ಚಿತ್ರದುರ್ಗ | ಸರ್ಕಾರಿ ವಿಜ್ಞಾನ ಕಾಲೇಜಿನ ಹಲವು ವಿಭಾಗಗಳಿಗೆ ಉಪನ್ಯಾಸಕರೇ ಇಲ್ಲ; ವಿದ್ಯಾರ್ಥಿಗಳ ಭವಿಷ್ಯವೇನು?

Date:

Advertisements

ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಪ್ರಾರಂಭವಾಗಿ ಸರಿಸುಮಾರು 75 ವರ್ಷಗಳಾಗಿ ಅಮೃತ ಮಹೋತ್ಸವ ಪೂರೈಸಿದೆ. ಸಹಜವಾಗಿ ವಯಸ್ಸಾಗುತ್ತಿದ್ದಂತೆ ಎಲ್ಲರೂ ಅವರಿಂದ ದೂರ ಸರಿಯುವ ಪರಿಪಾಠದಂತೆ 75 ತುಂಬಿರುವ ಕಾಲೇಜನ್ನೂ ಹಳೆಯದಾಯಿತೆಂದು ಪರಿಗಣಿಸಿ ಮುಚ್ಚುವ ಯೋಚನೆ ಎಲ್ಲರಲ್ಲೂ ಬಂದಿದೆಯೇ? ಎನ್ನುವ ಅನುಮಾನ ಕಾಡುತ್ತಿದೆ.

ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಕಾಲೇಜು ಹಲವು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡಿ ಹಲವರು ಅತ್ಯುನ್ನತ ಪದವಿಗಳನ್ನು ಅಲಂಕರಿಸಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಲು ವಿದ್ಯೆ ನೀಡಿದೆ. ಇಂತಹ ಕಾಲೇಜೊಂದು ಈಗ ಉಪನ್ಯಾಸಕರಿಲ್ಲದೆ ಸೊರಗಿದ್ದು, ಈ ಕಾರಣದಿಂದಾಗಿ ವಿದ್ಯಾರ್ಥಿಗಳ ದಾಖಲಾತಿಯೂ ಕೂಡ ಗಮನಾರ್ಹವಾಗಿ ಇಳಿದು ಹೋಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಶೈಕ್ಷಣಿಕ ಇಲಾಖೆ ಈ ಕಾಲೇಜನ್ನು ಮುಚ್ಚಿದರೂ ಆಶ್ಚರ್ಯಪಡಬೇಕಾಗಿಲ್ಲ.‌

ಚಿತ್ರದುರ್ಗ ವಿಜ್ಞಾನ ಕಾಲೇಜಿನಲ್ಲಿ ಹಲವು ವಿಭಾಗಗಳಿದ್ದು, ಈ ಮುಂಚೆ ವಿದ್ಯಾರ್ಥಿಗಳ ದಾಖಲಾತಿಯೂ ಹೆಚ್ಚಿನ ಸಂಖ್ಯೆಯಲ್ಲಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಉಪನ್ಯಾಸಕರಿಲ್ಲದೆ ಹಲವು ವಿಭಾಗಗಳಲ್ಲಿ ಉಪನ್ಯಾಸಕರ ಕೊರತೆ ಎದ್ದು ಕಾಣುತ್ತಿದೆ. ಕನಿಷ್ಠ ಅತಿಥಿ ಉಪನ್ಯಾಸಕರನ್ನೂ ಕೂಡ ನೇಮಿಸಿಕೊಳ್ಳಲು ನಿರ್ಲಕ್ಷ್ಯ ವಹಿಸಿರುವುದು  ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶಾತಿ ಪಡೆಯಲು ಅನುಮಾನಪಡುವಂತಹ ಪರಿಸ್ಥಿತಿ ಉಂಟಾಗಿ ವಿದ್ಯಾರ್ಥಿಗಳ ಸಂಖ್ಯೆಯು ಕಡಿಮೆಯಾಗಿ ಹೋಗಿದೆ. ಅಲ್ಲದೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Advertisements

ಈ ಬಗ್ಗೆ ಗಮನಹರಿಸಬೇಕಾಗಿದ್ದ ಸಚಿವರು, ಶಾಸಕರು, ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಕಾಲೇಜು ಪ್ರಾಂಶುಪಾಲರು ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ನಿರ್ಲಿಪ್ತರಾಗಿ ಕಾಲೇಜಿಗೆ ಬಂದೆವು-ಹೋದೆವು ಎನ್ನುವಂತಿರುವುದು ಬಡವರ ಮಕ್ಕಳ ಶಿಕ್ಷಣದ ಮೇಲೆ ಬರೆ ಎಳೆದಂತಾಗಿದೆ.

