ತಿರುವ ಹವಾಮಾನ ಬಿಕ್ಕಟ್ಟಿನ ವಿರುದ್ಧ ವಾಂಗ್ಚುಕ್ ಅವರು 2024ರ ಮಾರ್ಚ್ 6 ರಂದು ಶೂನ್ಯ ತಾಪಮಾನದಲ್ಲಿ ಸಮುದ್ರ ಮಟ್ಟದಿಂದ 3,500 ಮೀಟರ್ ಎತ್ತರದಲ್ಲಿ ಬರೋಬ್ಬರಿ 21 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅವರ ಪ್ರತಿಭಟನೆಯನ್ನು ಬೆಂಬಲಿಸಿ 2,500ಕ್ಕೂ ಹೆಚ್ಚು ಜನರು ಬೀದಿಗಿಳಿದಿದ್ದರು. ಆದರೂ, ಅವರ ಹೋರಾಟಕ್ಕೆ ಮೋದಿ ಸರ್ಕಾರ ಸೊಪ್ಪು ಹಾಕಲಿಲ್ಲ. ಬದಲಾಗಿ, ಅವರ ಹೋರಾಟವನ್ನು ಹತ್ತಿಕ್ಕುವ ತಂತ್ರಗಳು ನಡೆದವು. ಮಾರ್ಚ್ 26ರಂದು ಉಪವಾಸದ ಕೊನೆಯ ದಿನ ಪ್ರತಿಭಟನಾಕಾರರೊಂದಿಗೆ ಲಡಾಖ್‌ನ ಗಡಿಗೆ ವಾಂಗ್ಚುಕ್‌ ಹೊರಟಿದ್ದರು. ಆಗಲೂ, ಅವರನ್ನು ತಡೆಯಲಾಗಿತ್ತು.

ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿದ್ದ ಸೋನಮ್, ತಮ್ಮ ಬೇಡಿಕೆಗಳಿಗೆ ಸಂಬಂಧಿಸುವಂತೆ, ಲಡಾಖ್ ನಾಯಕತ್ವದ ಜೊತೆ ಮಾತುಕತೆಗಳನ್ನು ಪುನರಾರಂಭಿಸುವಂತೆ ಕೇಂದ್ರವನ್ನು ಒತ್ತಾಯಿಸಿ ದೆಹಲಿಗೆ ಪಾದಯಾತ್ರೆ ಆರಂಭಿಸಿದ್ದರು. ವಾಂಗ್ಚುಕ್ ಮತ್ತು ಸುಮಾರು 120 ಲಡಾಖ್ ಮಂದಿ ಸೆಪ್ಟೆಂಬರ್ 1ರಂದು ಲೇಹ್‌ನಿಂದ ದೆಹಲಿಗೆ ಪಾದಯಾತ್ರೆ ಕೈಗೊಂಡಿದ್ದರು.

ಈ ಸುದ್ದಿ ಓದಿದ್ದೀರಾ? ದ್ವೇಷ ರಾಜಕಾರಣ | ಕಟಕಟೆಯಲ್ಲಿ ಮೂವರು ಸಿಎಂಗಳು…!

ಪಾದಯಾತ್ರೆಯಲ್ಲಿ 18 ರಿಂದ 80 ವರ್ಷ ವಯಸ್ಸಿನ ಲಡಾಖ್ ಜನರು ಸುಮಾರು 25 ದಿನಗಳ ಕಾಲ 750 ಕಿ.ಮೀ ಕಾಲ್ನಡಿಗೆಯ ಮೂಲಕ ಚಂಡೀಗಢವನ್ನ ತಲುಪಿದ್ದರು. ಈ ವೇಳೆಗೆ, ಅವರ ಕಾಲುಗಳಲ್ಲಿ ಬೊಬ್ಬೆಗಳು, ಬಿರುಕುಗಳ ಕಾಣಿಸಿಕೊಂಡಿದ್ದವು. ನೋವಿನ ಯಾತನೆಯಲ್ಲೂ ನಡೆದ ಅವರು ಸೋಮವಾರ ದೆಹಲಿ ತಲುಪಿದ್ದರು. ಆದರೆ, ಮೋದಿ ಸರ್ಕಾರ ಸೋನಮ್ ವಾಂಗ್ಚುಕ್ ಮತ್ತು ಲಡಾಖ್‌ನ ಸುಮಾರು 150 ಪ್ರತಿಭಟನಾಕಾರರನ್ನು ಸಿಂಘು ಗಡಿಯಲ್ಲಿ ಬಂಧಿಸಿದೆ.

