ಶಿರಾ ತಾಲೂಕಿನ ಚಿಗುರು ಯುವಜನ ಸಂಘದ ಸದಸ್ಯರು ತಮ್ಮ ಹೊಲಗಳಲ್ಲಿ ನಿಂತು ಕುಲಾಂತರಿ ತಳಿಯ ಆಹಾರವನ್ನು ತಿರಸ್ಕರಿಸಿ ಎಂಬ ಪೋಸ್ಟರ್ ಹಿಡಿದು ಅಭಿಯಾನ ಪ್ರಾರಂಭಿಸಿದ್ದಾರೆ.
ಕೇಂದ್ರ ಸರ್ಕಾರದ ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ಬೇಯರ್ ಮತ್ತು ಮಾನ್ಸೆಂಟೋ ಕಂಪನಿಗಳ ಸಹಯೋಗದಲ್ಲಿ ತರಲು ಹೊರಟಿರುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿ ಯನ್ನು ಅನೇಕ ಕಡೆ ರೈತರು, ಪರಿಸರಾಸಕ್ತರು ವಿರೋಧಿಸುತ್ತಿದ್ದಾರೆ. ಜೊತೆಗೆ ಗಾಂಧೀ ಸಹಜ ಬೇಸಾಯ ಆಶ್ರಮದ ವತಿಯಿಂದ ದೊಡ್ಡ ಹೊಸೂರು ಸತ್ಯಾಗ್ರಹವನ್ನು ಸಹ ಮಾಡುತ್ತಿದ್ದಾರೆ. ಅದರ ಭಾಗವಾಗಿ ನಮ್ಮ ಸಂಘದಿಂದ ಕುಲಾಂತರಿ ತಳಿಯ ಆಹಾರವನ್ನು ತಿರಸ್ಕರಿಸಿ ಪೋಸ್ಟರ್ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದು ಮಂಜುನಾಥ್ ಅಮಲಗೊಂದಿ ತಿಳಿಸಿದರು.
ಅಭಿವೃದ್ದಿಶೀಲ ದೇಶಗಳಲ್ಲಿನ ರೈತರ ಆಹಾರ ಸ್ವಾತಂತ್ರ್ಯತೆ ಮತ್ತು ಸ್ವಾವಲಂಬನೆಯನ್ನು ಕಸಿಯುವ ನೀತಿ ನಿರೂಪಣೆಗಳು ಪ್ರಸ್ತುತವಾಗಿ ಹೆಚ್ಚಾಗುತ್ತಿವೆ. ಅತೀ ಹೆಚ್ಚು ಇಳುವರಿ ತರುವ ಭರವಸೆಯಲ್ಲಿ, ಕಳೆಯನ್ನು ನಿಯಂತ್ರಿಸುವ ನೆಪದಲ್ಲಿ ಮಣ್ಣಿನ ಆರೋಗ್ಯವನ್ನು ಹಾಳುಮಾಡುವ ಕುಲಾಂತರಿ ತಳಿಯ ಬೀಜಗಳನ್ನು ಕೃಷಿ ಕ್ಷೇತ್ರಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಬೆಳೆ ಬೆಳೆಯುವ ರೈತರು ಹೆಚ್ಚು ಹೆಚ್ಚು ಕಳೆನಾಶಕಗಳನ್ನು ಬಳಸುವುದಕ್ಕೆ ಉತ್ತೇಜಿಸಿದಂತೆ ಆಗುತ್ತಿದೆ. ಈಗಾಗಲೇ ಹವಾಗುಣ ಬದಲಾವಣೆಗಳಿಂದ ಕೃಷಿಕ್ಷೇತ್ರದಲ್ಲಿ ಅನೇಕ ತೊಂದರೆಗಳು ಉಂಟಾಗುತ್ತಿವೆ. ಹಸಿರು ಕ್ರಾಂತಿಯ ನಂತರ ರಾಸಾಯನಿಕಯುಕ್ತ ಕೃಷಿಯಿಂದ ಆಹಾರದ ಉತ್ಪಾದನೆ ಹೆಚ್ಚಾಗಿದ್ದರೂ ಸಹ ಆಹಾರದ ಗುಣಮಟ್ಟ ಕುಸಿಯುತ್ತಿದೆ. ಈಗಾಗಲೇ ಭಾರತದಲ್ಲಿ ಕೃಷಿಕ್ಷೇತ್ರದಲ್ಲಿ ಶೇ.46ರಷ್ಟು ಮಣ್ಣು ತನ್ನ ಗುಣಮಟ್ಟವನ್ನು ಕಳೆದುಕೊಂಡಿದೆ ಎಂದು ಅನೇಕ ವರದಿಗಳಿಂದ ದೃಢಪಟ್ಟಿದೆ. ಆಹಾರ ಪದಾರ್ಥಗಳಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತಿದೆ ಎಂದರು.