ಸರ್ಕಾರಿ ಕಾಲೇಜಿಗೆ ಉಪನ್ಯಾಸಕರೇ ಇಲ್ಲ 1

ಉಳ್ಳವರು, ಶ್ರೀಮಂತರು ಸಾವಿರಾರು, ಲಕ್ಷಾಂತರ ರೂಪಾಯಿ ದೇಣಿಗೆ, ಶುಲ್ಕ ನೀಡಿ ಖಾಸಗಿ ಕಾಲೇಜುಗಳಿಗೆ ಪ್ರವೇಶಾತಿ ಪಡೆಯುತ್ತಾರೆ. ಬಡವರ, ಕಾರ್ಮಿಕರ, ಕೂಲಿಕಾರರ ಅಸಹಾಯಕರ ಮಕ್ಕಳು ಸರ್ಕಾರಿ ವಿದ್ಯಾಸಂಸ್ಥೆಗಳನ್ನು ನಂಬಿ ಅಭ್ಯಸಿಸುತ್ತಾರೆ. ಈ ರೀತಿಯಲ್ಲಿ ಉಪನ್ಯಾಸಕರಿಲ್ಲದೇ ಕಾಲೇಜು ನೆಡೆಸುವುದು ಬಡವರ ಅಕ್ಷರಾಭ್ಯಾಸಕ್ಕೆ ತಣ್ಣೀರೆರೆಚಿದಂತಾಗಿದೆ. ಈ ರೀತಿಯ ನಿರ್ಲಕ್ಷ್ಯ ಧೋರಣೆ ಬಡವರ ಮಕ್ಕಳಿಗೆ  “ನೀವು ವಿಧ್ಯಾಭ್ಯಾಸ ಪಡೆಯುವಂತಿಲ್ಲ, ಅದಕ್ಕೆ ಅರ್ಹರಲ್ಲ. ಪುಸ್ತಕಗಳನ್ನು ಬದಿಗಿಟ್ಟು ಯಾವುದಾದರೂ ಕೂಲಿ ಕೆಲಸಗಳನ್ನು ಮಾಡಿಕೊಂಡು ಉಳ್ಳವರ, ಆಡಳಿತಶಾಹಿ, ನಿರಂಕುಶವಾದಿಗಳ ಸೇವೆ ಮಾಡುತ್ತಲಿರಿ” ಎಂಬುದನ್ನು ಪರೋಕ್ಷವಾಗಿ ಹೇಳಿದಂತಿದೆ.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪ್ರಕಾಶ್ ನಾಯ್ಕ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಾಲೇಜಿನಲ್ಲಿ ಬಹುತೇಕ ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಬಡ ವಿಧ್ಯಾರ್ಥಿಗಳಿಗೆ ಆಶಾಕಿರಣವಾಗಿದೆ. ರಾಜ್ಯ ಸರ್ಕಾರ ಯಾವುದೇ ಬಡ ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಬಯಸಿ ಬಂದಲ್ಲಿ ಅವರಿಗೆ ಪ್ರವೇಶ ನಿರಾಕರಿಸುವಂತಿಲ್ಲವೆಂದು ಆದೇಶಿಸಿದೆ. ಕಾಲೇಜಿನಲ್ಲಿ 2007-08 ರಿಂದಲೇ ರಸಾಯನಶಾಸ್ತ್ರ, ಬೌತಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಗಣಿತ ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು, ಇಡೀ ದಾವಣಗೆರೆ ವಿಶ್ವವಿದ್ಯಾಲಯಕ್ಕೇ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುತ್ತ ಬಂದಿದ್ದಾರೆ. ಈ ಸಾಧನೆಗೆ ಅತಿಥಿ ಮತ್ತು ಖಾಯಂ ಉಪನ್ಯಾಸಕರು ಕಾರಣಿಕರ್ತರಾಗಿದ್ದರು” ಎಂದು ಹೇಳಿದರು.

