ಸಮಾನತೆ – ಸರ್ವೋದಯದ ಕನಸು, ಜಾತ್ಯತೀತ ಗಣರಾಜ್ಯದ ಬೀಜ ಬಿತ್ತಿದ್ದ ಬೆಳಗಾವಿ ಕಾಂಗ್ರೆಸ್ ಸಮಾವೇಶ

Date:

Advertisements
ಬೆಳಗಾವಿ - ಖಾನಾಪೂರ್ ರಸ್ತೆಯ ಹೊಲದಲ್ಲಿ ಈ ಸಮಾವೇಶ ಆಯೋಜನೆ ಆಯಿತು. ಮೂರು ದಿವಸದಲ್ಲಿ ಗಾಂಧೀಜಿ ಸುಮಾರು ಕನಿಷ್ಠ 11 ಗೋಷ್ಟಿಗಳಲ್ಲಿ ಭಾಗವಹಿಸಿದರು. ಭಾಷಣ ಮಾಡಿದರು. ಬೆಳಗಾವಿ ಸಮ್ಮೇಳನದಿಂದ ಸ್ವಾತಂತ್ರ್ಯ ಸಂಗ್ರಾಮದ ಗತಿಯೇ ಬದಲಾಯಿತು. ಬೆಳಗಾವಿ ಕಾಂಗ್ರೆಸ್ ಸಮಾವೇಶ ಸಮಾನತೆ - ಸರ್ವೋದಯದ ಕನಸು ಹಾಗೂ ಜಾತ್ಯತೀತ ಗಣರಾಜ್ಯದ ಬೀಜ ಬಿತ್ತಿದ ಸಮ್ಮೇಳನ ಎನ್ನಿಸಿಕೊಂಡಿತು.

ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೃಷಿ ಮೇಳ ಮೊನ್ನೆ ತಾನೇ ಮುಕ್ತಾಯವಾಯಿತು. ನಾಲ್ಕು ದಿನಗಳ ಈ ಹಬ್ಬವನ್ನು ನೋಡಲು 21 ಲಕ್ಷ ರೈತ ಬಾಂಧವರು ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಿಂದ ಬಂದಿದ್ದರು. ಅಂತೆಯೇ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕನ್ನಡದ ಉತ್ಸವವನ್ನು ಕಣ್ಣು ತುಂಬಿಕೊಳ್ಳಲು ಪ್ರತಿ ದಿನ 3-4 ಲಕ್ಷ ಜನ ಬರುವ ನಿರೀಕ್ಷೆ ಇದೆ.

“ಈ ಸಮ್ಮೇಳನಗಳಿಂದ ಏನು ಪ್ರಯೋಜನ?” ಅನ್ನುವ ಮೌಲಿಕ ಪ್ರಶ್ನೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಮ್ಮೇಳನಕ್ಕಿಂತ ಮುಂಚೆ ನನ್ನ ಕುಲಬಾಂಧವ ವರದಿಗಾರರು ಕೇಳುತ್ತಾರೆ. ತಮ್ಮ ಪೇಪರ್, ಪೋರ್ಟಲ್‌ಗಳಲ್ಲಿ ಬರೆಯುತ್ತಾರೆ. ಸ್ಕ್ರೀನ್‌ಗಳಲ್ಲಿ ಒದರುತ್ತಾರೆ. ಈ ಪ್ರಶ್ನೆಯನ್ನು ನಮ್ಮಂತವರು ಶತಮಾನಗಳಿಂದ ಕೇಳುತ್ತಾ ಬಂದಿದ್ದಾರೆ. ಅದಕ್ಕೆ ‘ಅದು ಕನ್ನಡಮ್ಮನ ಜಾತ್ರೆ, ಅದನ್ನು ನಾವು ಸಂಭ್ರಮಿಸಬೇಕು’, ‘ವಿನಾಕಾರಣ ಕ್ಯಾತೆ ತೆಗೆಯಬಾರದು’ ಅನ್ನುವ ಸಿದ್ಧ ಉತ್ತರಗಳು ದೊರೆಯುತ್ತವೆ.