ಈ ಬಗ್ಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ವಾಂಗ್ಚುಕ್, ”ನನ್ನ ಜತೆಗೆ 150 ಪಾದಯಾತ್ರಿಗಳನ್ನ ದೆಹಲಿಯ ಗಡಿಯಲ್ಲಿ ಪೊಲೀಸರು ಬಂಧಿಸುತ್ತಿದ್ದಾರೆ. ನನ್ನ ಜತೆಗೆ 80ರ ಹರೆಯದ ಅನೇಕ ಹಿರಿಯ ಪುರುಷರು ಮತ್ತು ಮಹಿಳೆಯರು ಹಾಗೂ ಕೆಲವು ಸೇನಾ ಯೋಧರು ಕೂಡ ಇದ್ದಾರೆ. ನಮ್ಮ ಭವಿಷ್ಯ ತಿಳಿದಿಲ್ಲ. ನಾವು ಬಾಪು ಅವರ ಸಮಾಧಿಯತ್ತ ಅತ್ಯಂತ ಶಾಂತಿಯುತ ಮೆರವಣಿಗೆ ಹೊರಟ್ಟಿದ್ದೆವು… ಆದರೆ, ನಮ್ಮನ್ನು ಬಂಧಿಸಲಾಗಿದೆ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವದ ತಾಯಿ…ಹೇ ರಾಮ್!” ಎಂದು ಬರೆದುಕೊಂಡಿದ್ದಾರೆ.

Article 370

ವಾಂಗ್ಚುಕ್ ಅವರ ಬಂಧನವನ್ನು ಖಂಡಿಸಿರುವ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ”ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಸೋನಮ್ ವಾಂಗ್ಚುಕ್ ಮತ್ತು ನೂರಾರು ಲಡಾಖ್ ಜನರನ್ನು ಪೊಲೀಸರು ಬಂಧಿಸಿರುವುದು ಸರಿಯಲ್ಲ. ಪ್ರಧಾನಿ ಮೋದಿ ಅವರೇ, ರೈತರ ಪ್ರತಿಭಟನೆಯು ನಿಮ್ಮ ಪಡೆಯನ್ನು ಬೇಧಿಸಿದಂತೆ, ಈ ನಿಮ್ಮ ಚಕ್ರವ್ಯೂಹವೂ ಮುರಿಯಲಿದೆ. ನಿಮ್ಮ ಅಹಂಕಾರವು ಕೂಡ… ಲಡಾಖ್ ಜನರ ಧ್ವನಿಯನ್ನು ನೀವು ಕೇಳಬೇಕಾಗುತ್ತದೆ” ಎಂದಿದ್ದಾರೆ.

ಮೋದಿ ಸರ್ಕಾರ ಅತಿರೇಕದ ಆಡಳಿತ ನಡೆಸುತ್ತಿರುವುದು, ನ್ಯಾಯಕ್ಕಾಗಿ ನಡೆಯುವ ಪ್ರತಿಭಟನೆಗಳನ್ನು ಹತ್ತಿಕ್ಕುವುದು, ದಮನ ಮಾಡುವುದನ್ನು ಮುಂದುವರೆಸಿದೆ. ಈ ಹಿಂದೆ ರೈತರ ಪ್ರತಿಭಟನೆಯನ್ನ ಹತ್ತಿಕ್ಕಿದ್ದ, ಮೋದಿ ಸರ್ಕಾರ ಇದೀಗ ಲೇಹ್-ಲಡಾಖ್ ಜನರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸೋನಮ್ ವಾಂಗ್ಚುಕ್ ಮತ್ತು ಇತರ 150 ಜನರನ್ನು ಬಂಧಿಸಿದೆ. ಭಾರತದ ರಾಜಧಾನಿಯನ್ನು ಪ್ರಜಾಸತ್ತಾತ್ಮಕ ಚಟುವಟಿಕೆಗಳಿಂದ ನಿರ್ಬಂಧಿಸಲಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X