ಸರ್ಕಾರಿ ಕಾಲೇಜಿಗೆ ಉಪನ್ಯಾಸಕರೇ ಇಲ್ಲ 2

“ಈ ಬಾರಿ ಕೆಲವು ಕಾರಣಗಳಿಂದ ದಾಖಲಾತಿ ಕುಸಿದಿದ್ದು, ಕಾರ್ಯಭಾರ ಕಡಿಮೆಯಾಗಿದೆ. ಸ್ನಾತಕೋತರ ವಿಭಾಗದ ಕಾರ್ಯಾಭಾರದ ಮಾಹಿತಿಯನ್ನು ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಇಲಾಖೆಗೆ ಅಪ್ಲೋಡ್ ಮಾಡಿರುವ ಮಾಹಿತಿ ಇಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ತರಗತಿಗಳು ಶುರುವಾದರೂ ಅತಿಥಿ ಉಪನ್ಯಾಸಕರ ನೇಮಕಾತಿ ಬೇಗ ಪೂರ್ಣಗೊಂಡರೂ ಸ್ನಾತಕೊತ್ತರ ವಿಭಾಗಕ್ಕನುಗುಣವಾಗಿ ಕಾರ್ಯಾಭಾರಕ್ಕೆ ಅತಿಥಿ ಉಪನ್ಯಾಸಕರು ನೇಮಕವಾಗುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಸದ್ಯ ಅತಿ ಹೆಚ್ಚು ಆಯ್ಕೆಯ ಬಿಸಿಎಂ ವಿಭಾಗಕ್ಕೆ ದಾಖಲಾಗಿರುವ ಹೆಚ್ಚುವರಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದಿಂದ ಅನುಮತಿ ಪಡೆದು ಹೆಚ್ಚಿನ ತರಗತಿ ಮತ್ತು ಉಪನ್ಯಾಸಕರನ್ನು ಪೂರೈಸುವ ಮೂಲಕ ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ನೆರವಾಗಬೇಕಿದ್ದ ಪ್ರಾಂಶುಪಾಲರು ಹೆಚ್ಚುವರಿ ವಿದ್ಯಾರ್ಥಿಗಳನ್ನು ಪ್ರವೇಶಾತಿಯನ್ನು ರದ್ದುಗೊಳಿಸಿ, ಬೇರೆ ಕಾಲೇಜಿಗೆ ಹೋಗಲು ತಿಳಿಸುತ್ತಿದ್ದಾರೆ. ಎಲ್ಲ ಕಾಲೇಜುಗಳಲ್ಲಿ ಶಿಕ್ಷಣದ ಪ್ರವೇಶಾತಿ ಮುಗಿದಿರುವ ಈ ವೇಳೆಯಲ್ಲಿ ಅವರ ಭವಿಷ್ಯವೇನು? ಎಂಬುದನ್ನು ಅವರು ಚಿಂತಿಸಬೇಕಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

“ಇತ್ತೀಚೆಗೆ ಕಾಲೇಜು ಶಿಕ್ಷಣ ಇಲಾಖೆಯಿಂದ ನಡೆದ ವರ್ಗಾವಣೆಯಿಂದಾಗಿ ಈ ಕಾಲೇಜಿನ ಹಲವು ಖಾಯಂ ಉಪನ್ಯಾಸಕರು ವರ್ಗಾವಣೆಯಾಗಿ ಹೋಗಿದ್ದಾರೆ. ಈ ಕಾಲೇಜಿಗೆ ಬರಲು ಯಾರೂ ಆಯ್ಕೆ ಮಾಡಿಕೊಂಡಿಲ್ಲ. ಇದಕ್ಕೆ ಕಾಲೇಜಿನ ಆಡಳಿತ ಮುಖ್ಯಸ್ಥರ ನಡೆನುಡಿ ವಾತಾವರಣ ಕಾರಣ. ಕೆಲವು ಸ್ನಾತಕೋತ್ತರ ವಿಭಾಗಕ್ಕೆ ಯಾವುದೇ ಉಪನ್ಯಾಸಕರು ಇಲ್ಲದೆಯೇ ಇಡೀ ವಿಭಾಗಗಳು ಅಳಿವಿನಂಚಿಗೆ ತಲುಪಿ ಮುಚ್ಚುವ ಪರಿಸ್ಥಿತಿ ಒದಗಿ ಬರಲಿದೆ. ಇದಕ್ಕೆ ಪ್ರಾಂಶುಪಾಲರೇ ನೇರ ಕಾರಣ” ಎಂದು ಆರೋಪಿಸಿದರು.