ಇಷ್ಟು ಗೊತ್ತಿದ್ದೂ ನಾನು ಈ ಪ್ರಶ್ನೆಯನ್ನು ಮತ್ತೆ ಕೇಳುತ್ತಿದ್ದೇನೆ. “ಈ ಸಮ್ಮೇಳನಗಳಿಂದ ಏನು ಪ್ರಯೋಜನ?”

Advertisements

ಇಂದಿಗೆ ಸುಮಾರು ನೂರು ವರ್ಷ ಹಿಂದೆ ಬೆಳಗಾವಿಯಲ್ಲಿ ಜರುಗಿದ ಅಖಿಲ ಭಾರತೀಯ ಕಾಂಗ್ರೆಸ್ ಸಮಾವೇಶದಲ್ಲಿ ಅವಿಭಜಿತ ಭಾರತದ ಅನೇಕ ದಿಕ್ಕುಗಳಿಂದ ಸುಮಾರು ಮೂವತ್ತು ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದರು. ಅಂದಿನ ಕಾಲಕ್ಕೆ, ಅಷ್ಟೆಲ್ಲ ಜನ ಮೂರು ದಿವಸ ತಿಲಕವಾಡಿಯ ವಿಜಯನಗರದಲ್ಲಿ ಸೇರಿ ಏನು ಸಾಧಿಸಿದರು?

ಈ ಪ್ರಶ್ನೆಗೆ ಉತ್ತರ ಸುಲಭ. ಅದು ಅಂದಿನ ಸಮ್ಮೇಳನದ ಗೊತ್ತುವಳಿಗಳು ಹಾಗೂ ಭಾಷಣಗಳನ್ನು ಓದಿದಾಗ ತಿಳಿಯುತ್ತದೆ. ಈಗ ಗಾಂಧಿ ಭವನದಲ್ಲಿ ಇರುವ ಇಂತಹ ಎಲ್ಲ ದಾಖಲೆಗಳಿಗೆ ‘ಜ್ಞಾನ ಸೇವಕರು’ ಎನ್ನುವ ಸೇವಾ ಸಂಸ್ಥೆ ಡಿಜಿಟಲ್ ರೂಪ ಕೊಟ್ಟಿದೆ (https://archive.org/details/india.gandhi.bhavan.2023.05.20). ಅವು ಸರ್ವರಿಗೂ ಲಭ್ಯ. ಈ ದುರಿತ ಕಾಲದಲ್ಲಿ ಕೆಲವು ಶಕ್ತಿಗಳು ಗಾಂಧೀ ಜೀವನ, ಸಿದ್ಧಾಂತದ ಬಗ್ಗೆ ಅಜೀರ್ಣವಾಗುವಷ್ಟು ಫೇಕ್ ನ್ಯೂಸ್ ಹುಟ್ಟಿಸಿ ಅವರನ್ನು ಕಂಡರೆ ಆಗಲಾರದಷ್ಟೂ ದ್ವೇಷ ನಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳುವಂತೆ ಮಾಡುತ್ತಿವೆ. ಅಂತಹವರ ಸುದ್ದಿಗಳನ್ನು ನಂಬುವ ಮುನ್ನ ಇಂತಹ ಐತಿಹಾಸಿಕ ದಾಖಲೆಗಳನ್ನು ಒಮ್ಮೆ ನೋಡಬಹುದು.

ಬೆಳಗಾವಿಯ ಸಮಾವೇಶದಿಂದ ಹೊರಹೊರಟ ಸಂದೇಶಗಳು ಬಹು ಮೌಲ್ಯಯುತವಾದವು.

ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ಮೊನ್ನೆ ಮಾತನಾಡುವಾಗ ‘ಭಾರತ ಸಂವಿಧಾನದ ಮೂಲ ತತ್ವಗಳಾದ ಸಮಾನತೆ, ಸಮಾನ ಅವಕಾಶ ಹಾಗೂ ತಾರತಮ್ಯ ವಿರೋಧಗಳು ಹುಟ್ಟಿಕೊಂಡಿದ್ದು ಬೆಳಗಾವಿ ಸಮಾವೇಶದಲ್ಲಿ. ಅವುಗಳೇ ಕೊನೆಗೆ ಸಂವಿಧಾನದ 15 ಹಾಗೂ 16ನೇ ಕಲಮುಗಳಾಗಿ ಕಾಣಿಸಿಕೊಂಡವು’ ಎಂದರು.

ಅವರು ಹಾಗೆ ಹೇಳಲು ಬಲವಾದ ಕಾರಣ ಇವೆ.

ಬೆಳಗಾವಿಯಲ್ಲಿ ಗಾಂಧೀಜಿ ಮಾತಾಡುವಾಗ ಅಸ್ಪೃಶ್ಯತೆಯನ್ನು ಬಲು ಜೋರಾಗಿ ವಿರೋಧಿಸಿದ್ದರು. “ಅನೇಕ ಕಡೆಗಳಲ್ಲಿ ಹರಿಜನ – ಶೂದ್ರ ಸಮುದಾಯಗಳ ಮೇಲೆ ಹಲ್ಲೆಗಳು ನಡೆದಿವೆ. ಅವರಿಗೆ ಸಮಾನ ಅವಕಾಶಗಳು ಇಲ್ಲ. ಈ ರೀತಿಯ ಅಸಮಾನತೆಯನ್ನು ನಮ್ಮ ಹೊಟ್ಟೆಯಲ್ಲಿ ಇಟ್ಟುಕೊಂಡರೆ ಬ್ರಿಟಿಷರು ನಮ್ಮನ್ನು ಬಿಟ್ಟು ಹೋಗುವುದೇ ಇಲ್ಲ. ಅಣ್ಣ-ತಮ್ಮಂದಿರ ಹಾಗೆ ಇರಬೇಕಾದ ನಮ್ಮನ್ನು ನಮ್ಮೊಳಗೆ ಹೊಡೆದಾಡಲು ಹಚ್ಚಿ ದೂರ ನಿಲ್ಲುತ್ತಾರೆ. ಇದು ಕೊನೆಯಾಗಬೇಕು. ಅದಕ್ಕೆ ನಾವೆಲ್ಲ ಪಣ ತೊಡಬೇಕು” ಎಂದಿದ್ದರು.

image 14 3

ಈ ಸಾಮಾಜಿಕ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸದೆ ನಮಗೆ ಬೇರೆ ದಾರಿ ಇಲ್ಲ. ಇದೇ ರೀತಿಯ ಸಾಮಾಜಿಕ ಸ್ಥಿತಿ ಇಟ್ಟುಕೊಂಡು ನಾವು ರಾಜಕೀಯ ಸ್ವಾತಂತ್ರ್ಯ ಪಡೆದರೆ ಏನು ಪ್ರಯೋಜನ? ಮುಟ್ಟು-ತಟ್ಟು ಹಾಗೂ ಅಸಮಾನತೆಗಳು ಭಾರತ ಎಂಬ ಹೆಮ್ಮರಕ್ಕೆ ಹತ್ತಿದ ಗೆದ್ದಲು ಹುಳುಗಳು. ಅವನ್ನು ನಿವಾರಿಸಲೇಬೇಕು ಎಂದು ಹೇಳಿದರು.