ಪ್ರಸ್ತುತ ಭಾರತದಲ್ಲಿ ಐದು ವರ್ಷದೊಳಗಿನ ಮಕ್ಕಳಲ್ಲಿ ಶೇ. 67ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 15ರಿಂದ 49 ವರ್ಷದ ವಯಸ್ಸಿನ ಮಹಿಳೆಯರಲ್ಲಿ ಶೇ. 57 ರಷ್ಟು ರಕ್ತಹೀನತೆ ಉಂಟಾಗಿದೆ. ಇಂಥಹ ಪರಿಸ್ಥಿತಿ ಇದ್ದರೂ ದೇಹಕ್ಕೆ ಯೋಗ್ಯವಲ್ಲದ ಆಹಾರವನ್ನು ಬೆಳೆಯಲಾಗುತ್ತಿದೆ. ಕುಲಾಂತರಿ ತಳಿಯ ಬೀಜಗಳಿಂದ ಉತ್ಪಾದಿಸಲಾದ ಆಹಾರಗಳು ಆರೋಗ್ಯಕ್ಕೆ ಹಿತಕರವಾಗಿಲ್ಲವೆಂದು ಅನೇಕ ವಿಜ್ಞಾನಿಗಳು ಸಂಶೋಧನೆಗಳಿಂದ ಪ್ರತಿಪಾದಿಸಿದ್ದಾರೆ. ಆದರೂ ಸರ್ಕಾರಗಳು ಸ್ಥಳೀಯವಾಗಿ ಬಳಸುವ ಸತ್ವವುಳ್ಳ ಬೀಜಗಳ ಬದಲು ಕುಲಾಂತರಿ ಬೀಜಗಳನ್ನು ಪ್ರೋತ್ಸಾಹ ನೀಡುವ ಮೂಲಕ ಪರಿಸರ ವಿರೋಧಿ, ರೈತ ವಿರೋಧಿ ಕುಲಾಂತರಿ ರಾಷ್ಟ್ರೀಯ ನೀತಿಯನ್ನು ತರಲು ಹೊರಟಿರುವುದು ದುರಂತದ ಸಂಗತಿ ಎಂದು ಅಭಿಪ್ರಾಯಪಟ್ಟರು.

ಸಂಘದ ಕಾರ್ಯದರ್ಶಿ ಮಂಜುನಾಥ್ ಆಲದಮರ ಮಾತನಾಡಿ, ಕುಲಾಂತರಿ ಬೀಜಗಳು ಎಂದೆಂದಿಗೂ ವಿಷಕಾರಿಯೇ ಆಗುತ್ತವೆ. ಆದರೂ ಏಕೆ ಸರ್ಕಾರಗಳು ಬೆಂಬಲ ಕೊಡುತ್ತಿದ್ದಾರೆ ಎಂಬುದು ತಿಳಿಯದು. ದೇಶದ ಕೃಷಿ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದನ್ನು ಬಿಟ್ಟು ಯಾಕೆ ಈ ರೀತಿಯ ನೀತಿಗಳ ಕಡೆ ಮುಖ ಮಾಡಲಾಗುತ್ತಿದೆ ಎಂಬುದು ಕಳವಳದ ಸಂಗತಿ. ನಮ್ಮಲ್ಲಿ ಅಂದಿನಿಂದಲೂ, ಈಗಲೂ ದೇಸಿ ಬೀಜಗಳು ನಮ್ಮ ರೈತರನ್ನು ಕಾಪಾಡುತ್ತಿವೆ. ಆಗಾಗಿ ಕುಲಾಂತರಿ ಬೀಜ ನೀತಿಯನ್ನು ಬಿಟ್ಟು ರೈತರ ಸಮಸ್ಯೆಗೆ ಒತ್ತುಕೊಡುವ ಮೂಲಕ ಕುಲಾಂತರಿ ಬೀಜಗಳನ್ನು ತೊಲಗಿಸಬೇಕು ಎಂದರು.