- ಸರಣಿ ಟ್ವೀಟ್ ಮಾಡಿ ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಕಿಡಿ
- ರೋಡ್ ಶೋನಿಂದ ಜನಸಾಮಾನ್ಯರ ಜೊತೆಗೆ ಸಿದ್ದರಾಮಯ್ಯಗೂ ತೊಂದರೆ
ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರಿನ ರೋಡ್ ಶೋ ಬಿಸಿ ಜನಸಾಮಾನ್ಯರಿಗೆ ಅಷ್ಟೇ ಅಲ್ಲ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ತಗುಲಿದೆ.
ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೋದಿ ಅವರು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದಾರೆ. ಭಾನುವಾರವೂ ಸಹ ಮೋದಿ ರೋಡ್ ಶೋ ನಡೆಯಲಿದ್ದು, ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
“ಪ್ರಧಾನಿ ಮೋದಿ ಅವರ ರೋಡ್ ಶೋ ಕಾರಣಕ್ಕೆ ನನ್ನ ಸಂಚಾರಕ್ಕೂ ಪೊಲೀಸರು ನಿರ್ಬಂಧ ಹಾಕಿದ್ದರು. ಮೋದಿ ಅವರು ಹೊಸಪೇಟೆಗೆ ಹೋಗುತ್ತಿದ್ದರು, ನಾನು ಗಂಗಾವತಿಗೆ ಹೊರಟಿದ್ದೆ, ಮೋದಿ ಅವರು ಹೋಗುತ್ತಿರುವ ಕಾರಣಕ್ಕೆ ನನಗೆ ಗಂಗಾವತಿ ಹೋಗಲು ಅನುಮತಿಯನ್ನೇ ನೀಡಿಲ್ಲ. ವಿಧವಿಧವಾಗಿ ನಾನು ಮನವಿ ಮಾಡಿದೆ, ಆದರೂ ಅನುಮತಿ ಕೊಡಲಿಲ್ಲ” ಎಂದು ತಿಳಿಸಿದ್ದಾರೆ.
“ಒಬ್ಬ ವಿರೋಧ ಪಕ್ಷದ ನಾಯಕನಿಗೆ ಹೀಗಾದರೆ, ಸಾಮಾನ್ಯ ಜನರ ಗತಿಯೇನು” ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
“ನೀಟ್ ಪರೀಕ್ಷಾರ್ಥಿಗಳು ಮತ್ತು ಬೆಂಗಳೂರಿನ ಜನರ ವಿರೋಧವನ್ನು ಧಿಕ್ಕರಿಸಿ ಪ್ರಧಾನಿ ಮೋದಿ ಅವರು ನಾಳೆ ಬೆಂಗಳೂರಿನಲ್ಲಿ ನಡೆಸಲಿರುವ ರೋಡ್ ಶೋ ಅತ್ಯಂತ ಬೇಜವಾಬ್ದಾರಿತನದ ನಡೆ. ಮೋದಿ ಅವರು ಪ್ರಚಾರ ಮಾಡಲಿ ನಮ್ಮ ತಕರಾರು ಇಲ್ಲ. ಆದರೆ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ?” ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
“ಮೋದಿ ಅವರ ರೋಡ್ ಶೋವನ್ನು ಒಂದು ದಿನ ಮುಂದಕ್ಕೆ ಹಾಕಬಹುದು. ಆದರೆ ವಿದ್ಯಾರ್ಥಿಗಳು ಪರೀಕ್ಷೆ ನಾಳೆ ಬರೆಯುತ್ತೇನೆ ಎಂದರೆ ಆಗುತ್ತಾ? ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವ ಹಾಗಿದೆ ಬಿಜೆಪಿಯ ಹಠಮಾರಿತನ” ಎಂದು ಕಿಡಿಕಾರಿದ್ದಾರೆ.
“ರೋಡ್ ಶೋದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿದ್ದರೆ ಅವರು ಮುಂಚಿತವಾಗಿ ಹೋಗಿ ಉಳಿದುಕೊಳ್ಳಲಿ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಅತ್ಯಂತ ಹೊಣೆಗೇಡಿತನ ಮತ್ತು ದುರಹಂಕಾರದ್ದು. ಬಡ ವಿದ್ಯಾರ್ಥಿಗಳಿಗೆ ಇದು ಆಗುತ್ತಾ” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ದೂರು
“ವಿದ್ಯಾರ್ಥಿಗಳು ಅನುಭವಿಸಬೇಕಾಗಿರುವ ಕಷ್ಟಗಳನ್ನು ಪ್ರಧಾನಿ ಮೋದಿ ಅವರ ಗಮನಕ್ಕೆ ತಂದು ರೋಡ್ ಶೋ ರದ್ದು ಮಾಡಬೇಕಾಗಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರೋಡ್ ಶೋವನ್ನು ಸಮರ್ಥಿಸುತ್ತಿರುವುದು ಬಿಜೆಪಿ ಸಚಿವರ ಗುಲಾಮಗಿರಿ ಮನಸ್ಥಿತಿಗೆ ಒಂದು ಉದಾಹರಣೆ” ಎಂದು ಟ್ವೀಟ್ ಮಾಡಿದ್ದಾರೆ.