“ಸರ್ವೋದಯ ಕಾರ್ಯಕರ್ತರಾದ ಕಾಕಾ ಕಾರಖಾನಿಸ ಹಾಗೂ ನಾ.ಸು ಹರಡಿಕರ ಅವರ ನೇತ್ರತ್ವದಲ್ಲಿ ಸ್ವಯಂ ಸೇವಕರ ಪಡೆ ತಯಾರಾಗಿತ್ತು. ಅವರು ಮಣ್ಣು ತುಂಬುವ ಪಾಯಖಾನೆಗಳನ್ನು ಸಹಿತ ಸ್ವಚ್ಛ ಮಾಡಿದರು. ಆ ಪಡೆಯಲ್ಲಿ ಇದ್ದ 70 ಜನರಲ್ಲಿ ಸುಮಾರು 40 ಜನ ಬ್ರಾಹ್ಮಣ ಯುವಕರು. ಇದನ್ನು ನಾನು ಇತರ ಸಭೆಗಳಲ್ಲಿಯೂ ಹೇಳಿದೆ” ಎಂದು ಗಾಂಧೀಜಿ ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಲೇಖನ ಬರೆದರು.

“ಇತ್ತೀಚಿಗೆ (ಅವಿಭಜಿತ ಭಾರತದ) ಕೋಹಾಟ ಎಂಬಲ್ಲಿ ಹಿಂದು-ಮುಸ್ಲಿಂ ಗಲಭೆ ನಡೆದಿದೆ. ಇದು ಸಲ್ಲದು. ನಾವೆಲ್ಲ ಒಂದೇ ತಾಯಿಯ ಮಕ್ಕಳು. ನಾವು ಸೌಹಾರ್ದದಿಂದ ಇರಬೇಕು. ನಮ್ಮಲ್ಲಿ ಒಡಕು ಉಂಟು ಮಾಡಲು ಕಾಯುತ್ತಿರುವ ಶಕ್ತಿಗಳ ಕೈಗೆ ನಾವು ಸಿಗಬಾರದು” ಎಂದು ಹೇಳಿದರು. ಹಿಂದಿನ ಸಮಾವೇಶದ ಅಧ್ಯಕ್ಷ ಮಹಮ್ಮದ್ ಅಲಿ ಅವರು ಇದಕ್ಕೆ ದನಿಗೂಡಿಸಿದರು.

ಅದರ ಹಿಂದಿನ ವರ್ಷ ನಡೆದ ಕಲ್ಕತ್ತಾ ಅಧಿವೇಶನ ದಲ್ಲಿ ಪಕ್ಷದಲ್ಲಿನ ಸ್ವರಾಜ್ಯವಾದಿಗಳು ಹಾಗೂ ಯಥಾಸ್ಥಿತಿ ವಾದಿಗಳ ನಡುವೆ ಭೀಕರ ಭಿನ್ನಮತ ತಲೆದೋರಿತ್ತು. ಕಾಂಗ್ರೆಸ್ ಹೋಳಾಗಿ ಹೋಗುತ್ತದೆ. ಅದರಿಂದ ಬ್ರಿಟಿಷರಿಗೆ ಅನುಕೂಲ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದವು.

ಈ ಎರಡೂ ಗುಂಪುಗಳ ನಡುವೆ ಸಾಮರಸ್ಯ ಹಾಗೂ ಏಕತೆ ಮೂಡಿಸುವಲ್ಲಿ ಗಾಂಧೀಜಿ ಯಶಸ್ವಿಯಾದರು. ಎರಡೂ ಗುಂಪುಗಳ ನಾಯಕರ ನಡುವೆ ಪ್ರತ್ಯೇಕ ಹಾಗೂ ಜಂಟಿ ಸಭೆ ನಡೆಸಿದರು. “ನೀವು ಹೋಗುತ್ತಿರುವುದು ಈ ದಾರಿಯಲ್ಲಿ. ಅವರು ನಡೆಯುತ್ತಿರುವುದು ಆ ದಾರಿಯಲ್ಲಿ. ಆದರೆ ನಿಮ್ಮಿಬ್ಬರ ಗಮ್ಯ ಒಂದೇ. ನಮ್ಮಲ್ಲಿ ಏಕತೆ ಕಾಯಂ ಆಗಿರಬೇಕು” ಎಂದು ಕಿವಿಮಾತು ಹೇಳಿದರು.

“ನಾವು ಸ್ವರಾಜ್ಯವನ್ನು ಕೇಳುವಾಗ ಸ್ವದೇಶಿಯನ್ನು ಮರೆಯಬಾರದು. ಸ್ವದೇಶಿ ಇಲ್ಲದ ಸ್ವರಾಜ್ಯ ಪ್ರಾಣ ಇಲ್ಲದ ಕಳೇಬರದಂತೆ. ಸ್ವದೇಶಿ ಎನ್ನುವುದು ಕೈಗೆ ಎಟುಕದ ಕನಸೇನೂ ಅಲ್ಲ. ಅದು ನಾವೆಲ್ಲ ಸೇರಿ ಸರಳವಾಗಿ ಸಾಧಿಸಬಹುದಾದದ್ದು,” ಎಂದು ಹೇಳಿಕೊಟ್ಟರು. 

ಖಾದಿ ಹಾಗೂ ಗ್ರಾಮೋದ್ಯೋಗದ ಉತ್ತೇಜನದ ಮಾತಾಡಿದರು. ಆ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಯಕರ್ತರ ವಿಶೇಷಗೋಷ್ಟಿ ನಡೆಸಿದರು. ಇದರಿಂದ ಪ್ರೇರಣೆ ಪಡೆದ ಗಂಗಾಧರ ರಾವ್ ದೇಶಪಾಂಡೆ ಹಾಗೂ ಇತರರು ಹುದಲಿ ಹಾಗೂ ಇತರ ಗ್ರಾಮಗಳಲ್ಲಿ ಖಾದಿ ಹಾಗೂ ಗ್ರಾಮೋದ್ಯೋಗ ಸಂಸ್ಥೆಗಳನ್ನು ಕಟ್ಟಿದರು. ಅವು ಇಂದಿಗೂ ಯಶಸ್ವಿಯಾಗಿ ನಡೆಯುತ್ತಿವೆ.

ಬೆಳಗಾವಿ ಅಧಿವೇಶನ

ಕಾಂಗ್ರೆಸ್‌ನ ಅಂಗ ಸಂಸ್ಥೆಯಾಗಿ ಒಂದು ಸ್ವಯಂ ಸೇವಕರ ಪಡೆ ಇರಬೇಕು ಎನ್ನುವ ವಿಚಾರ ಇಲ್ಲಿ ತಲೆದೋರಿತು. ಅದರ ಫಲವಾಗಿಯೇ ಘಟಪ್ರಭಾದಲ್ಲಿ ನಾ.ಸು ಹರಡಿಕರ ಹಾಗೂ ಇತರರು ಭಾರತೀಯ ಕಾಂಗ್ರೆಸ್ ಸೇವಾದಳ ಸಂಸ್ಥೆ ಹುಟ್ಟು ಹಾಕಿದರು.

ಈ ಸಮ್ಮೇಳನದ ಇತರ ವಿಶೇಷತೆಗಳು ಅನೇಕ.

ತಮ್ಮ ಜೀವಮಾನದಲ್ಲಿ ಗಾಂಧೀಜಿ ಕಾಂಗ್ರೆಸ್ ಸಮಾವೇಶದ ಅಧ್ಯಕ್ಷರಾಗಿದ್ದು ಒಂದೇ ಬಾರಿ. ಅದು ಬೆಳಗಾವಿಯಲ್ಲಿ ನಡೆದ 34ನೇ ವಾರ್ಷಿಕ ಸಮ್ಮೇಳನ.

ಈ ಸಮಾವೇಶಕ್ಕಾಗಿಯೇ ಹುಯಿಲುಗೋಳ ನಾರಾಯಣ ರಾಯರ ‘ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ ಗೀತೆಯನ್ನು ಬರೆದರು. ಈ ಗೀತೆಯನ್ನು ಈ ನಾಡಿನ ಹೆಮ್ಮಯ ಗಾಯಕಿ ಗಂಗೂಬಾಯಿ ಹಾನಗಲ್ ಅವರು ಹಾಡಿದರು. ಆಗ ಅವರಿಗೆ 11 ವರ್ಷ.

