ಸ್ವಾತಂತ್ರ್ಯ ಹೋರಾಟಗಾರ, ಮಹಾತ್ಮ ಗಾಂಧಿ ಜಯಂತಿ ದಿನ “ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರೋಣ ಬನ್ನಿ ಸಹೋದರೇ” ಅಭಿಯಾನದೊಂದಿಗೆ ಹಾವೇರಿ ಪಟ್ಟಣದ ಗಾಂಧಿ ವೃತ್ತದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಆಯೋಜಿಸಿದ ಕಾರ್ಯಕ್ರಮದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಮಾತನಾಡಿದರು.
“ಕೇವಲ ದೊಡ್ಡವರ ತಲೆಯಲ್ಲಿ ಗಾಂಧಿ ಇದ್ದರೆ ಸಾಲದು, ಮಕ್ಕಳ ಮನಸ್ಸಿನಲ್ಲಿ ಗಾಂಧಿಯನ್ನು ತುಂಬಬೇಕಾಗಿದೆ. ಆ ಕಾರ್ಯವನ್ನು ಎಸ್ಎಫ್ಐ ಸಂಘಟನೆ ಮಾಡುತ್ತಿರುವುದು ಶ್ಲಾಘನೀಯ. ಸರಳ ಜೀವನ, ಸಹಜ ಜೀವನ ನಡೆಸಲು ಗಾಂಧಿ ಆದರ್ಶವಾಗಿದ್ದಾರೆ” ಎಂದು ಹೇಳಿದರು.
ಸಾಹಿತ್ಯ ಕಲಾವಿದ ಬಳಗದ ಅಂಬಿಕಾ ಹಂಚಾಟೆ ಮಾತನಾಡಿ, “ಗಾಂಧಿಯ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಮಕ್ಕಳೆಲ್ಲ ಗಾಂಧಿಯ ಮಾರ್ಗದಲ್ಲಿ ನಡೆಯಲಿ, ಮಾತನಾಡುವಂತಾಗಲಿ” ಎಂದು ಸಲಹೆ ನೀಡಿದರು.
ನಿವೃತ್ತ ಯೋಧ ಚಂದ್ರಶೇಖರ್ ಶಿಸುನಹಳ್ಳಿ ಮಾತನಾಡಿ, “ಗಾಂಧಿ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಚಿರಪರಿಚಿತ ಆಗಿದ್ದಾರೆ. ಜಗತ್ತನ್ನೇ ಒಂದುಗೂಡಿಸಲು ಪ್ರಯತ್ನಿಸಿದರು. ಸೌತ್ ಆಫ್ರಿಕಾ ಸ್ವಾತಂತ್ರ್ಯಗೊಳಲು ಶ್ರಮಿಸಿದರು” ಎಂದರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಮಕ್ಕಳು ತಮ್ಮ ಮುಂದಿನ ಭಾರತದ ಭವಿಷ್ಯಕ್ಕಾಗಿ ಗಾಂಧಿ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಸತ್ಯದ ದಾರಿಯೆಡೆಗೆ ವಿದ್ಯಾರ್ಥಿ-ಯುವಜನರನ್ನು ಕರೆದುಕೊಂಡು ಹೋಗಲು ಮುಂದಾಗಬೇಕು” ಎಂದು ಹೇಳಿದರು.
ಬಾಲಸಂಘಂ ಮಕ್ಕಳು ಗಾಂಧಿಯ ಮುಖವಾಡ ಧರಿಸಿಕೊಂಡು ಘೋಷಣೆಗಳನ್ನು ಕೂಗಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಶಿಕ್ಷಕರ ಪರಿಶ್ರಮ ವಿದ್ಯಾರ್ಥಿಗಳ ಏಳಿಗೆಯಲ್ಲಿ ಅಡಗಿದೆ : ನಾಗೇಶ ಸ್ವಾಮಿ
ಈ ಸಂದರ್ಭದಲ್ಲಿ ಡಿವೈಎಫ್ಐ ಸಂಚಾಲಕ ನಾರಾಯಣ ಕಾಳೆ, ಪ್ರಗತಿಪರ ಚಿಂತಕಿ ಪರಿಮಳ ಜೈನ್, ಪೃಥ್ವಿರಾಜ ಬೇಟಗೇರಿ, ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತೆ ಹಸೀನಾ ಹೆಡಿಯಾಲ, ಪುಟ್ಟಪ್ಪ ಹರವಿ, ಎಸ್ಎಫ್ಐ ಡಿವೈಎಫ್ಐ ಮುಖಂಡರಾದ ವಿಠಲ್ ಗೌಳಿ, ಸುಲೇಮಾನ್ ಮತ್ತಿಹಳ್ಳಿ, ಶೃತಿ ಆರ್ ಎಂ, ಮುತ್ತುರಾಜ್ ದೊಡ್ಡಮನಿ, ವಿಜಯ ಶಿರಹಟ್ಟಿ, ಮಹೇಶ್ ಮರೋಳ, ಕೃಷ್ಣಾ ನಾಯಕ್, ಅಣ್ಣಪ್ಪ ಕೊರವರ್, ನಿಖಿತಾ ಕಂಬಳಿ, ಫಾತೀಮಾ ಶೇಖ್, ಧನುಷ್ ದೊಡ್ಡಮನಿ, ದಾನೇಶ್ವರಿ, ಲಲಿತಾ ಬಿ ಸಿ, ರಕ್ಷಿತಾ ಡವಗಿ ಸೇರಿದಂತೆ ಅನೇಕರು ಇದ್ದರು.