“ಇತ್ತ ಖಾಯಂ ಉಪನ್ಯಾಸಕರೂ ಇಲ್ಲದೇ, ಅತ್ತ ಅತಿಥಿ ಉಪನ್ಯಾಸಕರೂ ಇಲ್ಲದಂತಾಗಿ ಸರ್ಕಾರಿ ವಿಜ್ಞಾನ ಕಾಲೇಜು ಸೊರಗುತ್ತಿದೆ. ಇದರ ಪರಿಣಾಮ ನೇರವಾಗಿ ವಿಧ್ಯಾರ್ಥಿಗಳ ಭವಿಷ್ಯದ ಮೇಲಾಗುತ್ತಿದೆ. ಹಾಗಾಗಿ ಉನ್ನತ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಸಚಿವ ಎಂ ಸಿ ಸುಧಾಕರ್ ಅವರು ಕಾಲೇಜಿನಲ್ಲಿ ಉಳಿದಿರುವ ಉಪನ್ಯಾಸಕರನ್ನು ವರ್ಗಾವಣೆಗೊಳಿಸದೇ ಅಲ್ಲಿಯೇ ಮುಂದುವರೆಸಲು ಅವಕಾಶ ನೀಡಬೇಕು.‌ ತುರ್ತಾಗಿ ಇತರ ಉಪನ್ಯಾಸಕರನ್ನು ನೇಮಕ ಮಾಡಬೇಕು” ಎಂದು ಪ್ರಕಾಶ್ ನಾಯ್ಕ್ ಒತ್ತಾಯಿಸಿದರು.

“ಮಧ್ಯೆ ಇದೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ಹಲವು ವಿಭಾಗದಲ್ಲಿ ವಿದ್ಯಾರ್ಥಿಗಳು ಪ್ರವೇಶ ಬಯಸಿ ಬಂದರೂ ಅವರೆಲ್ಲರಿಗೂ ಸಬೂಬು, ಹಲವು ಕಾರಣಗಳನ್ನು ಹೇಳಿ  ಪ್ರಾಂಶುಪಾಲರು ಪ್ರವೇಶ ನಿರಾಕರಿಸಿ ಖಾಸಗಿ ಕಾಲೇಜುಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆನ್ನುವ ಆರೋಪವೂ ಕೇಳಿಬಂದಿದೆ” ಎಂದು ತಿಳಿಸಿದರು.

“ವಿಜ್ಞಾನ ಪದವಿಗಳ ಸಸ್ಯಶಾಸ್ತ್ರ ವಿಭಾಗಕ್ಕೆ ಯಾವುದೇ ಪ್ರಾಧ್ಯಾಪಕರು ಇಲ್ಲದೆ ತರಗತಿ ಪ್ರಾರಂಭವಾಗಿಲ್ಲ. ಹಾಗೂ ರಸಾಯನಶಾಸ್ತ್ರ ವಿಭಾಗದಲ್ಲೂ ಕೂಡ ಇರುವ ಇಬ್ಬರು ಉಪನ್ಯಾಸಕರು ವರ್ಗಾವಣೆಗೊಂಡಿದ್ದು, ಇದೂ ಕೂಡ ಉಪನ್ಯಾಸಕರಿಲ್ಲದೆ ಶಿಕ್ಷಣ, ಭೋದನೆಯ ಕೊರತೆ ಉಂಟಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