ಕರ್ನಾಟಕ ಕೇಸರಿ ಎಂದೇ ಹೆಸರಾದ ಗಂಗಾಧರ ರಾವ್ ದೇಶಪಾಂಡೆ ಅವರ ನೇತೃತ್ವದಲ್ಲಿ ಇದು ಆಯೋಜನೆಗೊಂಡಿತು. ಹುದಲಿ ಎಂಬ ಗ್ರಾಮದ ಜಮೀನುದಾರರಾಗಿದ್ದ ಅವರು ಪ್ರತಿದಿನ ಬೆಳಗಾವಿಯ ಹೊರವಲಯದ ಈ ಜಾಗಕ್ಕೆ ಕುದುರೆ ಸವಾರಿಯಲ್ಲಿ ಬರುತ್ತಿದ್ದರು. ಸಮಾವೇಶದ ಪ್ರಥಮ ಭಾಷಣ ಮಾಡಿದ ಅವರು “ಜಾತಿ ಹಾಗೂ ಕೋಮು ದ್ವೇಷದ ಭಾವನೆಯಿಂದ ನಾವು ದೂರ ಆಗಬೇಕು” ಎನ್ನುವ ಮಾತು ಆಡುವುದರ ಮೂಲಕ ಸಮ್ಮೇಳನಕ್ಕೆ ಪೀಠಿಕೆ ಹಾಕಿದರು.

ಈ ವರದಿ ಓದಿದ್ದೀರಾ?: ‘ಗಾಂಧೀಜಿಯ ಹಂತಕ’ | ಗೋಡ್ಸೆ ಎಂಬ ಸರಳ ಮನಸ್ಸಿನ ಹಂತಕ

ದೇಶಪಾಂಡೆ ಅವರು ಸಮಾವೇಶದ ಕೊನೆಗೆ ಖರ್ಚು-ವೆಚ್ಚದ ಲೆಕ್ಕ ಕೊಟ್ಟರು. ಇದು ತುಸು ಹೆಚ್ಚಾಯಿತು. ಮುಂದಿನ ಸಮ್ಮೇಳನಗಳನ್ನು ಇದಕ್ಕೂ ಕಮ್ಮಿ ವೆಚ್ಚದಲ್ಲಿ ನಡೆಸಲು ನಾವು ಪ್ರಯತ್ನ ಮಾಡಬೇಕು ಎಂದು ಗಾಂಧೀಜಿ ಹೇಳಿದರು. ತಮ್ಮ ಪತ್ರಿಕೆಯಲ್ಲಿ ಇದರ ಬಗ್ಗೆ ಸಂಪಾದಕೀಯ ಬರೆದರು. ಸಮ್ಮೇಳನಾಧ್ಯಕ್ಷರ ವಸತಿಗೆ ಎಂದು ತಯಾರು ಮಾಡಿದ ಕುಟೀರದ ತಯಾರಿಗೆ ಸುಮಾರು ಖರ್ಚು ಆಗಿದೆ ಎಂದು ಗಾಂಧೀಜಿ ಪ್ರತಿಭಟಿಸಿದರು. ಇದು ಕುಟೀರ ಅಲ್ಲ, ಅರಮನೆ ಎಂದು ಟೀಕಿಸಿದರು.

