ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತ್ರ ಜಾತ್ಯಾತೀತ ನಾಯಕ ಹಾಗೂ ಹಿಂದುಳಿದ ವರ್ಗಗಳ ಶಕ್ತಿ ಆಗಿದ್ದಾರೆ ಎಂದು ಮಾಜಿ ಸಚಿವೆ, ವಿಪ ಸದಸ್ಯೆ ಡಾ. ಉಮಾಶ್ರೀ ಹೇಳಿದರು.
ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಜಿಎಲ್‌ಬಿಸಿ ಅತಿಥಿ ಗೃಹದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಮತ್ತು ಕುಟುಂಬ ಮತ್ತು ರಾಜಕೀಯ ಒಂದೇಯಲ್ಲ. ರಾಜಕೀಯ ಮಾಡದಿರುವ ಅವರ ಪತ್ನಿಯನ್ನು ರಾಜಕೀಯಕ್ಕೆ ಎಳೆತರುವುದು ವಿಪಕ್ಷಗಳ ವಿಕೃತ ಮನೋಭಾವ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತ್ರ ಜಾತ್ಯಾತೀತ ನಾಯಕ ಮತ್ತು ಹಿಂದುಳಿದ ವರ್ಗಗಳ ಶಕ್ತಿ ಆಗಿದ್ದಾರೆ. ಸಿದ್ಧರಾಮಯ್ಯನವರು ಎರಡೂ ವಿರೋಧ ಪಕ್ಷಗಳನ್ನು ಏಕಕಾಲಕ್ಕೆ ಎದುರಿಸುವ ಶಕ್ತಿ ಹೊಂದಿದ್ದು, ವಿರೋಧ ಪಕ್ಷಗಳು ಸಿದ್ದರಾಮಯ್ಯನವರ ಜನಪ್ರಿಯತೆ ಮತ್ತು ಶಕ್ತಿಯನ್ನು ಕುಗ್ಗಿಸಿ, ರಾಜಕೀಯವಾಗಿ ಮುಗಿಸುವ ಕುತಂತ್ರ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತಿಯ ಗೌರವಕ್ಕಿಂತ ಆಸ್ತಿ ದೊಡ್ಡದಲ್ಲ ಎಂದು ಪಾರ್ವತಮ್ಮ ಮುಡಾಗೆ ಸೈಟ್‌ಗಳನ್ನು ವಾಪಸ್ ಮಾಡಿದ್ದನ್ನು ಸ್ವಾಗತಿಸುತ್ತೇನೆ. ಆದರೆ ಅವರು ಕಳೆದಕೊಂಡ ಭೂಮಿಗೆ ಕಾನೂನು ಪ್ರಕಾರ ಸಂಬಂಧಿಸಿದಷ್ಟು ಸೈಟ್‌ಗಳನ್ನು ಕೊಡಬೇಕು. ಕಾಂಗ್ರೆಸ್ ಪಕ್ಷದ ವಿಪ ಸದಸ್ಯರು, ಸಚಿವರು, ಶಾಸಕರು, ಪಕ್ಷದ ಎಲ್ಲ ಬೆಂಬಲಿಗರು, ಅಭಿಮಾನಿಗಳು ಸೇರಿದಂತೆ ಎಲ್ಲರೂ ಧೀಮಂತ ನಾಯಕ ಸಿಎಂ ಪರ ನಿಲ್ಲುತ್ತೇವೆ ಎಂದರು.
ಇದನ್ನೂ ಓದಿ ಗಾಂಧಿ ಕನ್ನಡಕವನ್ನು ಬಳಸಿ ಗಾಂಧಿ ತತ್ವವನ್ನು ಗಾಳಿಗೆ ತೂರಿದವರು
ಮುಡಾ ಕೇಸ್‌ನಿಂದ ಅವರು ನ್ಯಾಯಾಲಯದಲ್ಲಿ ಆರೋಪ ಮುಕ್ತರಾಗುತ್ತಾರೆ. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆದಿದ್ದು, ಮುಡಾಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಡೆದ ಸೈಟ್ ಹಂಚಿಕೆಗಳ ಸಮಗ್ರ ತನಿಖೆ ನಡೆಯಲಿ. ಅದರಿಂದ ಎಲ್ಲಾ ಪಕ್ಷಗಳ ನಾಯಕರ ನಿಜವಾದ ಮುಖವಾಡ ರಾಜ್ಯಕ್ಕೆ ಗೊತ್ತಾಗುತ್ತದೆ ಎಂದರು.