ಹಠಾತ್ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ 14 ನಿವೇಶನಗಳನ್ನು ಹಿಂದಿರುಗಿಸಿದ್ದಾರೆ. ಈ ಕುರಿತು ಮುಡಾಗೆ ಪತ್ರ ಬರೆದಿರುವ ಅವರು, “ನಾನೆಂದೂ ಮನೆ, ಆಸ್ತಿ, ಚಿನ್ನ ಹಾಗೂ ಸಂಪತ್ತನ್ನು ಬಯಸಿದವಳಲ್ಲ. ಈ ನಿವೇಶನಗಳು ತೃಣಕ್ಕೆ ಸಮ. ಆತ್ಮ ಸಾಕ್ಷಿಯ ಕರೆಗೆ ಓಗೊಟ್ಟು ಪ್ರಜ್ಞಾಪೂರ್ವಕವಾಗಿ ಯಾರೊಂದಿಗೂ ಚರ್ಚಿಸದೆ ಸೈಟು ವಾಪಸು ಮಾಡಿದ್ದೇನೆ. ಇಡೀ ಪ್ರಕರಣದ ತನಿಖೆ ನಡೆಸಿ” ಎಂದು ತಿಳಿಸಿದ್ದಾರೆ.
ಸಿಎಂ ಪತ್ನಿ ಅವರು ಮುಡಾ ನಿವೇಶನ ಹಿಂದಿರುಗಿಸಿರುವ ಬೆಳವಣಿಗೆ ಬಗ್ಗೆ ನಾನಾ ಚರ್ಚೆಗಳು, ವ್ಯಾಖ್ಯಾನಗಳು ನಡೆಯುತ್ತಿವೆ. ಸಿಎಂ ಪತ್ನಿ ಅವರ ನಡೆ ಬಗ್ಗೆ ಜನಸಾಮಾನ್ಯರ, ಪ್ರಜ್ಞಾವಂತರ ಮನಸಲ್ಲಿ ಏನಿದೆ ಎಂಬುದನ್ನು ಈ ದಿನ.ಕಾಮ್ ಮುಂದಿಡುತ್ತಿದೆ.
ಹಿರಿಯ ಪತ್ರಕರ್ತ ಎನ್ ರವಿಕುಮಾರ್ ಈ ದಿನ.ಕಾಮ್ ಜೊತೆ ಮಾತನಾಡಿ, “ಸಿಎಂ ಪತ್ನಿ ಪಾರ್ವತಿ ಅವರು ಕಾನೂನು ವ್ಯಾಪ್ತಿಗೆ ಮೀರಿ ಸಂವೇದನಾಶೀಲವಾಗಿ ನಡೆದುಕೊಂಡಿದ್ದಾರೆ. 40 ವರ್ಷಗಳ ರಾಜಕೀಯದಲ್ಲಿ ತಮ್ಮ ಗಂಡ (ಸಿದ್ದರಾಮಯ್ಯ) ಎಂದೂ ಖಾಸಗಿ ವಿಚಾರಗಳಿಗೆ ತುತ್ತಾಗಿರಲಿಲ್ಲ. ಇಂತಹ ಒಂದು ಸಣ್ಣ ವಿಚಾರ ಇಷ್ಟು ದೊಡ್ಡದಾಗುತ್ತೆ ಅಂತ ಅವರಿಗೆ ಮೊದಲೇ ಗೊತ್ತಾಗಿದ್ದರೆ ಆ ಆಸ್ತಿಯ ವ್ಯಾಮೋಹವನ್ನೇ ಬಿಡುತ್ತಿದ್ದರು ಅನ್ನಿಸುತ್ತೆ. ಅವರು ಮನಸ್ಸಿಗೆ ಘಾಸಿಯಾಗಿಯೇ ಮರಳಿ ನಿವೇಶನ ಕೊಟ್ಟಿದ್ದಾರೆ” ಎಂದರು.