ಬೆಳಗಾವಿ – ಖಾನಾಪೂರ್ ರಸ್ತೆಯ ಹೊಲದಲ್ಲಿ ಈ ಸಮಾವೇಶ ಆಯೋಜನೆ ಆಯಿತು. ಅದಕ್ಕೆ ವಿಜಯನಗರ ಎನ್ನುವ ಹೆಸರು ಇಡಲಾಯಿತು. ಅದನ್ನು ಈಗ ತಿಲಕವಾಡಿ, ಕಾಂಗ್ರೆಸ್ ರಸ್ತೆ, ಒಂದನೇ ರೈಲ್ವೆ ಗೇಟ್ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಈಗಿನ ತಿಲಕವಾಡಿಯನ್ನು ಆಗ ‘ಠಳಕವಾಡಿ’ ಎಂದು ಕರೆಯುತ್ತಿದ್ದರು. ಈಗಲೂ ಅನೇಕರು ಹಾಗೇ ಕರೆಯುತ್ತಾರೆ. ‘ಠಳಕ’ ಅಂತ ಅಂದರೆ ಮರಾಠಿಯಲ್ಲಿ ಸ್ವಚ್ಛ, ಶುಭ್ರ, ಶಿಸ್ತಿನ ಅಂತ ಅರ್ಥ.

ಇದನ್ನು ಸಾಂಗವಾಗಿ ನಡೆಸಿಕೊಡಲು ಒಂದು ದೊಡ್ಡ ಬಾವಿಯನ್ನು ಶ್ರಮದಾನದಿಂದ ತೋಡಲಾಯಿತು. ಅದಕ್ಕೆ ಪಂಪಾ ಸರೋವರ ಅನ್ನುವ ಹೆಸರು ಇತ್ತು. ಅದನ್ನು ಈಗ ಜನ ಕಾಂಗ್ರೆಸ್ ಬಾವಿ ಅನ್ನುತ್ತಾರೆ. ತನ್ನ ಸುತ್ತಮುತ್ತಲ ಪ್ರದೇಶಗಳಿಗೆ ಅದು ಈಗಲೂ ಕೂಡ ಕುಡಿಯುವ ನೀರು ಕೊಡುತ್ತಿದೆ.

ಮೂರು ದಿವಸದಲ್ಲಿ ಗಾಂಧೀಜಿ ಸುಮಾರು ಕನಿಷ್ಠ 11 ಗೋಷ್ಟಿಗಳಲ್ಲಿ ಭಾಗವಹಿಸಿದರು. ಭಾಷಣ ಮಾಡಿದರು. ಮಹಿಳೆಯರ, ಯುವಕರ, ಖಾದಿ ಗ್ರಾಮೋದ್ಯೋಗ-ಸರ್ವೋದಯ ಕಾರ್ಯಕರ್ತರ, ಸ್ವಯಂಸೇವಕರ, ಮುಂತಾದ ವಿವಿಧ ಗುಂಪುಗಳನ್ನು ಭೇಟಿ ಮಾಡಿದರು.

“ಬೆಳಗಾವಿ ಸಮ್ಮೇಳನದಿಂದ ಸ್ವಾತಂತ್ರ್ಯ ಸಂಗ್ರಾಮದ ಗತಿಯೇ ಬದಲಾಯಿತು,” ಎಂದು ಪಟ್ಟಾಭಿ ಸೀತಾರಾಮಯ್ಯ ಅವರು ನಂತರದ ಲೇಖನವೊಂದರಲ್ಲಿ ಬರೆದರು.

ಇಂತಹ ಅನೇಕ ಕಾರಣಗಳಿಂದಾಗಿಯೇ ಬೆಳಗಾವಿ ಕಾಂಗ್ರೆಸ್ ಸಮಾವೇಶ ಸಮಾನತೆ – ಸರ್ವೋದಯದ ಕನಸು, ಹಾಗೂ ಜಾತ್ಯತೀತ ಗಣರಾಜ್ಯದ ಬೀಜ ಬಿತ್ತಿದ ಸಮ್ಮೇಳನ ಎನ್ನಿಸಿಕೊಂಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಮಹಾರಾಷ್ಟ್ರದಲ್ಲಿ ಮಳೆ – ಬೆಳಗಾವಿ ಜಿಲ್ಲೆಯ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ

ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಇರುವ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

Download Eedina App Android / iOS

X