ನಾಡಹಬ್ಬ ದಸರಾ ಮಹೋತ್ಸವಕ್ಕೆ ಗಜಪಡೆಗಳೊಂದಿಗೆ ಆಗಮಿಸಿರುವ ಮಾವುತ ಮತ್ತು ಕಾವಡಿಗಳ ಕುಟುಂಬದ ಮಹಿಳೆಯರಿಗೆ ಡಾ ಬಿ ಪುಷ್ಪ ಅಮರನಾಥ್ ಅರ್ಪಿಸಿದರು.
ಮೈಸೂರು ನಗರದ ಅರಮನೆ ಆವರಣದಲ್ಲಿ ಕರ್ನಾಟಕ ಸರ್ಕಾರದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ ಬಿ ಪುಷ್ಪ ಅಮರನಾಥ್ ಅವರು ಗಜಪಡೆಗಳೊಂದಿಗೆ ಆಗಮಿಸಿರುವ ಮಹಿಳೆಯರಿಗೆ ಅರಿಶಿನ ಕುಂಕುಮ, ವೀಳ್ಯದೆಲೆ, ಬಾಳೆಹಣ್ಣು, ತೆಂಗಿನಕಾಯಿ ಹಾಗೂ ಸೀರೆ ಒಳಗೊಂಡ ಬಾಗಿನ ವಿತರಿಸಿದರು.
ಬಳಿಕ ಮಾತನಾಡಿದ ಅವರು, “ಎಲ್ಲರನ್ನೂ ಒಗ್ಗೂಡಿಸಿ ಸೌಹಾರ್ದ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ದಸರಾ ಮಹೋತ್ಸವ ಸಹಕಾರಿಯಾಗಲಿದೆ. ಆ ಮೂಲಕ ಸಂಸ್ಕೃತಿ ಹಾಗೂ ಬದುಕಿನ ಸಂದೇಶವನ್ನು ಎಲ್ಲರಿಗೂ ತಲುಪಿಸುವುದೇ ದಸರಾ ಉತ್ಸವದ ಉದ್ದೇಶವಾಗಿದೆ” ಎಂದರು.
ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತನಾಡಿ, “ನವರಾತ್ರಿಯ ಮೂಲಕ ಪ್ರಕೃತಿಗೆ ನಮಿಸಿ, ಪ್ರಕೃತಿಯ ಶಕ್ತಿ ತಾಯಿ ದುರ್ಗಾಮಾತೆಯನ್ನು ಸರ್ವ ಸ್ತ್ರೀಯರೆಲ್ಲರೂ ಕಾಣುವುದೇ ನವರಾತ್ರಿ. ನವರಾತ್ರಿಗೆ ಅಪಾರ ಶಕ್ತಿ ಇದ್ದು, 9 ದಿನಗಳ ಕಾಲ ಆಂತರಿಕ ದ್ವೇಷ, ಅಸೂಯೆ ತೊಲಗಿಸಿ ದೇವಿ ಪ್ರಜ್ಞೆಯನ್ನು ಜಾಗೃತಿಗೊಳಿಸುವುದೇ ನವರಾತ್ರಿಯ ವಿಶೇಷತೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರಿ ಶಾಲೆ ನಿರ್ಮಾಣ ಜಾಗದಲ್ಲಿ ಅಕ್ರಮ ಶೆಡ್: ತೆರವುಗೊಳಿಸಲು ಜಿಲ್ಲಾಧಿಕಾರಿಗೆ ಮನವಿ
ವನ್ಯಜೀವಿ ವಿಭಾಗದ ಡಿಸಿಎಫ್ ಡಾ ಐ ಬಿ ಪ್ರಭುಗೌಡ, ಸಮಾಜ ಸೇವಕ ಡಾ ಎಂ ಶಾಂತ ರಾಮಕೃಷ್ಣ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ನಾಗಮಣಿ ಜೆ, ದರ್ಶನ್, ರೇಣುಕಾ ಹೊರಕೇರಿ, ಸವಿತಾ ಘಾಟ್ಕೆ, ಸಂತೋಷ್ ಕಿರಾಳು, ಶಾರದಾ ಹಾಗೂ ಇತರರು ಇದ್ದರು.