“ಮುಂದುವರಿದು, ಇದು ಅಧಿಕಾರಸ್ಥ ಕುಟುಂಬ ಎಂಬ ಕಾರಣಕ್ಕೆ ಈ ವಿಷಯ ದೊಡ್ಡದಾಗುತ್ತಿದೆ. ಪತ್ನಿಯಾದವರೂ ತಮ್ಮ ತವರು ಮನೆಯ ಜಮೀನನ್ನು ಹೊಂದಲೇಬಾರದಾ? ಅದರಲ್ಲಿ ಯಾವ ಅನ್ಯಾಯ ಅಡಗಿದೆ? ಕಾಣದ ಕೈಗಳ ಕೈವಾಡ ಇದನ್ನೆಲ್ಲ ವಿವಾದವನ್ನಾಗಿ ಮಾಡಿಸುತ್ತಿದೆ. ಒಬ್ಬ ಹೆಂಡತಿಯಾಗಿ ಗಂಡನ ಮೇಲೆ ಅಪವಾದ ತನ್ನಿಂದ ಬರಬಾರದು ಎಂಬ ಯೋಚನೆಯಿಂದ ಅವರು ಮುಡಾ ನಿವೇಶನ ಮರಳಿ ನೀಡಿದ್ದಾರೆ. ಇದನ್ನು ಮೊದಲೇ ಮಾಡಿದ್ದರೆ ಸಿದ್ದರಾಮಯ್ಯ ಅವರಿಗೆ ಇಷ್ಟೊಂದು ಸಮಸ್ಯೆ ಎದುರಾಗುತ್ತಿರಲಿಲ್ಲ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದ್ವೇಷ ರಾಜಕಾರಣಕ್ಕೆ ದಿಟ್ಟ ಉತ್ತರದ ಅಗತ್ಯವಿದೆ
ಗದಗ ಜಿಲ್ಲೆಯ ಹರ್ಲಾಪುರದ ದಲಿತ ಮುಖಂಡ ಶಿವಾನಂದ ಯಡಿಯಾಪುರ ಮಾತನಾಡಿ, “ಕಾನೂನು ಹೋರಾಟ ನಡೆಯುತ್ತಿರಬೇಕಾದರೆ ಮರಳಿ ನಿವೇಶನ ಕೊಡಬಾರದಿತ್ತು. ಜನರಿಗೆ ‘ಸಹಜವಾಗಿಯೇ ತಪ್ಪು ಮಾಡಿದ್ದಾರೆ, ಅದಕ್ಕೆ ಕೊಟ್ಟಿದ್ದಾರೆ ಬಿಡು’ ಎನ್ನುವ ಅಭಿಪ್ರಾಯ ಬರುತ್ತದೆ. ತಪ್ಪು ಮಾಡಿಲ್ಲದಿದ್ದರೆ ತನಿಖೆಯ ಫಲಿತಾಂಶವೇ ಉತ್ತರವಾಗುತ್ತಿತ್ತು” ಎಂದರು.
“ಕಾನೂನು ಹೋರಾಟದ ಮೂಲಕವೇ ಇದನ್ನು ಎದುರಿಸಿ ಜನರಿಗೆ ಸತ್ಯವನ್ನು ತಿಳಿಸಬೇಕು. ಈ ವಿವಾದವನ್ನು ಇಷ್ಟು ಬೆಳೆಯಲು ಬಿಡದೇ ಮುಡಾ ನಿವೇಶನ ವಾಪಸ್ ಮಾಡಿದ್ದರೆ ಇಷ್ಟು ರಗಳೆ ಇರುತ್ತಿರಲಿಲ್ಲ. ನಾವು ಏನೇ ಮಾತನಾಡಿದರೂ ಅವರು ಸಿದ್ದರಾಮಯ್ಯ ಅವರ ಪತ್ನಿ. ಅವರ ಮನಸಲ್ಲಿ ನಿಜಕ್ಕೂ ಏನಿದೆ ಎಂಬುದು ಯಾರು ಬಲ್ಲರು? ಜನಪರವಾಗಿರುವ ಮುಖ್ಯಮಂತ್ರಿಗೆ ಈ ರೀತಿ ಆಗಬಾರದಿತ್ತು ಎಂಬುದು ನಮಗೂ ನೋವಾಗಿದೆ. ಆದರೆ ಸತ್ಯ ಹೊರಗೆ ಬರಬೇಕು. ಇದರ ಹಿಂದೆ ಕುತಂತ್ರ ಇದ್ದರೆ ಅದು ಬಯಲಾಗಬೇಕು” ಎಂದು ಹೇಳಿದರು.

ಬರಹಗಾರ್ತಿ ಚೈತ್ರಿಕಾ ನಾಯ್ಕ ಹರ್ಗಿ ಮಾತನಾಡಿ, “ಸಿಎಂ ಸಿದ್ದರಾಮಯ್ಯ ಅವರ ಮೇಲೆ ಈವರೆಗೂ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿಲ್ಲ. ಸಹಜವಾಗಿಯೇ ಅವರ ಪತ್ನಿಗೆ ಈಗಿನ ವಿವಾದ ಭಾವನಾತ್ಮಕವಾಗಿ ನೋವು ಉಂಟು ಮಾಡಿದೆ ಅನ್ನಿಸುತ್ತೆ. ಗಂಡನ ಮೇಲೆ ಬರುತ್ತಿರುವ ಅಪವಾದಗಳನ್ನು ನಿಲ್ಲಿಸಲು ಮರಳಿ ನಿವೇಶನ ಕೊಟ್ಟಿರಬಹುದು” ಎಂದು ತಿಳಿಸಿದರು.
