ಆರು ವರ್ಷದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಾಲಾ ವ್ಯಾನ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆ ನಗರದಲ್ಲಿ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪುಣೆಯ ವಾನ್ವಾಡಿ ಪ್ರದೇಶದಲ್ಲಿ ಸೆಪ್ಟೆಂಬರ್ 30ರಂದು ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಅಂದು, ಶಾಲೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯರು, ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ವ್ಯಾನ್‌ನಲ್ಲಿ ವಿದ್ಯಾರ್ಥಿನಿಯರಿಗೆ ಚಾಲಕ ಲೈಂಗಿಕ ಕಿರುಕುಳ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
“ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿಯು ಸಂತ್ರಸ್ತ ಬಾಲಕಿಯರ ಖಾಸಗಿ ಭಾಗಗಳನ್ನು ಮುಟ್ಟಿದ್ದಾರೆಂದು ಹೇಳಲಾಗಿದೆ. ಘಟನೆ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ತನ್ನ ತಾಯಿಗೆ ತಿಳಿಸಿದ್ದು, ಅವರು ಶಾಲೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ” ಎಂದು ವಾನ್ವಾಡಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಶಾಲಾ ವ್ಯಾನ್ ಚಾಲಕ ಸಂಜಯ್ ರೆಡ್ಡಿ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 64 ಮತ್ತು 65(2) ಹಾಗೂ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀರು ತಿಳಿಸಿದ್ದಾರೆ.
ಆಗಸ್ಟ್‌ನಲ್ಲಿ, ಥಾಣೆ ಜಿಲ್ಲೆಯ ಬದ್ಲಾಪುರ್‌ನಲ್ಲಿರುವ ಶಾಲೆಯೊಂದರಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ, ನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಪ್ರಕರಣದಲ್ಲಿ ಆರೋಪಿ ಅಕ್ಷಯ್ ಶಿಂಧೆ ಎಂಬಾತನನ್ನು ಬಂಧಿಸಲಾಗಿತ್ತು. ಸೆಪ್ಟೆಂಬರ್ 23ರಂದು ಆತನನ್ನು ಎನ್‌ಕೌಂಟರ್‌ನಲ್ಲಿ ಪೊಲೀಸರು ಹತ್ಯೆಗೈದಿದ್ದಾರೆ. ಪೊಲೀಸರು ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿ ಅಕ್ಷಯ್‌ನ ಕುಟುಂಬ ಆರೋಪಿಸಿದೆ. ಎನ್‌ಕೌಂಟರ್ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ.