ಏಳೆಂಟು ತಿಂಗಳ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಎದುರುಗಡೆ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಕಲಬುರಗಿ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸುವುದರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಅಧ್ಯಕ್ಷ ಭೀಮಶೇಟ್ಟಿ ಯಂಪಳ್ಳಿ ಮಾತನಾಡಿ, “ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿರುವ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಕಳೆದ 7 ರಿಂದ 8 ತಿಂಗಳಿಂದ ವೇತನ ಪಾವತಿಸಿರುವುದಿಲ್ಲ ಈಗ ನಾಡಹಬ್ಬ ದಸರಾ ಹಬ್ಬ ಆಚರಣೆಗೆ ಹಣವಿಲ್ಲದೆ ನೌಕರರು ಅತ್ಯಂತ ಸಂಕಷ್ಟ ದಲ್ಲಿ ಒದ್ದಾಡುತ್ತಿದ್ದಾರೆ. ಮನೆ ಬಾಡಿಗೆ ಕೊಡಲು ಸಾಧ್ಯವಾಗದೇ ರಸ್ತೆ ಮೇಲೆ ಜೀವನ ಸಾಗಿಸುವ ಪರಿಸ್ಥಿತಿ ಬಂದಿದೆ. ಹಾಗಾಗಿ ಕಾರಣ ಕನಿಷ್ಠ 4 ತಿಂಗಳ ವೇತನವನ್ನಾದರೂ ಪಾವತಿಸಬೇಕು” ಎಂದು ಮನವಿ ಮಾಡಿದರು.
“ಜೇವರ್ಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿದ ಪರಶುರಾಮ್ ಮತ್ತು ಇಟಬಾಯಿ ಇವರ ಮೇಲೆ ಸುಳ್ಳು ಆರೋಪ ಹೊರಿಸಿ ಕೆಲಸದಿಂದ ತೆಗೆದಿರುವುದು ಖಂಡನೀಯ. ಹಾಗೂ ಆ ಸ್ಥಳದಲ್ಲಿ ಹೊಸದಾಗಿ ನೌಕರರನ್ನು ನೇಮಿಸಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಹಾಗಾಗಿ ಕೂಡಲೇ ಸಂತ್ರಸ್ತರನ್ನು ಸೇವೆಗೆ ನಿಯೋಜಿಸಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ಕಂದಾಯ ಇಲಾಖೆ ಮುಷ್ಕರ; ಸರ್ಕಾರದ ನಿರ್ಲಕ್ಷ್ಯಕ್ಕೆ ವ್ಯಾಪಕ ವಿರೋಧ, ಪ್ರಗತಿಪರ ಸಂಘಟನೆಗಳ ಬೆಂಬಲ
ಈ ಸಂದರ್ಭದಲ್ಲಿ ನರಸಮ್ಮ, ಕಲ್ಯಾಣಿ ಪೂಜಾರಿ, ನಾಗರತ್ನ ಮದನಕರ್, ಕಾಶಿನಾಥ ಬಂಡಿ, ನರಸಮ್ಮ ಚಂದನಕೇರಾ, ರವಿಚಂದ್ರನ ಸೇರಿದಂತೆ ಇತರರು ಇದ್ದರು.