ಮುಂದುವರಿದು, “ಸಿದ್ದರಾಮಯ್ಯ ಅವರು ಯಾವತ್ತೂ ರಾಜಕಾರಣದಲ್ಲಿ ಕುಟುಂಬವನ್ನು ಬೆರೆಸಿದವರಲ್ಲ. ಈಗ ಏಕಾಏಕಿ ಹೆಂಡತಿ ಹೆಸರು ವಿವಾದದಲ್ಲಿ ತಳುಕು ಹಾಕಿಕೊಂಡಿದ್ದು, ಅವರ ಪತ್ನಿಗೂ ನೋವು ತಂದಿದೆ ಅನ್ನಿಸುತ್ತೆ. ಕಾನೂನು ಹೋರಾಟ ನಡೆಯಲಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕುಟುಂಬ ಚರ್ಚೆ ಇಲ್ಲಿಗೆ ನಿಲ್ಲಲಿ ಎಂಬ ಆಶಯವೂ ಅವರ ನಿರ್ಧಾರದ ಹಿಂದೆ ಇದೆ” ಎಂದು ಹೇಳಿದರು.

ಮೈಸೂರಿನ ಪುನೀತ್ ಮಾತನಾಡಿ, “ಸಿದ್ದರಾಮಯ್ಯ ಅವರು ಏನು ತಪ್ಪು ಮಾಡಿದ್ದಾರೆ? ಅವರ ಪತ್ನಿ ತಮ್ಮ ತವರು ಮನೆಯ ಆಸ್ತಿಯನ್ನು ಪಡೆಯಲೇಬಾರದಾ? ಇದೆಲ್ಲವೂ ಕುತಂತ್ರ ರಾಜಕಾರಣ ಅಷ್ಟೇ. ಮುಖ್ಯ ಮಾಧ್ಯಮಗಳು ಸಿದ್ದರಾಮಯ್ಯ ಅವರ ತಪ್ಪು ಏನಿದೆ ಇದರಲ್ಲಿ ಅಂತ ಜನರಿಗೆ ಹೇಳುತ್ತಿಲ್ಲ. ಎಲ್ಲವೂ ಬಿಜೆಪಿ-ಜೆಡಿಎಸ್ ಏನು ಆರೋಪ ಮಾಡುತ್ತೆ, ಅದನ್ನೇ ನಿಜವೆಂದು ಸುದ್ದಿ ಮಾಡುತ್ತಿವೆ. ಜನರ ಮನಸ್ಸಿನಲ್ಲಿ ತಪ್ಪು ಮಾಹಿತಿ ತುಂಬಲಾಗುತ್ತಿದೆ. ಇದೆಲ್ಲ ಅವರ ಪತ್ನಿಗೆ ಬೇಸರ ತರಿಸಿದೆ. ಇದಕ್ಕೆಲ್ಲ ನಾಂದಿ ಹಾಡಲು ಮರಳಿ ನಿವೇಶನ ಕೊಟ್ಟಿರಬಹುದು” ಎಂದು ತಿಳಿಸಿದರು.
“ಮಾಧ್ಯಮಗಳಲ್ಲಿ ಬರುವುದೇ ಸತ್ಯ ಎಂದು ನಂಬುವ ಜನರ ಸಂಖ್ಯೆ ಜಾಸ್ತಿ ಇದೆ. ಮುಖ್ಯಮಂತ್ರಿ ಎನ್ನುವುದಕ್ಕಿಂತ ಗಂಡನ ಬಗ್ಗೆ ನಿತ್ಯ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿರುವುದು ಯಾವುದೇ ಹೆಂಡತಿಗೂ ಸಹಿಸಿಕೊಳ್ಳಲು ಆಗುವುದಿಲ್ಲ. ಇದು ಕುಟುಂಬದ ವಿಚಾರ. ಅವರ ಹೆಂಡತಿ ತೀರ್ಮಾನವನ್ನು ನಾವು ಗೌರವಿಸಬೇಕು” ಎಂದು ಹೇಳಿದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.
ಈ ಕೆಲಸ ,ಹಗರಣ ಉಲ್ಬಣಗೊಳ್ಳುವುದಕ್ಕೆ ಮೋದಲೆ ಮಾಡಿ ಮಾದ್ಯಮದೋಂದಿಗೆ ಏಚ್ಚರಿಕೆ ಕೊಡಬಹುದಿತ್ತು…..