“ಮಾಹಿತಿಗಳ ಪ್ರಕಾರ ಬಹಳ ವರ್ಷಗಳಿಂದ ಬಹುತೇಕ ತರಗತಿಗಳು ಅತಿಥಿ ಉಪನ್ಯಾಸಕರಿಂದಲೇ ನೆಡೆಯುತ್ತಿದ್ದು, ಈ ಬಾರಿ ಅವರೂ ಇಲ್ಲದೆ ಇದುವರೆಗೆ ಪಾಠ ಪ್ರವಚನಗಳು ನಡೆಯದ ಸ್ಥಿತಿ ಉಂಟಾಗಿದೆ. ಇದು ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ಅಡ್ಡಕತ್ತರಿಯಲ್ಲಿ ಸಿಕ್ಕಂತಾಗಿದೆ” ಎಂದರು.

ಸರ್ಕಾರಿ ಕಾಲೇಜಿಗೆ ಉಪನ್ಯಾಸಕರೇ ಇಲ್ಲ 3

ಇದೇ ಕಾಲೇಜಿನಲ್ಲಿ ತಮ್ಮ ಮಗಳನ್ನು ಓದಿಸಿದ ಪೋಷಕ ತಿಪ್ಪೇಸ್ವಾಮಿ ಮಾತನಾಡಿ, “ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಬೋಧಿಸಲು ಉಪನ್ಯಾಸಕರಿಲ್ಲ. ಬಹುತೇಕರು ಅತಿಥಿ ಉಪನ್ಯಾಸಕರೇ ಇದ್ದು, ಸರಿಯಾಗಿ ಮಾರ್ಗದರ್ಶನ ಮಾಡುವುದಿಲ್ಲ. ಕೆಲವು ವಿಷಯಗಳಿಗೆ ಬೋಧಕರಿಲ್ಲದೆ ಪಾಠ ಮಾಡುವುದೇ ಇಲ್ಲ. ವಿದ್ಯಾರ್ಥಿಗಳಿಗೇ ಓದಿ ಬರೆಯಲು ಹೇಳುತ್ತಾರೆ.  ಇಂತಹ ದುಃಸ್ಥಿತಿಗೆ ಕಾಲೇಜು ತಲುಪಿದೆ. ಈ ಕೂಡಲೇ ಸಂಬಂಧಪಟ್ಟ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶಕರುಗಳು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಕಾಲೇಜಿನ ಪ್ರಾಂಶುಪಾಲ ಸಿದ್ದ್ರಾಮ ಚನಗೊಂಡ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಾಲೇಜಿನಲ್ಲಿ ಒಟ್ಟು 38 ಮಂದಿ ಉಪನ್ಯಾಸಕರಿದ್ದು, ಅದರಲ್ಲಿ ಎಂಟು ಮಂದಿ ಉಪನ್ಯಾಸಕರು ವರ್ಗಾವಣೆಯಾಗಿ ಹೋಗಿದ್ದಾರೆ. ಈಗ ಮಾತನಾಡುವ ವೇಳೆಗೆ ಆರು ಮಂದಿ ಹೊಸದಾಗಿ ಅತಿಥಿ ಉಪನ್ಯಾಸಕರು ಬಂದಿದ್ದಾರೆ. ರಸಾಯನಶಾಸ್ತ್ರ ಮತ್ತು ಸಸ್ಯಶಾಸ್ತ್ರ ವಿಭಾಗಕ್ಕೆ ಪದವಿ ಮತ್ತು ಸ್ನಾತಕೋತರ ಪದವಿ ಸೇರಿ ಯಾವುದೇ ಉಪನ್ಯಾಸಕರಿಲ್ಲ. ಈ ಬಗ್ಗೆ ನಾವು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅದು ಸರ್ಕಾರದ ಮಟ್ಟದಲ್ಲಿ ಕೌನ್ಸಿಲಿಂಗ್ ಮೂಲಕ ಆಯ್ಕೆಯಾಗಬೇಕಾಗಿರುವುದರಿಂದ ಅತಿಥಿ ಉಪನ್ಯಾಸಕರು ಅಥವಾ ಖಾಯಂ ಉಪನ್ಯಾಸಕರ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಾವು ಅಸಹಾಯಕರಾಗಿದ್ದೇವೆ” ಎಂದು ಪ್ರತಿಕ್ರಿಯಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ದೊಡ್ಡ ಹೊಸೂರು ಸತ್ಯಾಗ್ರಹ ದೇಶದಾದ್ಯಂತ ಹಬ್ಬಲಿ : ಬಸವರಾಜ ಪಾಟೀಲ್ ವೀರಾಪುರ

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ವರದಶಂಕರ್ ಮಾತನಾಡಿ, “ನಾನು ಸುಮಾರು ಎರಡು ವರ್ಷಗಳಿಂದ ಕಾಲೇಜು ಅಭಿವೃದ್ಧಿ ಸಮಿತಿಯಲ್ಲಿದ್ದು, ಎರಡು ವರ್ಷಗಳಿಂದಲೂ ಗಮನಿಸುತ್ತಿದ್ದೇನೆ. ಕೆಲವು ಭಾಗದಲ್ಲಿ ಉಪನ್ಯಾಸಕರೇ ಇಲ್ಲ ಮತ್ತು ಲ್ಯಾಬ್‌ಗಳು ಹಳೆಯದಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಪ್ರಾಯೋಗಿಕ ತರಬೇತಿಗಳು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಮತ್ತು ಸ್ನಾತಕೋತರ ವಿಭಾಗವು ಸೇರಿರುವ ಈ ಕಾಲೇಜಿನಲ್ಲಿ ಡಿ ಗ್ರೂಪ್ ನೌಕರರೂ ಕೂಡ ಸಾಕಷ್ಟಿಲ್ಲದೇ ಅದೂ ಕೂಡ ಸಮಸ್ಯೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಆಡಳಿತಾಧಿಕಾರಿಗಳಾದ ಪ್ರಾಂಶುಪಾಲರು ಜವಾಬ್ದಾರಿ ತೆಗೆದುಕೊಂಡು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರಿರುವ ಅಭಿವೃದ್ಧಿ ಸಮಿತಿಯ ಸಭೆಯನ್ನು ಕಾಲಕಾಲಕ್ಕೆ ನಿರಂತರವಾಗಿ ಕರೆದು ಸಮಸ್ಯೆಗಳ ಪರಿಹಾರಕ್ಕೆ ಎಲ್ಲರೂ ಸೇರಿ ಪ್ರಯತ್ನಿಸಬೇಕಿದೆ” ಎಂದು ಹೇಳಿದರು.

“75 ವರ್ಷಗಳ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳಬೇಕಾಗಿದ್ದ ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ಅಮೃತ ಮಹೋತ್ಸವಕ್ಕೂ ಕೂಡ ಅಣಿಯಾಗದೆ, ಅಗತ್ಯ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ. ಈ ಕೂಡಲೇ ಸಂಬಂಧಪಟ್ಟ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು, ವಿಶ್ವವಿದ್ಯಾನಿಲಯದ ಮುಖ್ಯಸ್ಥರು ಮತ್ತು ಪ್ರಾಂಶುಪಾಲರು ಕೂಡಲೇ ಕ್ರಮ ಕೈಗೊಂಡು ಅಗತ್ಯವಾದ ಸಿಬ್ಬಂದಿ ಮತ್ತು ಇತರ ವ್ಯವಸ್ಥೆಗಳನ್ನು ಸರಿಪಡಿಸುವ ಮೂಲಕ ಕಾಲೇಜಿನ ವೈಭವವನ್ನು ಮತ್ತೆ ಮರುಕಳಿಸುವ ರೀತಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಬೋಧನೆ ಮತ್ತು ಸುವ್ಯವಸ್ಥೆಯ ಕ್ರಮ ಕೈಗೊಳ್ಳಬೇಕು” ಎಂಬುದು ಹಳೆಯ ವಿದ್ಯಾರ್ಥಿಗಳ, ಸಾರ್ವಜನಿಕರ, ಪೋಷಕರ, ಶಿಕ್ಷಣಾಸಕ್ತರ ಮನವಿಯಾಗಿದೆ.
 

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X